ಶುಕ್ರವಾರ, ಸೆಪ್ಟೆಂಬರ್ 25, 2020
24 °C

ಶಿರಸಿ: ಎಸಳೆ ಉಪಕೇಂದ್ರ ಕಾಮಗಾರಿಗೆ ಟೆಂಡರ್, ಗ್ರಾಹಕರಲ್ಲಿ ಹೊಸ ಆಶಾಭಾವ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ವಿದ್ಯುತ್ ಪೂರೈಕೆಯಲ್ಲಿ ಆಗುವ ವ್ಯತ್ಯಯ ತಪ್ಪಿಸಲು, ಎಸಳೆ ಉಪಕೇಂದ್ರದ ಸಾಮರ್ಥ್ಯ ಹೆಚ್ಚಿಸುವ ಸಂಬಂಧ ಸಲ್ಲಿಸಿದ್ದ ಪ್ರಸ್ತಾವಕ್ಕೆ ನಾಲ್ಕು ವರ್ಷ ವಿಳಂಬವಾಗಿ ಅನುಮತಿ ದೊರೆತಿದೆ. ಅನುಮತಿ ದೊರೆತು ಎರಡು ತಿಂಗಳುಗಳ ಮೇಲೆ ಅಂತೂ ಕೆಪಿಟಿಸಿಎಲ್ ಕಾಮಗಾರಿಯ ಟೆಂಡರ್ ಕರೆದಿದೆ.

ತಾಲ್ಲೂಕಿನ ಎಸಳೆಯಲ್ಲಿರುವ ವಿದ್ಯುತ್ ಉಪಕೇಂದ್ರದಲ್ಲಿ 10 ಎಂವಿಎ ಸಾಮರ್ಥ್ಯದ ನಾಲ್ಕು ಫೀಡರ್‌ಗಳು ಇವೆ. ಹೆಚ್ಚುವರಿಯಾಗಿ ನಾಲ್ಕು ಬ್ರೇಕರ್‌ಗಳು, 10ಎಂವಿಎ ಪವರ್ ಟ್ರಾನ್ಸ್‌ಫಾರ್ಮರ್ ಅಳವಡಿಸಲು 2016ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಹಲವಾರು ಬಾರಿ ಪ್ರಯತ್ನದ ನಂತರ ಕಳೆದ ಜೂನ್ 5ರಂದು, ಇದಕ್ಕೆ ಅನುಮತಿ ದೊರೆತಿದ್ದು, ವಿದ್ಯುತ್ ಗ್ರಾಹಕರಲ್ಲಿ ಹೊಸ ಆಶಾಭಾವ ಮೂಡಿದೆ.

‘ಕಾಡು ಅಧಿಕವಿರುವ ಪ್ರದೇಶದಲ್ಲಿ ಹೆಚ್ಚು ಫೀಡರ್‌ಗಳಿದ್ದರೆ ವಿದ್ಯುತ್ ಪೂರೈಕೆಯಲ್ಲಿ ಆಗುವ ಸಮಸ್ಯೆ ತಪ್ಪುತ್ತದೆ. ಈ ಬಾರಿ ಮಳೆ–ಗಾಳಿಯಾದಾಗ ಕಸ್ತೂರಬಾ ನಗರಕ್ಕೆ ವಿದ್ಯುತ್ ಪೂರೈಕೆಯಲ್ಲಿ ತೊಂದರೆಯಾಯಿತು. ಪ್ರತ್ಯೇಕ ಫೀಡರ್ ಇದ್ದಿದ್ದರೆ, ಈ ಸಮಸ್ಯೆ ಆಗುತ್ತಿರಲಿಲ್ಲ’ ಎನ್ನುತ್ತಾರೆ ಹೆಸ್ಕಾಂ ಸಿಬ್ಬಂದಿಯೊಬ್ಬರು.

‘ಕಾನಸೂರು ಮತ್ತು ಹತ್ತರಗಿಯಲ್ಲಿ ವಿದ್ಯುತ್ ಉಪಕೇಂದ್ರ ಪ್ರಸ್ತಾವ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಾನಸೂರಿನಲ್ಲಿ ಗ್ರಿಡ್ ಮಾಡಿದರೆ, ಶಿರಸಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಾರಿಗದ್ದೆಯಲ್ಲಿ ಆಗುವ ವಿದ್ಯುತ್ ವ್ಯತ್ಯಯ ತಪ್ಪುತ್ತದೆ. ಕಂದಾಯ, ಅರಣ್ಯ ಇಲಾಖೆ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳು ಒಟ್ಟಿಗೆ ಕುಳಿತು ಚರ್ಚಿಸಿ, ಸಮಸ್ಯೆ ಇತ್ಯರ್ಥಗೊಳಿಸಬಹುದಿತ್ತು. ಆದರೆ, ಈ ಪ್ರಸ್ತಾವದ ಕಡತ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದೆಯೇ ವಿನಾ, ಕಾರ್ಯಾನುಷ್ಠಾನಕ್ಕೆ ಪ್ರಯತ್ನ ನಡೆದಿಲ್ಲ’ ಎಂದು ವಿದ್ಯುತ್ ಗ್ರಾಹಕ ಗಣೇಶ ಎಚ್ ಬೇಸರಿಸಿಕೊಂಡರು.

‘ಹತ್ತರಗಿ ಉಪಕೇಂದ್ರದ ಪ್ರಸ್ತಾವವೂ ಬಹುವರ್ಷಗಳಿಂದ ಬಾಕಿಯಾಗಿದೆ. ಸಂಪಖಂಡದಲ್ಲಿ 310 ಕಿ.ಮೀ ವಿದ್ಯುತ್ ಮಾರ್ಗ ಇರುವುದರಿಂದ ಪದೇ ಪದೇ ಟ್ರಿಪ್ ಆಗಿ, ನಿರಂತರ ವಿದ್ಯುತ್ ಪೂರೈಕೆಗೆ ಅಡ್ಡಿಯಾಗುತ್ತಿದೆ. ಹತ್ತರಗಿ ಗ್ರಿಡ್ ಆದರೆ, ಈ ಸಮಸ್ಯೆ ಬಗೆಹರಿಯುತ್ತದೆ. 15 ಕಿ.ಮೀ ಅಂತರದಲ್ಲಿ ಫೀಡರ್ ಇರಬೇಕೆಂಬ ನಿಯಮವಿದೆ. ಕಿರವತ್ತಿಯಲ್ಲಿ ಅತಿಚಿಕ್ಕ ಗ್ರಿಡ್ ಇದೆ. ಒಂದು ಫೀಡರ್‌ಗೆ ಆರು ಕಂಬಗಳಿವೆ. ಹೀಗಾಗಿ, ಇಲ್ಲಿನವರಿಗೆ ನಿರಂತರ ವಿದ್ಯುತ್ ಸಿಗುತ್ತದೆ’ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು