ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ವಸತಿ ಯೋಜನೆಗೆ ‘ನಿವೇಶನ’ ಗ್ರಹಣ

ಶಿರಸಿ: ಸ್ವಂತ ಸೂರಿನ ಕನಸಿನಲ್ಲಿ ದಿನದೂಡುವ ವಸತಿ ರಹಿತರು
Last Updated 5 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ಬಡವರಿಗೆ ಸೂರು ಕಲ್ಪಿಸಿಕೊಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅನುದಾನ ನೀಡುತ್ತಿದ್ದರೂ ನಗರ ವ್ಯಾಪ್ತಿಯ ನೂರಾರು ವಸತಿ ರಹಿತರ ಸ್ವಂತ ಸೂರಿನ ಕನಸು ‘ನಿವೇಶನ ಕೊರತೆ’ಯ ಕಾರಣಕ್ಕೆ ನನಸಾಗಿಲ್ಲ.

ನಗರ ವ್ಯಾಪ್ತಿಯ ಬಡವರಿಗೆ ಮನೆ ನಿರ್ಮಿಸಲು 2015–16ರಲ್ಲಿ ವಾಜಪೇಯಿ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಪರಿಶಿಷ್ಟ ವರ್ಗದವರಿಗೆ ಅಂಬೇಡ್ಕರ್ ವಸತಿ ಯೋಜನೆ ಅಡಿ ಮತ್ತು ಉಳಿದ ವರ್ಗದ ಜನರಿಗೆ ವಾಜಪೇಯಿ ವಸತಿ ಯೋಜನೆ ಅಡಿ ಮನೆ ನಿರ್ಮಾಣಕ್ಕೆ ಧನ ಸಹಾಯ ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು.

ನಗರ ವಸತಿ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಪಾಲು ನೀಡುತ್ತಿದ್ದು, ವಾಜಪೇಯಿ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿ ತಲಾ ₹ 1.50 ಲಕ್ಷವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ರಾಜ್ಯ ಸರ್ಕಾರ ವಾಜಪೇಯಿ ವಸತಿ ಯೋಜನೆಗೆ ₹ 1.20 ಲಕ್ಷ ಮತ್ತು ಅಂಬೇಡ್ಕರ ವಸತಿ ಯೋಜನೆ ಫಲಾನುಭವಿಗೆ ₹ 2 ಲಕ್ಷ ಆರ್ಥಿಕ ಸಹಾಯ ಒದಗಿಸುತ್ತಿದೆ.

ಆದರೆ, ಈ ಯೋಜನೆಯ ಅಡಿ ಶಿರಸಿ ನಗರ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 217 ಮಂದಿ ಮಾತ್ರ ಸೌಲಭ್ಯ ಪಡೆದುಕೊಂಡಿದ್ದಾರೆ. ಯೋಜನೆಗೆ ಮಂಜೂರಾತಿ ಪಡೆಯಲು ಅರ್ಜಿ ಸಲ್ಲಿಸಿದ ಸಾವಿರಾರು ಜನರು ಮನೆ ಮಂಜೂರಾಗುವ ನಿರೀಕ್ಷೆಯಲ್ಲಿ ವರ್ಷಗಳಿಂದ ಕಾಯುತ್ತಿದ್ದಾರೆ.

‘ವಸತಿ ಯೋಜನೆ ನಿಯಮಾವಳಿ ಪ್ರಕಾರ ಮನೆ ಮಂಜೂರಾತಿಗೆ ಅರ್ಜಿದಾರ ಸ್ವಂತ ಭೂಮಿ ಹೊಂದಿರಬೇಕು ಎಂಬ ನಿಯಮಾವಳಿ ಇದೆ. ನಗರಸಭೆ ನಡೆಸಿದ ಸಮೀಕ್ಷೆ ವೇಳೆ ಸಾವಿರಕ್ಕೂ ಹೆಚ್ಚು ಜನರು ನಿವೇಶನ ಹೊಂದಿಲ್ಲ. ಇದರಿಂದಾಗಿ ಮನೆ ಮಂಜೂರು ಮಾಡಲು ಅಡ್ಡಿಯಾಗಿದೆ’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಕೇಶವ ಚೌಗುಲೆ.

‘ಸರ್ಕಾರದ ಸೂಚನೆ ಮೇರೆಗೆ ವಸತಿ ರಹಿತರ ಸಮೀಕ್ಷೆ ನಡೆಸಿದ ವೇಳೆ 1,290 ಕುಟುಂಬಗಳು ಸ್ವಂತ ಮನೆ, ನಿವೇಶನ ಹೊಂದಿಲ್ಲದಿರುವುದು ಪತ್ತೆಯಾಗಿದೆ. ವಸತಿ ಯೋಜನೆ ಸೌಲಭ್ಯ ಕಲ್ಪಿಸುವ ಸಂಬಂಧ ವಸತಿ ಸಂಕೀರ್ಣ ನಿರ್ಮಿಸಿ ಸೂರು ಒದಗಿಸಲು ಜಾಗ ಹುಡುಕಾಟ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಜಾಗದ ಸಮಸ್ಯೆ:ನಗರ ವಸತಿ ಯೋಜನೆ ಅಡಿ ಶಿರಸಿ ನಗರದಲ್ಲಿ ಮನೆಗಳ ಮಂಜೂರಾತಿಗೆ ಸರ್ಕಾರದ ಕಠಿಣ ನಿಯಮಾವಳಿ ಅಡ್ಡಿಯಾಗುತ್ತಿದೆ ಎಂಬ ಆಕ್ಷೇಪಗಳಿವೆ. ಸಂಪೂರ್ಣ ವಸತಿ ರಹಿತರಿಗೆ ಜಿ ಪ್ಲಸ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ಮನೆ ನಿರ್ಮಿಸಿಕೊಡಲು ಜಾಗದ ಲಭ್ಯತೆ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ. ಈ ಹಿಂದೆಯೂ ನಗರದ ಹೊರವಲಯದಲ್ಲಿ ಗುರುತಿಸಲಾಗಿದ್ದ ನಿವೇಶನಕ್ಕೆ ವಿರೋಧ ವ್ಯಕ್ತವಾಗಿತ್ತು.

*
ಸರಕಾರದ ವಸತಿ ಯೋಜನೆ ಅಡಿ ಬಡವರಿಗೆ ಮನೆ ನೀಡುವ ಸಂಬಂಧ ವಸತಿ ಸಂಕೀರ್ಣ ನಿರ್ಮಿಸಲು ಸೂಕ್ತ ಜಾಗ ಹುಡುಕಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT