ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ವಿಧಾನಪರಿಷತ್ ಚುನಾವಣಾ ಕಣ: ಗಮನ ಸೆಳೆಯಲು ಪಕ್ಷೇತರರ ಪಣ

Last Updated 29 ನವೆಂಬರ್ 2021, 15:33 IST
ಅಕ್ಷರ ಗಾತ್ರ

ಕಾರವಾರ: ಈ ಬಾರಿಯ ವಿಧಾನಪರಿಷತ್ ಚುನಾವಣೆಯ ಅಖಾಡದಲ್ಲಿ ಬಲಾಢ್ಯ ಬಿ.ಜೆ.ಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳ ನಡುವೆ ಮೂವರು ಪಕ್ಷೇತರರೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಮ್ಮ ಸ್ಪರ್ಧೆಯ ಉದ್ದೇಶದಿಂದಲೇ ಗಮನ ಸೆಳೆಯುತ್ತಿದ್ದಾರೆ.

ಸೋಮಶೇಖರ್ ವಿ.ಎಸ್

‘ರೈತ ಭಾರತ ಪಕ್ಷ’ದಿಂದ ಅಭ್ಯರ್ಥಿಯಾಗಿರುವ ಕಾರವಾರದ ಕಡವಾಡದ ನಿವಾಸಿ ಸೋಮಶೇಖರ್ ವಿ.ಎಸ್, ರೈತರೇ ಸರ್ಕಾರ ನಡೆಸಬೇಕು ಎಂಬ ಮಹದಾಸೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಎಲ್ಲರೂ ರೈತರು ದೇಶದ ಬೆನ್ನೆಲುವುದು ಎಂದು ಬಣ್ಣಿಸುತ್ತಾರೆ. ಆದರೆ, ನಂತರ ರೈತರ ಬೆನ್ನೆಲುಬು ಮುರಿಯುವ ಕೆಲಸ ಮಾಡುತ್ತಾರೆ ಎಂಬ ಸಿಟ್ಟು ಹೊರ ಹಾಕುತ್ತಾರೆ.

‘ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ರೈತರಿಗೆ ಏನು ಸಹಾಯ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅನ್ನದಾತ ಕಷ್ಟಪಟ್ಟು ಬೆಳೆಯುವ ಬೆಳೆಗೆ ಸಮರ್ಪಕವಾದ ದರ ಸಿಗುತ್ತಿಲ್ಲ. ಬಹುತೇಕ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ರೈತರ ಕುಟುಂಬದವರೇ ಆಗಿರುತ್ತಾರೆ. ಇಂದಿಗೂ ದೇಶದಲ್ಲಿ ಶೇ 80ರಷ್ಟು ರೈತರಿದ್ದರೂ ಉಳಿದ ಶೇ 20ರಷ್ಟು ಮಂದಿ ರೈತರನ್ನು ಆಳ್ವಿಕೆ ಮಾಡುತ್ತಾರೆ. ಎಲ್ಲ ಕಡೆ ಲಂಚ ಕೊಡಲೇಬೇಕು ಎಂಬಂತಾಗಿದೆ. ಹಾಗಾಗಿ ರೈತರೇ ಅಧಿಕಾರಕ್ಕೇರಿದರೆ ದೇಶಕ್ಕೆ ಒಳಿತಾಗುತ್ತದೆ ಎಂಬ ಅರಿವು ಮೂಡಿಸಲು ಸ್ಪರ್ಧಿಸುತ್ತಿದ್ದೇನೆ’ ಎನ್ನುತ್ತಾರೆ ಅವರು.

ಈಶ್ವರ ಗೌಡ

ಕುಮಟಾ ತಾಲ್ಲೂಕಿನ ವಕ್ಕನಳ್ಳಿಯ ನಿವಾಸಿ ಈಶ್ವರ ಗೌಡ,ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮತ್ತೊಬ್ಬ ಅಭ್ಯರ್ಥಿ. ಅವರು ಎಂ.ಕಾಂ ಪದವೀಧರನಾಗಿದ್ದು, ಕುಮಟಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದಾರೆ. ಆಡಳಿತದ ವ್ಯವಸ್ಥೆಯಲ್ಲಿರುವ ಲೋಪ ದೋಷಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸುವ ಉದ್ದೇಶವಿಟ್ಟುಕೊಂಡು ಕಣಕ್ಕೆ ಇಳಿದಿದ್ದಾರೆ.

‘ವಿಧಾನ ಪರಿಷತ್ ಬುದ್ಧಿವಂತರ ಸದನ, ಚಿಂತಕರ ಚಾವಡಿ. ಬಿ.ಜೆ.ಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳಿಗಿಂತ ನನಗೆ ಹೆಚ್ಚಿನ ವಿದ್ಯಾರ್ಹತೆಯಿದೆ. ಹಾಗಾಗಿ ನಾನ್ಯಾಕೆ ಸ್ಪರ್ಧಿಸಬಾರದು ಎಂದು ಯೋಚಿಸಿ ನಾಮಪತ್ರ ಸಲ್ಲಿಸಿದ್ದೇನೆ. ಅವರ ಬಳಿ ಹಣ ಬಲ, ಜನ ಬಲ ಇರಬಹುದು. ಆದರೆ, ನನ್ನ ಆಶಯಕ್ಕೆ ಹಲವರಿಂದ ಪ್ರೋತ್ಸಾಹ ಸಿಗುತ್ತಿದೆ. ಸೋಲು, ಗೆಲುವಿಗಿಂತ ನನ್ನ ಪ್ರಯತ್ನಕ್ಕೆ ಭೇಷ್ ಎಂದು ಹೇಳುತ್ತಿದ್ದಾರೆ’ ಎಂದು ವಿವರಿಸುತ್ತಾರೆ.

‘ಯಾವುದೇ ರಾಷ್ಟ್ರೀಯ ಪಕ್ಷಗಳೂ ಅಭಿವೃದ್ಧಿ ಮಾಡಿಲ್ಲ ಎಂದು ಯುವಕರು ಬೇಸರಿಸುತ್ತಾರೆ. ಆದರೆ, ಪದೇ ಪದೇ ಸ್ಪರ್ಧಿಸುವ ರಾಜಕಾರಣಿಗಳಿಗೆ ಪೈಪೋಟಿ ಕೊಡಲು ಮುಂದೆ ಬರ್ತಿಲ್ಲ. ಆ ಬಗ್ಗೆ ಜಾಗೃತಿ ಮೂಡಿಸುವುದೂ ನನ್ನ ಬಯಕೆಯಾಗಿದೆ’ ಎಂದು ಅವರ ಆಶಯ ವ್ಯಕ್ತಪಡಿಸುತ್ತಾರೆ.

‘ಹಣ, ಪ್ರಾಮಾಣಿಕತೆಯ ಯುದ್ಧ’:

ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಭಟ್ಕಳದ ದತ್ತಾತ್ರಯ ನಾಯ್ಕ, ಬಿ.ಜೆ.ಪಿ.ಯ ಆರ್ಥಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿದ್ದಾರೆ. ಈ ಬಾರಿ ಬಿ.ಜೆ.ಪಿ.ಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಸಿಗದ ಕಾರಣ ಬೇಸರಗೊಂಡು ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಈ ಬಾರಿಯ ಚುನಾವಣೆಯು ಹಣ ಮತ್ತು ಪ್ರಾಮಾಣಿಕತೆಯ ನಡುವಿನ ಯುದ್ಧ ಎಂದು ವಿಶ್ಲೇಷಿಸುತ್ತಾರೆ.

‘ನಾನು 30 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲೂ ಪಕ್ಷದಿಂದ ಟಿಕೆಟ್ ಕೇಳಿದ್ದೆ. ಆದರೆ, ಅವರು ಕೊಡಲಿಲ್ಲ. ಈ ಬಾರಿಯೂ ನಿರಾಸೆಯಾಯಿತು. ಪ್ರಾಮಾಣಿಕ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಈ ಧೋರಣೆಯ ವಿರುದ್ಧ ಸ್ಪರ್ಧೆಗೆ ಇಳಿದಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ವಿವರಿಸಿದರು.

‘ನಾನು 16 ವರ್ಷಗಳಿಂದ ಹೈಕೋರ್ಟ್‌ ವಕೀಲನಾಗಿ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ. ನನ್ನ ಬಗ್ಗೆ ಗೊತ್ತಿರುವವರು ಈ ಸ್ಪರ್ಧೆಯನ್ನು ಸ್ವಾಗತಿಸಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸಿದ್ದು ಗೊತ್ತಾದರೂ ಬಿ.ಜೆ.ಪಿ.ಯ ಯಾರೊಬ್ಬ ಮುಖಂಡರೂ ನನ್ನನ್ನು ಸಂಪರ್ಕಿಸಿ ಚರ್ಚಿಸಿಲ್ಲ. ಸೌಜನ್ಯಕ್ಕಾಗಿಯೂ ಮಾತನಾಡಿಸಿಲ್ಲ. ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೆ ಮತ್ತೊಂದು ನ್ಯಾಯ ಎಂಬಂತಿದೆ’ ಎಂದು ಬೇಸರಿಸಿದರು.

––––––––––

* ರೈತರಿಗೆ ಬಡ್ಡಿ ರಹಿತ ಸಾಲ ಕೊಡಬೇಕು. ಸಾಲ ಮನ್ನಾ ಮಾಡುವುದರಲ್ಲಿ ರಾಜಕೀಯ ಉದ್ದೇಶವಿದೆ. ಇದನ್ನು ಮನವರಿಕೆ ಮಾಡಿಸಲು ಭಿಕ್ಷೆಯಂತೆ ಮತ ಬೇಡುತ್ತಿದ್ದೇನೆ.

– ಸೋಮಶೇಖರ್ ವಿ.ಎಸ್, ರೈತ ಭಾರತ ಪಕ್ಷದ ಅಭ್ಯರ್ಥಿ

* ಕೋವಿಡ್ ಸಂದರ್ಭದಲ್ಲಿ ಸರ್ಕಾರವು ಅತಿಥಿ ಉಪನ್ಯಾಸಕರಿಗೆ ಸರಿಯಾಗಿ ವೇತನ ಕೊಡಲಿಲ್ಲ. ನಮ್ಮನ್ನು ಕೀಳಾಗಿ ನೋಡಬಾರದು ಎಂಬ ಸಂದೇಶವೂ ನನ್ನ ಸ್ಪರ್ಧೆಯಲ್ಲಿದೆ.

– ಈಶ್ವರ ಗೌಡ, ಪಕ್ಷೇತರ ಅಭ್ಯರ್ಥಿ

* ಕಲುಷಿತಗೊಂಡಿರುವ ರಾಜಕೀಯದಲ್ಲಿ ಕ್ಷೇತ್ರ ಶುದ್ಧಗೊಳ್ಳಬೇಕು. ಮತದಾರರಲ್ಲಿ ಎಷ್ಟು ಮಂದಿ ಪ್ರಾಮಾಣಿಕರಿದ್ದಾರೆ ಎಂದು ಅರಿಯುವುದೂ ನಾನು ಸ್ಪರ್ಧಿಸುತ್ತಿರುವುದರ ಉದ್ದೇಶವಾಗಿದೆ.

– ದತ್ತಾತ್ರಯ ನಾಯ್ಕ, ಪಕ್ಷೇತರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT