ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆನ್‌ಲೈನ್ ತರಗತಿಗೆ ‘ವೈಫೈ’ ಸೌಲಭ್ಯ

ಊರಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟ ವೈಲವಾಡ ಗ್ರಾಮದ ಯುವಕ
Last Updated 18 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕಾರವಾರ: ಕೊರೊನಾ ಕಾರಣದಿಂದ ಶಾಲೆಗಳು ಆರಂಭವಾಗಿಲ್ಲ. ಆನ್‌ಲೈನ್ ತರಗತಿಗಳು ನಡೆಯುತ್ತಿದ್ದರೂ ಹಲವರಿಗೆ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿದೆ. ಇಂಥದ್ದೇ ತೊಂದರೆ ಅನುಭವಿಸಿದ ಯುವಕರೊಬ್ಬರು ತಮ್ಮ ಊರಿನ ವಿದ್ಯಾರ್ಥಿಗಳಿಗೆ ಉಚಿತ ವೈಫೈ ವ್ಯವಸ್ಥೆ ಮಾಡಿದ್ದಾರೆ.

ತಾಲ್ಲೂಕಿನ ವೈಲವಾಡ ಗ್ರಾಮದ ನಿವಾಸಿ, ಎಂಜಿನಿಯರಿಂಗ್ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿ ಸಾಗರ ನಾಯ್ಕ, ತಮ್ಮ ಮನೆಯ ಈ ಸೌಲಭ್ಯವನ್ನು ಇತರ ವಿದ್ಯಾರ್ಥಿಗಳಿಗೂ ಒದಗಿಸಿಕೊಟ್ಟಿದ್ದಾರೆ. ಈ ಮೂಲಕ ತಮ್ಮ ಊರಿನಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿದ್ದರೂ ವಿದ್ಯಾರ್ಥಿಗಳ ಕಲಿಕೆಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಸಿದ್ದರದಿಂದ ದೇವಳಮಕ್ಕಿವರೆಗಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ತರಗತಿಗೆ ಹಾಜರಾಗುತ್ತಿದ್ದಾರೆ.

ಅವರ ಮನೆಯ ಜಗುಲಿಯಲ್ಲಿ ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವಂತೆ ನೋಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಮುಖಗವಸು ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿಯೇ ಮನೆಯೊಳಗೆ ಬರುವುದು ಕಡ್ಡಾಯ.

‘ಈ ಭಾಗದಲ್ಲಿ ಮೊದಲಿನಿಂದಲೂ ನೆಟ್‌ವರ್ಕ್ ಸಮಸ್ಯೆಯಿದೆ. ಲಾಕ್‌ಡೌನ್‌ಗೂ ಮೊದಲು ಅದು ಅಂಥ ಸಮಸ್ಯೆ ಅನ್ನಿಸಿರಲಿಲ್ಲ. ಆನ್‌ಲೈನ್ ತರಗತಿಗಳು ಶುರುವಾದ ಬಳಿಕ ಪರದಾಡುವಂತಾಯಿತು. ಈ ಬಗ್ಗೆ ಬಿ.ಎಸ್.ಎನ್‌.ಎಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಪ್ರಯೋಜನ ಆಗಲಿಲ್ಲ. ಹಾಗಾಗಿ ನಾನೇ ಮನೆಗೆ ಬ್ರಾಡ್‌ಬ್ಯಾಂಡ್ ಸಂಪರ್ಕ ತೆಗೆದುಕೊಂಡೆ’ ಎಂದು ಸಾಗರ್ ವಿವರಿಸಿದರು.

‘ವೈಲವಾಡ ಗ್ರಾಮದ ಸುತ್ತಮುತ್ತ 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಇಂಟರ್‌ನೆಟ್ ಸಂಪರ್ಕವನ್ನು ವೈಫೈ ಮೂಲಕ ಉಚಿತವಾಗಿ ನೀಡುತ್ತಿದ್ದೇನೆ. ಬ್ರಾಡ್‌ಬ್ಯಾಂಡ್‌ ಆಗಿರುವ ಕಾರಣ ಇಂಟರ್‌ನೆಟ್ ವೇಗವಿದೆ. ನಾಲ್ಕೈದು ಮೊಬೈಲ್‌ ಫೋನ್‌ಗಳು ಸಂಪರ್ಕ ಪಡೆದಿದ್ದರೂ ವೇಗದಲ್ಲಿ ಕೊರತೆಯಾಗುವುದಿಲ್ಲ’ ಎಂದು ಹೇಳಿದರು.

‘ಸಿದ್ದರದಲ್ಲಿ ಬಿ.ಎಸ್.ಎನ್.ಎಲ್ ಟವರ್ ಇದೆ. ಅದರ ಸಿಗ್ನಲ್ ಬೇರೆ ಟವರ್‌ಗಳ ಮೇಲೆ ಅವಲಂಬಿತವಾಗಿದೆ. ಕಿನ್ನರ ಅಥವಾ ಹಳಗಾದಲ್ಲಿ ಸಮಸ್ಯೆಯಾದರೂ ಇಲ್ಲಿ ಸಿಗ್ನಲ್ ಇರುವುದಿಲ್ಲ. ಎರಡು ಮೂರು ತಾಸು ವಿದ್ಯುತ್ ಹೋದರೆ ತರಗತಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂದು ಈ ವ್ಯವಸ್ಥೆ ಮಾಡಿದ್ದೇನೆ’ ಎಂದರು.

ಈ ಹಿಂದಿನಿಂದಲೂ ಸಮಸ್ಯೆ:‘ವೈಲವಾಡ ಗ್ರಾಮದಲ್ಲಿ ಮೊಬೈಲ್ ಸಿಗ್ನಲ್ ಸಮಸ್ಯೆ ಬಹಳ ಹಿಂದಿನಿಂದಲೂ ಇದೆ. ಈಗ ಆನ್‌ಲೈನ್ ತರಗತಿಗಳು ನಡೆಯುತ್ತಿರುವುದರಿಂದ ಮತ್ತಷ್ಟು ತೊಂದರೆಯಾಗಿದೆ. ಆದ್ದರಿಂದ ಗ್ರಾಮಕ್ಕೆ ಸೂಕ್ತ ರೀತಿಯಲ್ಲಿ ಸಿಗ್ನಲ್ ಸಿಗುವಂತೆ ಮತ್ತು ವೇಗದ ಇಂಟರ್‌ನೆಟ್ ಸಿಗುವಂತೆ ವ್ಯವಸ್ಥೆ ಮಾಡಬೇಕು’ ಎಂದು ಸಾಗರ ನಾಯ್ಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT