ಭಾನುವಾರ, ಆಗಸ್ಟ್ 14, 2022
20 °C
ಗಣರಾಜ್ಯೋತ್ಸವದ ಧ್ವಜಾರೋಹಣ

ಕಾರ್ಮಿಕರ ಮಕ್ಕಳಿಗೆ ಕಂಪ್ಯೂಟರ್: ಸಚಿವ ಶಿವರಾಮ ಹೆಬ್ಬಾರ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ರಾಜ್ಯದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ವಿತರಿಸಲು ಚಿಂತಿಸಲಾಗಿದೆ. ಇದು ಸರ್ಕಾರದ ಮಟ್ಟದಲ್ಲಿ ಪರಿಶೀಲನೆಯ ಹಂತದಲ್ಲಿದೆ’ ಎಂದು ಕಾರ್ಮಿಕ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಮಂಗಳವಾರ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ಉಚಿತ ಬಸ್‍ಪಾಸ್ ನೀಡುವ ಬಗ್ಗೆ ವಿವರಗಳನ್ನು ಸಾರಿಗೆ ಇಲಾಖೆಗೆ ಈಗಾಗಲೇ ಕಳುಹಿಸಲಾಗಿದೆ. ಸರ್ಕಾರದ ಆದೇಶದಂತೆ ಇಲಾಖೆಯಲ್ಲಿ ಅವರ ನೋಂದಣಿ ಹಾಗೂ ನವೀಕರಣ ಮಾಡಿಸುವಾಗ ಭರಿಸುವ ಶುಲ್ಕವನ್ನು ಮುಕ್ತಗೊಳಿಸಲಾಗುತ್ತದೆ. ಉಚಿತವಾಗಿ ಕಾರ್ಮಿಕರ ನೋಂದಣಿ ಹಾಗೂ ನವೀಕರಣ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಅಸಂಘಟಿತ ವಲಯದವರ ಸಾಮಾಜಿಕ ಭದ್ರತಾ ಮಂಡಳಿಯಿಂದ ಖಾಸಗಿ ವಾಣಿಜ್ಯ ವಾಹನ ಚಾಲಕರಿಗೆ ಅಪಘಾತ ವಿಮೆ ಜಾರಿ ಮಾಡಲಾಗಿದೆ. ಜಿಲ್ಲೆಯಲ್ಲಿ ನಾಮ ನಿರ್ದೇಶನಗೊಂಡ 18 ಕಾರ್ಮಿಕರಿಗೆ ₹ 55.52 ಲಕ್ಷವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ’ ಎಂದೂ ಹೇಳಿದರು.

ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ‘ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ’ ಯೋಜನೆಯಡಿ ಉತ್ತಮ ಕಾರ್ಯ ನಿರ್ವಹಿಸಿದ ನಾಲ್ಕು ಆಸ್ಪತ್ರೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್), ಶಿರಸಿಯ ಪಂಡಿತ್ ಆಸ್ಪತ್ರೆ, ಶಿರಸಿಯ ಟಿ.ಎಸ್.ಎಸ್ ಶ್ರೀಪಾದ ಕಡವೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಹೊನ್ನಾವರದ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳ ಪ್ರಮುಖರು ಪ್ರಮಾಣ ಪತ್ರ ಪಡೆದುಕೊಂಡರು.

ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ವ್ಯವಸ್ಥಿತವಾಗಿ ಮಾಡಿದ ಹಳಿಯಾಳ, ಅಂಕೋಲಾ ಪುರಸಭೆಗಳು ಹಾಗೂ ಶಿರಸಿ ನಗರಸಭೆಯ ಪೌರಾಯುಕ್ತರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಮಿಕ ಇಲಾಖೆಯಡಿ ಸರ್ಕಾರದಿಂದ ಮಂಜೂರಾದ ವಿವಿಧ ಸೌಲಭ್ಯಗಳ ಪರಿಹಾರ ಧನ ಹಾಗೂ ಸಹಾಯ ಧನವನ್ನು ಫಲಾನುಭವಿಗಳಿಗೆ ನೀಡಲಾಯಿತು.

ಕಾರವಾರ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್ ಪರೇಡ್ ಕಮಾಂಡರ್ ಫಕೀರಪ್ಪ ಡೊಕ್ಕಣ್ಣವರ್ ನೇತೃತ್ವದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಾಗರಿಕ ಪೊಲೀಸ್ ತುಕಡಿ, ಅರಣ್ಯ ಇಲಾಖೆ, ಚೆಂಡಿಯಾ ಘಟಕದ ಗೃಹ ರಕ್ಷಕ ದಳ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಎಂಟನೇ ಕರ್ನಾಟಕ ನೇವಲ್ ಯುನಿಟ್ ಹಾಗೂ 29ನೇ ಕರ್ನಾಟಕ ಬೆಟಾಲಿಯನ್ ತಂಡದವರು ಪಥ ಸಂಚಲನ ನಡೆಸಿಕೊಟ್ಟರು.

ಕಾರ್ಮಿಕ ಭವನ: ‘ಪ್ರತಿ ತಾಲ್ಲೂಕಿನಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಸಚಿವ ಶಿವರಾಮ ಹೆಬ್ಬಾರ ತಿಳಿಸಿದರು.

ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಕೋಲಾ ತಾಲ್ಲೂಕಿನ ಅಲಗೇರಿಯಲ್ಲಿ ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಆರಂಭವಾಗಲಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ವೇದಿಕೆಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು