ಶನಿವಾರ, ಸೆಪ್ಟೆಂಬರ್ 18, 2021
21 °C

ಗ್ರಹಣ: ಗೋಕರ್ಣ ಸಮುದ್ರ ದಂಡೆಯಲ್ಲಿ ಪಿತೃಗಳಿಗೆ ತಿಲ ತರ್ಪಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಖಂಡಗ್ರಾಸ ಸೂರ್ಯಗ್ರಹಣವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಮಳೆಯೂ ಅನುಕೂಲ ಮಾಡಿಕೊಟ್ಟ ಕಾರಣ ಇಲ್ಲಿಯ ಮೇನ್ ಬೀಚ್‌ನಲ್ಲಿ ಸ್ಥಳೀಯರೂ ಸೇರಿದಂತೆ ನೂರಾರು ಜನರು ಗ್ರಹಣದ ಸಮಯದಲ್ಲಿ ಸಮುದ್ರ ಸ್ನಾನ ಮಾಡಿದರು.

ಸಮುದ್ರ ರಾಜನ ಪೂಜೆ, ಪಿತೃಗಳಿಗೆ ತಿಲ ತರ್ಪಣ, ಸಮುದ್ರ ದಂಡೆಯಲ್ಲಿ ಕುಳಿತ ಪುರೋಹಿತರಿಗೆ ದಾನ ಧರ್ಮ ಮಾಡುವ ಆಚರಣೆನ್ನು ಪಾಲಿಸಿದರು. ಕೋವಿಡ್ ಕಾರಣದಿಂದ ನಾಡಿನ ಹಾಗೂ ಬೇರೆ ರಾಜ್ಯಗಳಿಂದ ಗ್ರಹಣ ಆಚರಣೆಗೆ ಬಂದವರ ಸಂಖ್ಯೆ ಬಹಳ ಕಡಿಮೆ ಇತ್ತು. 

ಮಹಾಗಣಪತಿ, ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲು ಭಕ್ತರಿಗೆ ಅನುಮತಿ ನಿರಾಕರಿಸಲಾಗಿತ್ತು. ದರ್ಶನ ಪಡೆಯಲು ಮಾತ್ರ ಅವಕಾಶ ನೀಡಲಾಗಿತ್ತು. ಅನೇಕ ಜನ ಸಮುದ್ರ ದಂಡೆಯ ಮೇಲೆ ಕುಳಿತು ಗ್ರಹಣ ಬಿಡುವ ತನಕ ಜಪ, ಧ್ಯಾನ ಮಾಡಿದ್ದು ಕಂಡುಬಂತು. ಗ್ರಹಣವು ಭಾನುವಾರ ಆದ ಕಾರಣ ‘ಚೂಡಾಮಣಿ’ ಎಂದೂ ಕರೆಯಲಾಗುತ್ತದೆ ಎಂದು ಧಾರ್ಮಿಕ ಮುಖಂಡರು ತಿಳಿಸಿದರು.

ಲಾಕ್‌ಡೌನ್‌ನಿಂದಾಗಿ ಗೋಕರ್ಣದಲ್ಲಿಯೇ ಇರುವ ಅನೇಕ ವಿದೇಶಿ ಪ್ರವಾಸಿಗರು, ಗ್ರಹಣದ ಆಚರಣೆಯಲ್ಲಿ ತೊಡಗಿಕೊಂಡರು. ಸ್ಥಳೀಯರಂತೆ ಸಮುದ್ರ ಸ್ನಾನ ಮಾಡಿ ಜಪ, ಧ್ಯಾನ ಮಾಡಿದರು. 

‘ಗ್ರಹಣದ ಸಮಯದಲ್ಲಿ ಪವಿತ್ರ ಗೋಕರ್ಣ ಕ್ಷೇತ್ರದಲ್ಲಿ ಇರುವುದು ನಮ್ಮ ಭಾಗ್ಯ. ನಾವು ಸಹ ಇಲ್ಲಿಯ ಜನರ ಹಾಗೇ ಗ್ರಹಣ ಆಚರಣೆ ಮಾಡಿ ಮನಸ್ಸಿಗೆ ಶಾಂತಿ, ನೆಮ್ಮದಿ ಪಡೆಯುತ್ತೇವೆ’ ಎಂದು ರಷ್ಯನ್ ಮಹಿಳೆ ಮಾರಿಯಾ ನುಡಿದರು. 

ಸಮುದ್ರದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಪೊಲೀಸರ ಕಾವಲು ಹಾಕಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು