ಸೋಮವಾರ, ಆಗಸ್ಟ್ 2, 2021
20 °C
ಜಿಲ್ಲೆಯ ಕರಾವಳಿಯಲ್ಲಿ ತಲೆಮಾರುಗಳಿಂದ ನಡೆದುಬಂದಿರುವ ಆಚರಣೆ

ಹೋಳಿ ಹಬ್ಬಕ್ಕೆ ಸುಗ್ಗಿ ಕುಣಿತದ ಸಂಭ್ರಮ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಹೋಳಿ ಹಬ್ಬ ಮತ್ತು ಸುಗ್ಗಿ ಕುಣಿತ. ಜಿಲ್ಲೆಯ ಕರಾವಳಿಯಲ್ಲಿ ಒಂದನ್ನೊಂದು ಪ್ರತ್ಯೇಕವಾಗಿ ನೋಡಲಾರದಷ್ಟು ನಂಟು ಇರುವ ಎರಡು ಆಚರಣೆಗಳು. ಬಣ್ಣಗಳ ಹಬ್ಬಕ್ಕೆ ಒಂದು ವಾರದ ದಿನಗಣನೆ ಶುರುವಾಗುತ್ತಿದ್ದಂತೆ ಕಾರವಾರ, ಅಂಕೋಲಾ ತಾಲ್ಲೂಕಿನ ವಿವಿಧೆಡೆ ಸುಗ್ಗಿ ಕುಣಿತ ಮೇಳೈಸುತ್ತದೆ. 

ಬಣ್ಣ ಬಣ್ಣದ ವಿಶಿಷ್ಟ ಪೇಟ, ಪೋಷಾಕು ಧರಿಸಿದವರು ಗುಮಟೆ, ಜಾಗಟೆ, ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕುತ್ತ ನರ್ತಿಸುವುದನ್ನು ನೋಡುವುದೇ ಸಂಭ್ರಮ. ಹೋಳಿಗೂ ಮೊದಲೇ ಹತ್ತೂರುಗಳಲ್ಲಿ ಮನೆ ಮನೆಗಳಿಗೆ ತೆರಳಿ ಪಾಲಿಸುವ ಈ ಸಂಪ್ರದಾಯ ತಲೆಮಾರುಗಳಿಂದ ನಡೆದು ಬಂದಿದೆ. ಹಾಲಕ್ಕಿ, ಕರೆ ಒಕ್ಕಲಿಗ, ನಾಮಧಾರಿ, ಹಾಲಕ್ಕಿ, ಅಂಬಿಗ ಮುಂತಾದ ಹಲವು ಸಮುದಾಯವರಲ್ಲಿ ಸುಗ್ಗಿ ಕುಣಿತಕ್ಕೆ ವಿಶೇಷ ಮಹತ್ವವಿದೆ. ಅದನ್ನು ಕಣ್ತುಂಬಿಕೊಳ್ಳಲೆಂದೇ ದೂರದೂರುಗಳಿಂದ ಗ್ರಾಮಸ್ಥರ ನೆಂಟರು, ಗೆಳೆಯರು ಬರುತ್ತಾರೆ.

ತೋಡೂರಿನಲ್ಲಿ ಕರಿದೇವರು ಹಾಗೂ ಕರಿನಾಥನಿಗೆ ನವಮಿಯ ದಿನ ಪೂಜೆ ಮಾಡಿದ ಬಳಿಕ ಸುಗ್ಗಿ ಕುಣಿತ ಶುರುವಾಗುತ್ತದೆ. ಸುಗ್ಗಿ ಕುಣಿತದಲ್ಲಿ ಪಾಲ್ಗೊಳ್ಳುವವರು ಮೊದಲ ದಿನ ಮನೆಯಿಂದ ಹೊರಟರೆ ಅವರು ಪುನಃ ಮಧ್ಯದಲ್ಲಿ ಮನೆಗೆ ಹೋಗುವುದಿಲ್ಲ. ಹೋಳಿ ಹಬ್ಬದಂದು ಓಕುಳಿಯಾಡಿದ ಬಳಿಕ ವೇಷ, ಭೂಷಣಗಳನ್ನು ಕಳಚಿ ದೇವರಿಗೆ ನಮಸ್ಕರಿಸಿದ ನಂತರವೇ ಅವರು ತೆರಳುತ್ತಾರೆ. ವರ್ಷದಲ್ಲಿ ಎರಡು ಬಾರಿ ಸಂಕ್ರಾಂತಿ, ಯುಗಾದಿಗೆ ಹಿರಿಸುಗ್ಗಿ ಹಾಗೂ ಕಿರಿಸುಗ್ಗಿ ಕುಣಿತ ಮಾಡಲಾಗುತ್ತದೆ. 

ಯುವಕರೊಂದಿಗೆ ಮಕ್ಕಳು, ಹಿರಿಯರೂ ಸುಗ್ಗಿ ಕುಣಿತದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಸುಗ್ಗಿ ಮೇಳದಲ್ಲಿ ಬಳಸಿದ ತುರಾಯಿ, ಉಡುಗೆಯನ್ನು ಹೋಳಿ ಹುಣ್ಣಿಮೆಯ ಬಳಿಕ ಸಮುದ್ರದಲ್ಲಿ ವಿಸರ್ಜನೆ ಮಾಡುತ್ತಾರೆ. ಊರೂರು ಸಂಚರಿಸುವಾಗ ಗ್ರಾಮಸ್ಥರು ನೀಡುವ ಊಟ, ತಿಂಡಿ, ನೀರನ್ನೇ ಸೇವಿಸುತ್ತಾರೆ. ಯಾರಾದರೂ ಧನಸಹಾಯ ಮಾಡಿದರೆ ಸ್ವೀಕರಿಸುತ್ತಾರೆ.

ಒಳಿತಾಗುವ ನಂಬಿಕೆ

ಸುಗ್ಗಿ ಕುಣಿತ ಮಾಡುವುದರಿಂದ ಒಳಿತಾಗುತ್ತದೆ. ನಂಬಿರುವ ದೇವರು ಇಷ್ಟಾರ್ಥ ಕರುಣಿಸಿ ಕಷ್ಟಗಳೆಲ್ಲ ಪರಿಹಾರವಾಗುತ್ತವೆ ಎಂಬ ನಂಬಿಕೆಯಿದೆ.

ಈ ಬಾರಿ ಕೊರೊನಾ ಕಾರಣದಿಂದ ಸುಗ್ಗಿ ಕುಣಿತ ಅತ್ಯಂತ ಸರಳವಾಗಿ ನಡೆಯುತ್ತಿದೆ. ಕೆಲವೇ ಮನೆಗಳಲ್ಲಿ ಮಾಡಲಾಗುತ್ತಿದ್ದು, ಸಂಪ್ರದಾಯ ಮುಂದುವರಿಸಿಕೊಂಡು ಹೋಗುವ ಸಲುವಾಗಿಯೇ ಆಚರಣೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಹೋಳಿ ಹಬ್ಬದ ಸಂದರ್ಭದಲ್ಲಿ ಕಾರವಾರದಲ್ಲಿ ಅಲ್ಲಲ್ಲಿ ಕಾಣಿಸುತ್ತಿದ್ದ ವಿವಿಧ ವೇಷಧಾರಿಗಳೂ ಈ ಸಲ ವಿರಳವಾಗಿದ್ದಾರೆ.

ಹತ್ತಾರು ವರ್ಷಗಳಿಂದ ಪಾಲಿಸುತ್ತಿದ್ದ ಆಚರಣೆ ನಿಲ್ಲಬಾರದು, ಮುಂದಿನ ಪೀಳಿಗೆಯವರಿಗೆ ತಿಳಿದಿರಬೇಕು ಎಂಬ ಒಂದೇ ಕಾರಣಕ್ಕೆ ಆಚರಿಸುತ್ತಿರುವುದಾಗಿ ಸಮುದಾಯದ ಹಿರಿಯರು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು