ಮಂಗಳವಾರ, ಡಿಸೆಂಬರ್ 7, 2021
19 °C
20220–21ನೇ ಸಾಲಿನಲ್ಲಿ 2.14 ಲಕ್ಷ ಕ್ವಿಂಟಲ್ ಅಡಿಕೆ ವಹಿವಾಟು

ಅಡಿಕೆ ವಹಿವಾಟು: ಟಿಎಸ್ಎಸ್‍ಗೆ ₹2.20 ಕೋಟಿ ನಿವ್ವಳ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಅಡಿಕೆ ಬೆಳೆಗಾರರ ಜೀವನಾಡಿ ಸಂಸ್ಥೆ ಎಂದೇ ಖ್ಯಾತಿ ಪಡೆದ ಇಲ್ಲಿನ ದಿ ತೋಟಗಾರ್ಸ್ ಕೋ–ಆಪರೇಟಿವ್ ಸೇಲ್ ಸೊಸೈಟಿ (ಟಿಎಸ್ಎಸ್) 20220–21ನೇ ಸಾಲಿನಲ್ಲಿ ಒಟ್ಟೂ ₹1,233 ಕೋಟಿ ವಹಿವಾಟು ನಡೆಸಿದ್ದು, ₹2.20 ಕೋಟಿ ನಿವ್ವಳ ಲಾಭ ಗಳಿಸಿದೆ.

98 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಸ್ಥೆ ಶತಮಾನೋತ್ಸವದತ್ತ ದಾಪುಗಾಲಿಡುತ್ತಿದೆ. ಈ ಬಾರಿ ಶೇರುದಾರ ಸದಸ್ಯರಿಗೆ ಶೇ.20 ಲಾಭಾಂಶ ಹಂಚಿಕೆ ಮಾಡಲು ಸಂಸ್ಥೆ ನಿರ್ಧರಿಸಿದೆ.

ಕಳೆದ ಸಾಲಿನಲ್ಲಿ ₹699 ಕೋಟಿ ಮೊತ್ತದ ಅಡಿಕೆ ವಹಿವಾಟು ನಡೆಸಲಾಗಿದ್ದು, 2.14 ಲಕ್ಷ ಕ್ವಿಂಟಲ್ ಅಡಿಕೆ ವ್ಯಾಪಾರವಾಗಿದೆ. ಸಿಹಿ ಅಡಿಕೆ ಪುಡಿ ವಿಭಾಗದಲ್ಲಿ ₹34 ಕೋಟಿ ವಹಿವಾಟು ನಡೆಸಲಾಗಿದ್ದು, 9,594 ಕ್ವಿಂಟಲ್ ಅಡಿಕೆ ವಿನಿಯೋಗಿಸಲಾಗಿದೆ. ಅಡಿಕೆ ಖರೀದಿ ವಿಭಾಗದಲ್ಲಿ 93,356 ಕ್ವಿಂಟಲ್ ಅಡಿಕೆ ಖರೀದಿಸಿ, ಸಂಸ್ಕರಿಸಿ ₹ 268 ಕೋಟಿ ವಹಿವಾಟು ನಡೆಸಲಾಗಿದೆ. ಈ ಮೂಲಕ ₹5.89 ಕೋಟಿ ಲಾಭ ಗಳಿಸಲಾಗಿದೆ.

ಸಂಘದ ಸುಪರ್ ಮಾರ್ಕೆಟ್‌ನ ಕಿರಾಣಿ ಹಾಗೂ ಕೃಷಿ ವಿಭಾಗದಲ್ಲಿ ₹209.13 ಕೋಟಿ ವಹಿವಾಟು ನಡೆಸಿ ₹11.80 ಕೋಟಿ ಲಾಭ ಗಳಿಸಲಾಗಿದೆ. ಸದಸ್ಯರ ಠೇವಣಿ ಮೊತ್ತ ₹250 ಕೋಟಿಗೆ ಏರಿಕೆಯಾಗಿದೆ. ವಿವಿಧ ಸಂಸ್ಥೆಗಳಲ್ಲಿ ಸಂಘದ ಸ್ವಂತ ಠೇವಣಿ ₹52.01 ಕೋಟಿಗೆ ಏರಿಕೆಯಾಗಿದೆ. ಸ್ವಂತ ಬಂಡವಾಳ ₹139 ಕೋಟಿಗೆ ಏರಿದೆ. ₹7.32 ಕೋಟಿ ದಲಾಲಿ ಮೊತ್ತ ಸಂಗ್ರಹವಾಗಿದೆ. ₹17.79 ಕೋಟಿ ವಿವಿಧ ನಿಧಿಗೆ ತೆಗೆದಿರಿಸಲಾಗಿದೆ.

₹7.03 ಕೋಟಿ ಮೌಲ್ಯದ ಧಾರಾ ಹಿಂಡಿ ವಹಿವಾಟು ನಡೆಸಲಾಗಿದೆ. ಸಂಸ್ಥೆ ಕಳೆದ ಸಾಲಿನಲ್ಲಿ ₹46.61 ಕೋಟಿ ತೆರಿಗೆ ಪಾವತಿಸಿದೆ.

ಸದಸ್ಯರಿಗೆ ₹255.88 ಕೋಟಿ ಸಾಲ ನೀಡಿದ್ದು, ಪ್ರಾಥಮಿಕ ಸಹಕಾರಿ ಸಂಘಗಳಿಗೆ ₹10.08  ಕೋಟಿ ಸಾಲ ನೀಡಲಾಗಿದೆ. ಖರೀದಿದಾರರಿಗೂ ₹130.65 ಕೋಟಿ ಉದ್ರಿ ನೀಡಿದ ಪರಿಣಾಮ ಅಡಿಕೆ ಮಾರುಕಟ್ಟೆ ಒಂದು ಸ್ಥಿರ ದರದಲ್ಲಿ ನಿಲ್ಲುವಂತಾಗಿದೆ.

ಸಿದ್ದಾಪುರ ಶಾಖೆಯಲ್ಲಿ 44 ಸಾವಿರ ಕ್ವಿಂಟಲ್, ಯಲ್ಲಾಪುರದಲ್ಲಿ 41 ಸಾವಿರ ಕ್ವಿಂಟಲ್ ಅಡಿಕೆ ವಹಿವಾಟು ನಡೆದಿದೆ. ಮುಂಡಗೋಡ ಶಾಖೆ ಹಾಗೂ ಶಿರಸಿಯಲ್ಲಿ 1,236 ಟನ್ ಜೋಳ ಖರೀದಿಸಲಾಗಿದೆ.

‘ವೈಯಕ್ತಿಕ ಲಾಭದ ಉದ್ದೇಶವಿಲ್ಲದೇ, ಸದಸ್ಯರ ಹಿತರಕ್ಷಣೆಯೇ ಪ್ರಧಾನ. ಅಡಿಕೆ ಬೆಳೆಗಾರರ ಬೆಳೆಗೆ ಉತ್ತಮ ದರ ಹಾಗೂ ಬೇಡಿಕೆ ಕಲ್ಪಿಸುವದು’ ಟಿಎಸ್ಎಸ್ ಧ್ಯೇಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು