ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹೆಚ್ಚಿನ ಪರಿಹಾರಕ್ಕೆ ವಿಶೇಷ ಪ್ರಸ್ತಾವ; ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಮತ್ತಿಘಟ್ಟ, ರೇವಣಕಟ್ಟಾದಲ್ಲಿ ಮಳೆಹಾನಿ ವೀಕ್ಷಿಸಿದ ಜಿಲ್ಲಾಧಿಕಾರಿ
Last Updated 3 ಆಗಸ್ಟ್ 2021, 15:19 IST
ಅಕ್ಷರ ಗಾತ್ರ

ಶಿರಸಿ: ಮಳೆಯಿಂದ ಈ ಬಾರಿ ಜಿಲ್ಲೆಯಲ್ಲಿ ವ್ಯಾಪಕ ಹಾನಿ ಉಂಟಾಗಿದ್ದು, ಹೆಚ್ಚಿನ ಪರಿಹಾರಕ್ಕೆ ಸರ್ಕಾರಕ್ಕೆ ವಿಶೇಷ ಪ್ರಸ್ತಾವ ಸಲ್ಲಿಸಲಾಗುವುದ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ತಾಲ್ಲೂಕಿನ ಮತ್ತಿಘಟ್ಟ, ಮಾಡಮನೆ, ಕೆಳಗಿನಕೇರಿ, ರೇವಣಕಟ್ಟಾದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಯನ್ನು ಮಂಗಳವಾರ ಪರಿಶೀಲಿಸಿದ ಅವರು, ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.

‘ಹಾನಿಯಾದ ಬೆಳೆಗೆ ಈಗಾಗೆಲ ಪರಿಹಾರ ವಿತರಿಸಲಾಗುತ್ತಿದೆ. ರೈತರು ಕಳೆದುಕೊಂಡಿರುವ ಕೃಷಿಭೂಮಿಗೆ ನೀಡುವ ಪರಿಹಾರ ಸಾಲದು ಎಂಬ ದೂರು ಬಂದಿದೆ. ಹೀಗಾಗಿ ಅವುಗಳಿಗೆ ವಿಶೇಷ ಪರಿಹಾರಕ್ಕೆ ಸರ್ಕಾರದ ಮುಂದೆ ಬೇಡಿಕೆ ಇಡಲಾಗುತ್ತಿದೆ’ ಎಂದರು.

‘ಮುಂಗಾರು ಅವಧಿಯಲ್ಲಿ ಉತ್ತರ ಕನ್ನಡದಲ್ಲಿ ರಸ್ತೆ ಸಂಪರ್ಕ ಕಡಿತಗೊಳ್ಳುವದು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ದೊಡ್ಡ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಪ್ರಮುಖ ಮಾರ್ಗಗಳಲ್ಲಿ ಸಂಚಾರ ಕಷ್ಟವಾಗಿದೆ. ಅದನ್ನು ಸರಿಪಡಿಸಲು ತುರ್ತು ಕ್ರಮವಹಿಸಲಾಗುತ್ತಿದೆ’ ಎಂದರು.

‘ಗ್ರಾಮೀಣ ಭಾಗದ ರಸ್ತೆಗಳನ್ನು ತುರ್ತು ದುರಸ್ಥಿಪಡಿಸಲು ಲೋಕೋಪಯೋಗಿ ಇಲಾಖೆ, ಪಂಚಾಯತರಾಜ್ ಎಂಜಿನಿಯರಿಂಗ್ ಇಲಾಖೆಗೆ ಸೂಚಿಸಲಾಗಿದೆ. ಹಂತ ಹಂತವಾಗಿ ರಸ್ತೆ ಸುಧಾರಣೆಗೊಳಿಸಲು ನರೇಗಾ, ಗ್ರಾಮ ಪಂಚಾಯ್ತಿ ಹಣಕಾಸು ಅನುದಾನ ಬಳಕೆಗೆ ನಿರ್ಧರಿಸಲಾಗುವುದು’ ಎಂದರು.

ಮಳೆಗೆ ಕುಸಿದ ಕೆಳಗಿನಕೇರಿಯ ಚಂದ್ರಶೇಖರ ಹೆಗಡೆ ಅವರ ಅಡಿಕೆ ತೋಟವನ್ನು ಜಿಲ್ಲಾಧಿಕಾರಿ ವೀಕ್ಷಿಸಿದರು. ರೇವಣಕಟ್ಟಾ ಗ್ರಾಮದಲ್ಲಿ ಕುಸಿದು ಬಿದ್ದ ಮನೆಗಳನ್ನು ಪರಿಶೀಲಿಸಿದರು. ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಸಿದ್ಧಿ ಸಮುದಾಯದವರು ಹೆಚ್ಚಿರುವ ಮಾಡಮನೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸುಧಾರಣೆಗೊಳಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದರು. ಸಂಪೂರ್ಣ ನಾಶವಾಗಿರುವ ತೋಟಕ್ಕೆ ಪರ್ಯಾಯ ಭೂಮಿ ಒದಗಿಸುವಂತೆ ಕೆಳಗಿನಕೇರಿಯ ಮಧುಸೂದನ ಹೆಗಡೆ, ಚಂದ್ರಶೇಖರ ಹೆಗಡೆ ಮನವಿ ಸಲ್ಲಿಸಿದರು.

ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಇಒ ಎಫ್.ಜಿ.ಚೆನ್ನಣ್ಣನವರ್, ದೇವನಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಧುಮತಿ ನಾಯ್ಕ, ಸದಸ್ಯರಾದ ಜಯಭಾರತಿ ಭಟ್ಟ, ನಾರಾಯಣ ಹೆಗಡೆ, ಪ್ರಮುಖರಾದ ಗೋಪಾಲಕೃಷ್ಣ ವೈದ್ಯ, ಪಿಡಿಒ ಮಾಧವಿ ಕಾಮತ, ಮಮತಾ ಗುಡ್ಡದಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT