ಭಾನುವಾರ, ಸೆಪ್ಟೆಂಬರ್ 19, 2021
30 °C
ಅತಿವೃಷ್ಟಿಯಿಂದ ಹಾನಿಗೀಡಾಗುವ ಅಡಿಕೆಗೆ ಪರಿಹಾರ ನೀಡಲು ಮಾರ್ಗಸೂಚಿ ಇಲ್ಲ

ಶಿರಸಿ: ಪ್ರಸ್ತಾವನೆಗೆ ಸೀಮಿತವಾದ ಪರಿಹಾರ!

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಅತಿಯಾದ ಮಳೆ, ಆಗಾಗ ಬಂದು ಹೋಗುವ ಬಿಸಿಲು ಮಲೆನಾಡಿನ ಪ್ರಮುಖ ಬೆಳೆ ಅಡಿಕೆಗೆ ಕೊಳೆರೋಗ ಆವರಿಸಲು ಅನುಕೂಲವಾಗುತ್ತಿದೆ. ಅಲ್ಪ ಮೊತ್ತದ ವಿಮೆ ಸೌಲಭ್ಯ ಬಿಟ್ಟರೆ ಹಾನಿಗೀಡಾಗುವ ಬೆಳೆಗೆ ಪರಿಹಾರ ನೀಡಲು ಸ್ಪಷ್ಟ ಮಾರ್ಗಸೂಚಿ ಇಲ್ಲ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಅಡಿ (ಎನ್.ಡಿ.ಆರ್.ಎಫ್.) ಅಡಿಕೆ ತೋಟಕ್ಕೆ ಹಾನಿ ಉಂಟಾದರೆ ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಅತಿವೃಷ್ಟಿ ಕಾರಣಕ್ಕೆ ಉಂಟಾದ ಕೊಳೆರೋಗದಿಂದ ಎದುರಾಗುವ ಹಾನಿಗೆ ಪರಿಹಾರ ನೀಡಲು ಅವಕಾಶ ಇಲ್ಲ. ಹವಾಮಾನ ಆಧಾರಿತ ಬೆಳೆವಿಮೆ ಅಡಿ ಪ್ರತಿ ಹೆಕ್ಟೇರ್ ಗೆ ₹1.28 ಲಕ್ಷ ವಿಮಾ ಮೊತ್ತ ಮಂಜೂರಾಗುತ್ತದೆ. ಆದರೆ, ಇದು ಹಾನಿಗೆ ಸೂಕ್ತ ಪರಿಹಾರ ಅಲ್ಲ ಎಂಬುದು ರೈತ ವಲಯದ ಅಭಿಪ್ರಾಯ.

‘ಪ್ರತಿ ಬಾರಿಯೂ ಮಲೆನಾಡು ಭಾಗದಲ್ಲಿ ಮಳೆ ಪ್ರಮಾಣ ಅಧಿಕವಾಗಿದೆ. ಹೀಗಾಗಿ ಕೊಳೆರೋಗ ಕಾಣಿಸಿಕೊಳ್ಳವುದು ಸಾಮಾನ್ಯ. ಸಾವಿರಾರು ಕ್ವಿಂಟಲ್ ಅಡಿಕೆ ಬೆಳವಣಿಗೆಗೂ ಮೊದಲೆ ಉದುರಿ ಹಾಳಾಗುತ್ತವೆ. ರೈತರು ಎದುರಿಸುವ ನಷ್ಟಕ್ಕೆ ಈವರೆಗೂ ಸರ್ಕಾರ ಸೂಕ್ತ ಪರಿಹಾರ ನಿಗದಿಪಡಿಸದಿರುವುದು ಕೃಷಿಕ ವಲಯ ಖಂಡಿಸುವಂತದ್ದು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಜಿ.ಎನ್.ಹೆಗಡೆ ಮುರೇಗಾರ.

‘ಬೆಳೆವಿಮೆ ಸೌಲಭ್ಯ ವಿಮಾ ಕಂಪನಿಗಷ್ಟೇ ಲಾಭ ಮಾಡಿಕೊಡುತ್ತದೆ. ವಿಮೆ ಮೊತ್ತ ಮಂಜೂರಿಗೆ ಇರುವ ನಿಬಂಧನೆ ರೈತರ ಪರವಾಗಿಲ್ಲ. ವಿಮಾ ಮೊತ್ತವೂ ಅತ್ಯಲ್ಪ. ಕೊಳೆರೋಗಕ್ಕೆ ಹಾನಿಗೀಡಾಗುವ ಬೆಳೆಗೆ ಬಿಡುಗಡೆಯಾಗುವ ಮೊತ್ತಕ್ಕೆ ಅಜಗಜಾಂತರ ವ್ಯತ್ಯಾಸವೂ ಇರುತ್ತದೆ. ಇದು ಎಲ್ಲ ಸಂತ್ರಸ್ತರ ರೈತರಿಗೂ ಲಭಿಸುವಂತದ್ದಲ್ಲ’ ಎನ್ನುತ್ತಾರೆ ಅವರು.

‘ವಿಮೆ ಸೌಲಭ್ಯ ಜಾರಿಯಲ್ಲಿರುವ ಕಾರಣಕ್ಕೆ ಕೊಳೆರೋಗಕ್ಕೆ ಪ್ರತ್ಯೇಕ ಪರಿಹಾರ ನೀಡಲು ಅವಕಾಶ ಇಲ್ಲ. ಪ್ರತಿ ವರ್ಷ ಕೊಳೆರೋಗದಿಂದ ಉಂಟಾದ ಹಾನಿಯ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗುತ್ತಿದೆ. ಪರಿಹಾರದ ಬಗ್ಗೆ ಸರ್ಕಾರದ ಮಟ್ಟದಲ್ಲಿಯೇ ನಿರ್ಣಯವಾಗಬೇಕು’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ್ ಪ್ರತಿಕ್ರಿಯಿಸಿದರು.

2019–20ರಲ್ಲಿ ₹323.46 ಕೋಟಿ, 2020–21ರಲ್ಲಿ ₹78.29 ಕೋಟಿ ಮೊತ್ತದ ಅಡಿಕೆ ರೋಗದಿಂದ ನಷ್ಟವಾಗಿದ್ದಾಗಿ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಈ ಹಾನಿಗೆ ಈವರೆಗೂ ಪರಿಹಾರ ಲಭಿಸಿಲ್ಲ.

ಬೆಲೆ ಇದ್ದ ಕಾಲದಲ್ಲಿ ಬೆಳೆ ಇಲ್ಲ:

ಸದ್ಯ ಅಡಿಕೆ ದರ ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ. ರೈತರ ಬಳಿ ಹೆಚ್ಚು ಫಸಲು ದಾಸ್ತಾನು ಇಲ್ಲ. ಆದರೆ ಮುಂದಿನ ವರ್ಷದ ಹಂಗಾಮಿನಲ್ಲಿ ಉತ್ತಮ ದರದ ನಿರೀಕ್ಷೆಯಲ್ಲಿ ರೈತರು ಇರುವಾಗಲೆ ಕೊಳೆರೋಗದ ಬಾಧೆ ಕಾಡುತ್ತಿದೆ.

‘ಬೆಲೆ ಇದ್ದರೂ ಬೆಳೆ ಕಾಯ್ದುಕೊಳ್ಳಲು ಬಹುಪಾಲು ರೈತರಿಗೆ ಸಾಧ್ಯವಾಗಿಲ್ಲ. ಕೊಳೆರೋಗದಿಂದ ಹಾನಿ ಉಂಟಾದರೆ ಮುಂದಿನ ಹಂಗಾಮಿಗೆ ಮಾರುಕಟ್ಟೆಯಲ್ಲಿ ಅಡಿಕೆ ಆವಕ ಕಡಿಮೆಯಾಗಲೂಬಹುದು. ಇದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು. ಹೀಗಾಗಿ ಪ್ರಸ್ತುತ ಮಾರುಕಟ್ಟೆ ದರ ಆಧರಿಸಿ ಕೊಳೆರೋಗಕ್ಕೆ ವಿಶೇಷ ಪರಿಹಾರ ನೀಡಬೇಕು’ ಎನ್ನುತ್ತಾರೆ ಶಿರಸಿ, ಸಿದ್ದಾಪುರ ಭಾಗದ ಅಡಿಕೆ ಬೆಳೆಗಾರರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು