ಮಂಗಳವಾರ, ಮೇ 18, 2021
23 °C
ಬೆಲೆ ಕಳೆದುಕೊಂಡಿರುವ ಉತ್ಪನ್ನ; ಹೊಸ ಬೆಳೆಯ ನಿರೀಕ್ಷೆಯೂ ಹುಸಿ

ಶಿರಸಿ: ಬತ್ತಿದ ವರದೆ, ಒಣಗಿದ ಬೆಳೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ತಾಲ್ಲೂಕಿನ ಬನವಾಸಿಯ ಜೀವನಾಡಿಯಾದ ವರದಾ ನದಿ ಬಿಸಿಲಿನ ಝಳಕ್ಕೆ ಬರಿದಾಗಿದೆ. ನದಿ ನೀರನ್ನು ಆಶ್ರಯಿಸಿ ಬೆಳೆದಿರುವ ಬೆಳೆಗಳು ಕಣ್ಣೆದುರೇ ಒಣಗುತ್ತಿರುವುದನ್ನು ಕಂಡ ರೈತ ಅಸಹಾಯಕನಾಗಿದ್ದಾನೆ.

ವರದಾ ನದಿ ಪಾತ್ರದ ಹಳ್ಳಿಗರು ಕೃಷಿಯಲ್ಲೇ ಬದುಕು ರೂಪಿಸಿಕೊಂಡವರು. ಮಳೆಯನ್ನು ನಂಬಿ ಮುಂಗಾರು ಬೆಳೆ ಬೆಳೆದರೆ, ನದಿ ನೀರನ್ನು ಅವಲಂಬಿಸಿ ಹಿಂಗಾರು ಬೆಳೆ ಬೆಳೆಯುತ್ತಾರೆ. ಈಗಾಗಲೇ ಗೋವಿನಜೋಳ, ಶುಂಠಿ, ಅನಾನಸ್, ಸೇಂಗಾ, ಕಲ್ಲಂಗಡಿಯಂತಹ ಅಲ್ಪಾವಧಿ ಬೆಳೆಗಳು, ಅಡಿಕೆ, ತೆಂಗಿನಂತಹ ದೀರ್ಘಾವಧಿ ಬೆಳೆಗಳು ನದಿಯಂಚಿನಲ್ಲಿವೆ. ಆದರೆ, ನದಿ ಬತ್ತಿರುವ ಕಾರಣ ಅಂದಾಜು 5000 ಹೆಕ್ಟೇರ್‌ ಪ್ರದೇಶದಲ್ಲಿರುವ ಈ ಬೆಳೆಗಳು ಬಾಡುತ್ತಿವೆ.

ತಿಗಣಿ ಸೇತುವೆ ಸಹಿತ ಬಾಂದಾರದ ಕೆಳಭಾಗದಲ್ಲಿ ಭರಪೂರ ನೀರಿದೆ. ಅಲ್ಲಿ ಜಡೆ, ಬಂಕನಾಳದವರೆಗೂ ನೀರು ನಿಂತಿದೆ. ಆದರೆ, ಬಾಂದಾರದ ಮೇಲ್ಭಾಗದಲ್ಲಿ ನದಿ ಮೇಲ್ಮೈ ಅಸ್ಥಿಪಂಜರದಂತಾಗಿದೆ. ಬಾಂದಾರದ ಮೇಲ್ಭಾಗದಿಂದ ಭಾಶಿಯವರೆಗೂ ಹನಿ ನೀರು ಸಿಗದು. ಹೀಗಾಗಿ, ರೈತರು ಬೆಳೆದ ಬೆಳೆಗಳು ಈ ಬಾರಿ ಕೈಗೆ ಸಿಗುವುದು ಅನುಮಾನ. ಬಾಂದಾರದ ಗೇಟ್ ಹಾಕಲು ತಡವಾದ ಪರಿಣಾಮ ರೈತರಿಗೆ ದೊಡ್ಡ ನಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು.

‘ಅಲ್ಲಲ್ಲಿ ಸಣ್ಣ ಗುಂಡಿಗಳಲ್ಲಿ ಕೊಂಚ ನೀರು ನಿಲ್ಲುತ್ತದೆ. ಪಂಪ್‌ಸೆಟ್ ಹಾಕಿ ಗದ್ದೆಯ ಹಾಯಿಸೋಣವೆಂದರೆ, ವಿದ್ಯುತ್ ಪೂರೈಕೆಯೇ ಸರಿಯಾಗಿರುವುದಿಲ್ಲ. ಲೋ ವೋಲ್ಟೇಜ್ ಕಾರಣಕ್ಕೆ ಪಂಪ್‌ಸೆಟ್ ಚಾಲು ಮಾಡುವುದು ಕಷ್ಟ. ಬನವಾಸಿ ಭಾಗದ ಈ ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ಹತಾಶರಾಗಿ ಹೇಳಿದರು ರೈತ ಗುತ್ಯಪ್ಪ.

ಮಳೆಗಾಲದಲ್ಲಿ ಸುತ್ತಲಿನ ಕೃಷಿಭೂಮಿಯನ್ನು ಆವರಿಸಿ, ಪ್ರವಾಹ ಸೃಷ್ಟಿಸುವ ವರದೆ, ಪ್ರತಿ ವರ್ಷ ಮಾರ್ಚ್ ಹೊತ್ತಿಗೆ ತನ್ನ ಒಡಲನ್ನು ಬರಿದು ಮಾಡಿಕೊಳ್ಳುತ್ತಾಳೆ. ಇದರಿಂದ ಕೃಷಿಗೆ ಆಗುವ ತೊಂದರೆ ತಪ್ಪಿಸಲು, ಸ್ಥಳೀಯ ಶಾಸಕರೂ ಆಗಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿಶೇಷ ಆಸಕ್ತಿಯಿಂದ ತಿಗಣಿಯಲ್ಲಿ ಬಾಂದಾರ ನಿರ್ಮಾಣವಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ನೀರು ಇಲ್ಲದಂತಾಗಿದೆ ಎಂದು ಅವರು ದೂರಿದರು.

ನದಿಯಲ್ಲಿ ನೀರಿಲ್ಲದ ಪರಿಣಾಮ ಅಂತರ್ಜಲ ಮಟ್ಟ ಕುಸಿದಿದೆ. ಸುತ್ತಲಿನ ಕೆರೆ, ಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಅಂದಾಜಿನ ಪ್ರಕಾರ ಇಲ್ಲಿರುವ 1150ಕ್ಕೂ ಹೆಚ್ಚಿನ ಪಂಪ್‌ಸೆಂಟ್‌ಗಳಲ್ಲಿ 800ಕ್ಕೂ ಹೆಚ್ಚು ಪಂಪ್‌ಸೆಟ್‌ಗಳು ನೀರಿಲ್ಲದ ಕಾರಣ ಕಾರ್ಯ ಸ್ಥಗಿತಗೊಳಿಸಿವೆ. ನದಿಯ ಒಡಲಲ್ಲಿ ಮರಳು ಗಣಿಗಾರಿಕೆಯಿಂದಾಗಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಇದು ಕೂಡ ನದಿಯ ಹರಿವು, ನದಿ ಪಥಕ್ಕೆ ಧಕ್ಕೆ ತಂದಿದೆ ಎನ್ನುತ್ತಾರೆ ಸ್ಥಳೀಯ ರೈತರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು