ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಹೆಸರಿನಲ್ಲೇ ಉಳಿದ ಗ್ರಾಮದ ‘ಮಹಿಮೆ’!

ಹೊನ್ನಾವರದ ಕುಗ್ರಾಮದಲ್ಲಿ ಎಂಟು ಕಿ.ಮೀ ನಡೆದು ಬಸ್ ಏರುವ ವಿದ್ಯಾರ್ಥಿಗಳು
Last Updated 12 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಕಾರವಾರ: ಈ ಗ್ರಾಮದ ‘ಮಹಿಮೆ’ ಹೆಸರಿನಲ್ಲಷ್ಟೇ ಇದೆ. ಆದರೆ, ಇಲ್ಲಿನ ವಿದ್ಯಾರ್ಥಿಗಳು, ಉದ್ಯೋಗಿಗಳು, ಗ್ರಾಮಸ್ಥರು ಬಸ್‌ ನೋಡಬೇಕೆಂದರೂ ಎಂಟು ಕಿಲೋಮೀಟರ್ ನಡೆಯಬೇಕು!

ಇದು ಹೊನ್ನಾವರ ತಾಲ್ಲೂಕಿನ ಉಪ್ಪೋಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಮೆ ಎಂಬ ಕುಗ್ರಾಮದ ವ್ಯಥೆ. ಒಂದೂವರೆ ವರ್ಷದಿಂದ ಈ ಊರು ಬಸ್ ಕಂಡಿಲ್ಲ. ಶಾಲೆಗಳು ಹಂತ ಹಂತವಾಗಿ ಪುನಃ ಆರಂಭವಾಗುತ್ತಿದ್ದರೂ ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲ. ಹೀಗಾಗಿ ಸುಮಾರು 40 ವಿದ್ಯಾರ್ಥಿಗಳು ನಿತ್ಯವೂ ಕಾಡಿನ ನಡುವೆ ನಡೆದುಕೊಂಡೇ ಸಾಗುತ್ತಿದ್ದಾರೆ. ಇವರಲ್ಲಿ ಅರ್ಧದಷ್ಟು ಬಾಲಕಿಯರೇ ಇದ್ದಾರೆ ಎನ್ನುವುದು ಗಮನಾರ್ಹ.

ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಮಹಿಮೆ ಕ್ರಾಸ್ ಎಂಬಲ್ಲಿಗೆ ಅವರು ತಲುಪಲು ಸುಮಾರು ಒಂದು ತಾಸು ಬೇಕು. ಅಲ್ಲಿಂದ ಬಸ್ ಹಿಡಿದು ಶಾಲೆ, ಕಾಲೇಜುಗಳಿಗೆ ತಲುಪುತ್ತಿದ್ದಾರೆ. ಮಹಿಮೆಯಲ್ಲಿ ಪ್ರೌಢಶಾಲೆಯಿಲ್ಲ. ವಿದ್ಯಾರ್ಥಿಗಳು 20 ಕಿಲೋಮೀಟರ್ ದೂರದ ಅಳ್ಳಂಕಿ, 25 ಕಿಲೋಮೀಟರ್ ದೂರದ ಜಲವಳಕರ್ಕಿ, 16 ಕಿಲೋಮೀಟರ್ ದೂರದ ಗೇರುಸೊಪ್ಪಕ್ಕೆ ಹೋಗುತ್ತಾರೆ. ಕವಲಕ್ಕಿ ಎಂಬಲ್ಲಿ ಪಿ.ಯು ಕಾಲೇಜು ಇದೆ. ಪದವಿ ಅಧ್ಯಯನಕ್ಕೆ 40 ಕಿಲೋಮೀಟರ್ ದೂರದಲ್ಲಿರುವ ಹೊನ್ನಾವರ ಪಟ್ಟಣವೇ ಅತ್ಯಂತ ಸಮೀಪವಾಗಿದೆ.

‘ಊರಿನಲ್ಲಿರುವ ಬಹುತೇಕರು ಬಡವರು. ದ್ವಿಚಕ್ರ ವಾಹನಗಳನ್ನು ಅನಿವಾರ್ಯವಾಗಿ ಇಟ್ಟುಕೊಂಡಿದ್ದರೂ ಕೆಲಸಕ್ಕೆ ಹೋಗಲು ಬಳಕೆಯಾಗುತ್ತವೆ. ಆ ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಲು, ಪುನಃ ಬರಲು ಕಷ್ಟವಾಗುತ್ತದೆ. ಮಹಿಮೆ ಕ್ರಾಸ್‌ನಲ್ಲಿ ಆಟೊಗಳಿವೆ. ಆದರೆ, ₹ 300, ₹ 400 ಬಾಡಿಗೆ ಕೊಡಲು ನಾವು ಶಕ್ತರಾಗಿಲ್ಲ. ಹೀಗಾಗಿ ನಡೆದು ಸುಸ್ತಾಗುವ ಮಕ್ಕಳು ತರಗತಿಯಲ್ಲೂ ಏಕಾಗ್ರತೆ ಹೊಂದಲು ಕಷ್ಟವಾಗುತ್ತಿದೆ’ ಎನ್ನುತ್ತಾರೆ ಗ್ರಾಮಸ್ಥ ರಾಜೇಶ ನಾಯ್ಕ ಹಾಗೂ ಇತರರು.

ಈ ಗ್ರಾಮದ ಬಳಿ ಹರಿಯುವ ಹಳ್ಳವು ಮಳೆಗಾಲ ಪೂರ್ತಿ ಉಕ್ಕಿ ಹರಿಯುತ್ತದೆ. ಆಗ ಇಲ್ಲಿನವರು ಸುಮಾರು ಆರು ತಿಂಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಾರೆ. ಮಳೆಗಾಲಕ್ಕೂ ಮೊದಲೇ ಅಷ್ಟೂ ಅವಧಿಗೆ ಬೇಕಾದ ದಿನಸಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದು ಅವರಿಗೆ ರೂಢಿಯಾಗಿದೆ.

ಕಳೆದ ವರ್ಷ ಫೆ.1ರಂದು ಮಹಿಮೆಯ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಸಚಿವ ಸುರೇಶ ಕುಮಾರ್, ಶಾಸಕ ಸುನೀಲ ನಾಯ್ಕ ಊರಿನ ಸಮಸ್ಯೆಗಳನ್ನು ಕಂಡಿದ್ದರು. ಅಲ್ಲದೇ ಬಸ್‌, ರಸ್ತೆಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಅದು ಆದಷ್ಟು ಬೇಗ ಕಾರ್ಯರೂಪಕ್ಕೆ ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

‘ಸಮಸ್ಯೆ ಪರಿಹಾರಕ್ಕೆ ಯತ್ನ’:ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕುಮಟಾ ಘಟಕದ ವ್ಯವಸ್ಥಾಪಕಿ ದೀಪಾ ನಾಯಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಕೊರೊನಾ ನಂತರ ಸಿಬ್ಬಂದಿ ಹಾಗೂ ಬಸ್‌ಗಳ ಕೊರತೆಯಿದೆ. ಇದರ ನಡುವೆಯೂ ಗ್ರಾಮೀಣ ಮಾರ್ಗಗಳಿಗೆ ಸೇವೆ ನೀಡಲು ಪ್ರಯತ್ನಿಸಲಾಗುತ್ತಿದೆ. ಸಮಸ್ಯೆಯನ್ನು ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು’ ಎಂದು ತಿಳಿಸಿದ್ದಾರೆ.

***

ಮಹಿಮೆಯ ಮಹಿಷಾಸುರ ಮರ್ದಿನಿ ದೇವಸ್ಥಾನದ ಬಳಿ ರಸ್ತೆ ನಿರ್ಮಾಣಕ್ಕೆ ₹ 25 ಲಕ್ಷ ಹಾಗೂ ಒಂದು ಸೇತುವೆಗೆ ₹ 80 ಲಕ್ಷ ಮಂಜೂರಾಗಿದೆ. ಶೀಘ್ರವೇ ಕೆಲಸ ಶುರುವಾಗಲಿದೆ.

– ಸುನೀಲ ನಾಯ್ಕ, ಭಟ್ಕಳ– ಹೊನ್ನಾವರ ಶಾಸಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT