ಶನಿವಾರ, ಜನವರಿ 18, 2020
21 °C
ಜೊಯಿಡಾದಲ್ಲಿ ಸಾರ್ವಜನಿಕರಿಗೆ ನಿತ್ಯವೂ ತೊಂದರೆ: ಸಣ್ಣಪುಟ್ಟ ಅಪಘಾತಗಳಿಗೆ ಆಹ್ವಾನ

ಜೊಯಿಡಾ: ಬೀದಿ ನಾಯಿ, ಬೀಡಾಡಿ ದನಗಳ ಸಾಮ್ರಾಜ್ಯ!

ಜ್ಞಾನೇಶ್ವರ ದೇಸಾಯಿ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ದಿನೇ ದಿನೇ ಬೆಳೆಯುತ್ತಿರುವ ಜೊಯಿಡಾ ತಾಲ್ಲೂಕು ಕೇಂದ್ರದಲ್ಲಿ ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. ವಾಹನ ಸವಾರರು, ಪಾದಚಾರಿಗಳು, ಶಾಲಾ ಕಾಲೇಜುಗಳ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಇವುಗಳ ಹಾವಳಿ ನಿಯಂತ್ರಿಸಲು ಗ್ರಾಮ ಪಂಚಾಯ್ತಿ ತುರ್ತು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಗ್ರಾಮ ಪಂಚಾಯ್ತಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಹೊಂದಿರುವ ರಾಜ್ಯದ ಏಕೈಕ ತಾಲ್ಲೂಕು ಜೊಯಿಡಾ. ಇಲ್ಲಿ ಪಾಲಿಟೆಕ್ನಿಕ್, ಸರ್ಕಾರಿ ಪದವಿ ಕಾಲೇಜು, ಅನುದಾನಿತ ಪಿ.ಯು ಕಾಲೇಜು, ಮೂರು ಪ್ರೌಢ ಶಾಲೆಗಳಿವೆ. ಎಲ್ಲ ತಾಲ್ಲೂಕು ಕಚೇರಿಗಳು ಇಲ್ಲೇ ಇವೆ. ಮಿನಿ ವಿಧಾನಸೌಧದ ಕಾಮಗಾರಿಯ ಜೊತೆಗೆ ಹಲವು ಸರ್ಕಾರಿ ಕಟ್ಟಡಗಳ ಕಾಮಗಾರಿಗಳು ನಡೆಯುತ್ತಿವೆ. ಡಿಗ್ಗಿ, ಬಜಾರಕುಣಂಗ ಹಾಗೂ ಅಣಶಿ ಭಾಗದ ಹಲವು ಗ್ರಾಮಸ್ಥರು ಶಿಕ್ಷಣ ಹಾಗೂ ಇನ್ನಿತರ ಕಾರಣಕ್ಕಾಗಿ ಜೊಯಿಡಾದಲ್ಲಿ ಮನೆ ಮಾಡುತ್ತಿದ್ದಾರೆ. 

ಜೊಯಿಡಾದಲ್ಲಿ ಜನವಸತಿ ಬೆಳೆಯುತ್ತಿರುವ ಕಾರಣ ಸಂಚಾರ ದಟ್ಟಣೆಯೂ ವೇಗವಾಗಿ ಹೆಚ್ಚುತ್ತಿದೆ. ಜೊತೆಗೆ ಜೊಯಿಡಾ ಕೇಂದ್ರ ಸ್ಥಾನದಿಂದಲೇ ಸದಾಶಿವಗಡ– ಬೆಳಗಾವಿ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಧಾರವಾಡ– ಉಳವಿ ಮಾರ್ಗವೂ ಇಲ್ಲೇ ಆಗಿದೆ. ಹಬ್ಬ ಹರಿದಿನಗಳಲ್ಲಿ, ಇನ್ನಿತರ ಸಾರ್ವಜನಿಕ ಕಾರ್ಯಕ್ರಮಗಳಿದ್ದಾಗ ಮತ್ತು ವಾರದ ಸಂತೆಯ ದಿನ ವಾಹನ ದಟ್ಟಣೆ ಗಣನೀಯವಾಗಿ ಏರುತ್ತಿದೆ. ಇವುಗಳ ಮಧ್ಯೆ ಬೀಡಾಡಿ ದನಗಳು ಹಾಗೂ ಬೀದಿ ನಾಯಿಗಳ ಹಾವಳಿ ಮಿತಿಮೀರಿ ಜನರಿಗೆ ತೊಂದರೆ ಇಮ್ಮಡಿಯಾಗುತ್ತಿದೆ.

ನಿರಂತರವಾಗಿ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮಲಗುವ ಜಾನುವಾರು, ಜೊಯಿಡಾದಲ್ಲಿ ‘ನಾಡ ಹುಲಿ’ಗಳಂತೆ ಅಬ್ಬರಿಸುವ ಬೀದಿ ನಾಯಿಗಳನ್ನು ನಿಯಂತ್ರಿಸುವುದು ಅತ್ಯಗತ್ಯ ಎಂಬುದು ಸ್ಥಳೀಯರ ಒತ್ತಾಯವಾಗಿದೆ. 

ಪಶು ಸಂಗೋಪನಾ ಇಲಾಖೆಯ ಮಾಹಿತಿ ಪ್ರಕಾರ ಜೊಯಿಡಾದಲ್ಲಿ ಕೇವಲ 23 ಹೆಣ್ಣು ಮತ್ತು 30 ಗಂಡು ಸಾಕು ನಾಯಿಗಳಿವೆ. 994 ಸಾಕು ದನಗಳು ಇದ್ದು, ಪಶು ಇಲಾಖೆಯ ಲೆಕ್ಕಕ್ಕೆ ಸಿಗದೇ ಇರುವ 100ಕ್ಕೂ ಹೆಚ್ಚು ಬೀದಿ ನಾಯಿಗಳು ಜೊಯಿಡಾದ ರಸ್ತೆಗಳಲ್ಲಿ ಕಂಡು ಬರುತ್ತಿವೆ.

‘ಜೊಯಿಡಾದಲ್ಲಿ ಬೀದಿನಾಯಿಗಳ ಹಾಗೂ ಬೀಡಾಡಿ ದನಗಳ ಸಮಸ್ಯೆ ಹಲವು ವರ್ಷಗಳಿಂದ ಇದ್ದುದೆ. ಈಗಲಾದರೂ ಸ್ಥಳೀಯ ಆಡಳಿತದವರು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೀದಿನಾಯಿಗಳ ಸಂತಾನಶಕ್ತಿ ಹರಣ ಮಾಡಬೇಕು. ಬೀಡಾಡಿ ದನಗಳನ್ನು ಗೋಶಾಲೆಗೆ ರವಾನೆ ಮಾಡಬೇಕು’ ಎನ್ನುವುದು ಯುವ ಮುಖಂಡ ಸಂತೋಷ ಸಾವಂತ ಅವರ ಒತ್ತಾಯವಾಗಿದೆ.

‘ಜೊಯಿಡಾವನ್ನು ಸುಂದರ, ಸುಸಜ್ಜಿತ ಮಾದರಿ ಕೇಂದ್ರವನ್ನಾಗಿಸಲು ಒಳ್ಳೆಯ ಯೋಜನೆಗಳನ್ನು ರೂಪಿಸಬೇಕು. ಇದಕ್ಕೆ ಪೂರಕವಾಗಿ ಹಾದಿ ಬೀದಿಗಳಲ್ಲಿ ಜಾನುವಾರು ಕಾಟವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ. 

‘ಬೆಳಿಗ್ಗೆ ಎದ್ದು ವಾಕಿಂಗ್ ಹೋಗಲು ನಾಯಿಗಳು ಬಿಡುತ್ತಿಲ್ಲ. ಒಮ್ಮೆ ಒಂದು ನಾಯಿ ಬೊಗಳಲು ಅರಂಭಿಸಿದರೆ ಅಕ್ಕಪಕ್ಕದ ಹಲವು ನಾಯಿಗಳು ಹಿಂದೆಯೇ ಬರುತ್ತವೆ. ಬೆಳಿಗ್ಗೆ ಜನರ ಓಡಾಟ ಶುರುವಾಗುತ್ತಿದ್ದಂತೆ ನಾಯಿಗಳ ಹಿಂಡು ಬೊಗಳಲು ಶುರು ಮಾಡುತ್ತವೆ. ಇದರಿಂದ ಅಭ್ಯಾಸ ಮಾಡಲು ಸಹ ಸಾದ್ಯವಾಗುತ್ತಿಲ್ಲ’ ಎಂದು ಬೇಸರಿಸುತ್ತಾರೆ ಪಿ.ಯು ವಿದ್ಯಾರ್ಥಿ ನರೇಶ ದೇಸಾಯಿ.

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ

‘ಬೀದಿ ನಾಯಿಗಳ ಹಾಗೂ ಬೀಡಾಡಿ ದನಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯ್ತಿಯು ಕ್ರಮವನ್ನು ಕೈಗೊಂಡರೆ ಅನುಕೂಲವಾಗುತ್ತದೆ. ಇದಕ್ಕೆ ಪೂರಕವಾಗಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಜೊಯಿಡಾ ತಾಲ್ಲೂಕು ಪಶು ವೈದ್ಯಾಧಿಕಾರಿ ದೇವೇಂದ್ರ ಲಮಾಣಿ ಸ್ಪಷ್ಟಪಡಿಸಿದ್ದಾರೆ.

‘ಬೀದಿ ನಾಯಿಗಳಿಗೆ ರೇಬೀಸ್ ರೋಗ ಬರುವುದರಿಂದ ಅದರಿಂದ ಸಾರ್ವಜನಿಕರಿಗೆ ಅಪಾಅಯ ಹೆಚ್ಚುವ ಸಾಧ್ಯತೆಯಿರುತ್ತದೆ. ಆದ್ದರಿಂದ ಅವುಗಳ ನಿಯಂತ್ರಣಕ್ಕೆ ಗ್ರಾಮ ಪಂಚಾಯ್ತಿ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು