ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಹೊಂಡ ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರ

ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಆರೋಪ
Last Updated 9 ಜನವರಿ 2020, 12:44 IST
ಅಕ್ಷರ ಗಾತ್ರ

ಶಿರಸಿ: ಅರಣ್ಯ ಇಲಾಖೆ ಮಳೆಗಾಲದಲ್ಲಿ ಗಿಡ ನೆಡಲು ಕೈಗೆತ್ತಿಕೊಂಡಿರುವ ಹೊಂಡ ಹೊಡೆಯುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆಯಿದೆ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಆರೋಪಿಸಿದರು.

ಗುರುವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ನಿಯಮದಂತೆ ಗಿಡ ನೆಡಲು ಒಂದೂವರೆ ಅಡಿ ಆಳದ ಗುಂಡಿ ತೋಡಬೇಕು. ಆದರೆ, ಈಗಾಗಲೇ ತಾಲ್ಲೂಕಿನ ಹಲವೆಡೆಗಳಲ್ಲಿ ತೆಗೆದಿರುವ ಗುಂಡಿ ಅರ್ಧ ಅಡಿ ಆಳವೂ ಆಗಿಲ್ಲ. ಅದರೊಳಗೆ ಸಸಿಯನ್ನಿಟ್ಟು ಮಣ್ಣು ಮುಚ್ಚಲೂ ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿ ಚಿತ್ರಸಹಿತ ದಾಖಲೆ ನನ್ನ ಬಳಿ ಇದೆ’ ಎಂದು ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹೊಂಡ ತೆಗೆದಿರುವ ಗುತ್ತಿಗೆದಾರರಿಗೆ ಹಣ ಪಾವತಿಸಬಾರದು. ಹೊಸದಾಗಿ ಹೊಂಡ ತೆಗೆದು ಗಿಡ ನೆಡಬೇಕು ಎಂದು ಅವರು ಸೂಚಿಸಿದರು. ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಮಣ್ಣು ತೆಗೆಯಲು ಸಹ ಅರಣ್ಯ ಇಲಾಖೆ ಅಧಿಕಾರಿಗಳು ಕಿರಿಕಿರಿ ಮಾಡುತ್ತಾರೆ ಎಂದು ಸದಸ್ಯ ನಾಗರಾಜ ಶೆಟ್ಟಿ ಆರೋಪಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಮಕ್ಕಳಿಗೆ ಎರು ಶಾಲಾ ಮಟ್ಟದ ಪೂರ್ವಭಾವಿ ಪರೀಕ್ಷೆ, ಒಂದು ರಾಜ್ಯ ಮಟ್ಟದ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಶಿಕ್ಷಕರು, ಮಕ್ಕಳ ಆಸಕ್ತಿಯಿಂದ ತರಕಾರಿ ಬೆಳೆಸಲಾಗಿದೆ. ಈ ತರಕಾರಿ ಬಿಸಿಯೂಟಕ್ಕೆ ಬಳಕೆಯಾಗುತ್ತಿದೆ ಎಂದು ಬಿಇಒ ಸದಾನಂದ ಸ್ವಾಮಿ ಹೇಳಿದರು.

ಶಾಲೆಗಳಲ್ಲಿ ಮಕ್ಕಳಿಗೆ ಗೋಧಿ ಆಹಾರದ ಬದಲಾಗಿ ಅಕ್ಕಿ ಆಹಾರವನ್ನೇ ನೀಡಿದರೆ ಉತ್ತಮ ಎಂದು ಸದಸ್ಯೆ ರತ್ನಾ ಶೆಟ್ಟಿ ಸಲಹೆ ಮಾಡಿದರು.

ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡ ಜುಲೈ ವೇಳೆಗೆ ಹಸ್ತಾಂತರವಾಗುವ ಸಾಧ್ಯತೆಯಿದೆ. ಕಾಮಗಾರಿ ಪೂರ್ಣಗೊಳಿಸಲು ಏಪ್ರಿಲ್ ತನಕ ಗುತ್ತಿಗೆದಾರರಿಗೆ ಗುಡುವು ನೀಡಲಾಗಿತ್ತು. ಅವರು ಮೂರು ತಿಂಗಳ ಅವಧಿ ವಿಸ್ತರಣೆಗೆ ಕೇಳಿಕೊಂಡಿದ್ದಾರೆ ಎಂದು ಆಡಳಿತ ವೈದ್ಯಾಧಿಕಾರಿ ಡಾ.ಗಜಾನನ ಭಟ್ಟ ಹೇಳಿದರು.

ಅತಿವೃಷ್ಟಿಯಿಂದ ಹಾನಿಯಾಗಿದ್ದ ತಾಲ್ಲೂಕಿನ 242 ಮನೆಗಳಿಗೆ ಒಟ್ಟು ₹ 1.05 ಕೋಟಿ ಪರಿಹಾರ ವಿತರಿಸಲಾಗಿದೆ. ಕೃಷಿ ಜಮೀನಿಗೆ ನೀರು ನುಗ್ಗಿದ 1217 ಪ್ರಕರಣಗಳಿಗೆ ಸಂಬಂಧಿಸಿ ₹ 1.19 ಕೋಟಿ ಪರಿಹಾರವನ್ನು ಫಲಾನುಭವಿ ಖಾತೆಗೆ ಜಮಾ ಮಾಡಲಾಗಿದೆ. ದಾಖಲೆ ಹೊಂದಾಣಿಕೆಯಲ್ಲಿ ಸಮಸ್ಯೆಯಿರುವ ಕೆಲವೇ ಪ್ರಕರಣ ಹೊರತುಪಡಿಸಿ ಇನ್ನುಳಿದ ಎಲ್ಲರಿಗೂ ಪರಿಹಾರ ದೊರೆತಿದೆ ಎಂದು ಕಂದಾಯ ಇಲಾಖೆಯ ಡಿ.ಅರ್.ಬೆಳ್ಳಿಮನೆ ಹೇಳಿದರು.

ಕಳೆದ ಬಾರಿ ಮಂಗನ ಕಾಯಿಲೆಯ ಕಾರಣವೊಡ್ಡಿ ಬನವಾಸಿಯಲ್ಲಿ ಕದಂಬೋತ್ಸವ ಮುಂದೂಡಲಾಗಿತ್ತು. ಈ ಬಾರಿ ಅನುದಾನ ಬಿಡುಗಡೆಯಾಗಿದ್ದರೂ ಉತ್ಸವದ ದಿನಾಂಕ ಘೋಷಣೆಯಾಗಿಲ್ಲ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT