ಸೋಮವಾರ, ಜನವರಿ 20, 2020
22 °C
ಆರನೇ ವರ್ಷದ ಮೇಳದಲ್ಲಿ ₹ 3 ಲಕ್ಷಕ್ಕೂ ಅಧಿಕ ವಹಿವಾಟು

ಜೊಯಿಡಾ: ಜನಾಕರ್ಷಿಸಿದ ಗೆಡ್ಡೆ ಗೆಣಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೊಯಿಡಾ: ‘ತಾಲ್ಲೂಕಿನ ಜನರು ಸಾಂಪ್ರದಾಯಿಕವಾಗಿ ಗೆಡ್ಡೆ ಗೆಣಸುಗಳನ್ನು ಬೆಳೆದು ತಳಿಗಳನ್ನು ರಕ್ಷಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವ ಭತ್ತ ಮತ್ತು ಗೆಡ್ಡೆ ಗೆಣಸು ತಳಿಗಳ ಸಂರಕ್ಷಣೆ ಹೆಚ್ಚಾಗಬೇಕಿದೆ’ ಎಂದು ಗೋವಾ ಜೀವ ವೈವಿಧ್ಯ ಮಂಡಳಿ ಸದಸ್ಯ ರಾಜೇಂದ್ರ ಕೇರಕರ್ ಅಭಿಪ್ರಾಯಪಟ್ಟರು.

ಇಲ್ಲಿ ಬುಧವಾರ ಕುಣಬಿ ಸಮಾಜ ಅಭಿವೃದ್ದಿ ಸಂಘ ಮತ್ತು ಗೆಡ್ಡೆ ಗೆಣಸು ಬೆಳೆಗಾರರ ಸಂಘ ಹಮ್ಮಿಕೊಂಡ ‘ಗೆಡ್ಡೆ ಗೆಣಸು ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಎಸ್.ಎಚ್.ಚನ್ನವೀರ ಸ್ವಾಮಿ ಮಾತನಾಡಿ, ‘ಬುಡಗಟ್ಟು ಜನರು ಇಂತಹ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಪರಿಸರ ತಜ್ಞ ಬಾಲಚಂದ್ರ ಹೆಗಡೆ ಸಾಯಿಮನೆ ಮಾತನಾಡಿದರು. ಕುಣಬಿ ಸಮಾಜದ ಅಧ್ಯಕ್ಷರೂ ಆಗಿರುವ ಕಾರ್ಯಕ್ರಮದ ಸಂಘಟಕ ಡಾ.ಜಯಾನಂದ ಡೇರೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ಗೆಣಸುಗಳನ್ನು ಬೆಳೆಯುತ್ತಿರುವ ರಾಮನಗರದ ಮಹಾದೇವ ಯಶ್ವಂತ ಮಿರಾಶಿ ಹಾಗೂ ಮೇಳವನ್ನು ಸಂಘಟಿಸಲು ಪ್ರಮುಖ ಪಾತ್ರ ವಹಿಸುತ್ತಿರುವ ವಿಷ್ಣು ಡೇರೇಕರ್ ಅವರನ್ನು ಸನ್ಮಾನಿಸಲಾಯಿತು.

ಜೊಯಿಡಾ, ಶಿರಸಿ, ಯಲ್ಲಾಪುರ, ಹಳಿಯಾಳ ತಾಲ್ಲೂಕುಗಳ 125ಕ್ಕೂ ಹೆಚ್ಚು ರೈತರು, ಮಹಿಳೆಯರು ಈ ವರ್ಷದ ಮೇಳದಲ್ಲಿ ಪಾಲ್ಗೊಂಡರು. 52 ವಿವಿಧ ಜಾತಿಗಳ ಗೆಡ್ಡೆ ಗೆಣಸುಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು. ಖರೀದಿಗೆಂದು ಗೋವಾ, ಬೆಳಗಾವಿ, ಧಾರವಾಡ, ದಾಂಡೇಲಿ ಭಾಗದಿಂದಲೂ ಜನರು ಬಂದಿದ್ದರು. ಈ ಮೇಳದಲ್ಲಿ ಸುಮಾರು ₹ 3 ಲಕ್ಷಕ್ಕೂ ಹೆಚ್ಚಿನ ವಹಿವಾಟು ನಡೆಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ನಾಯ್ಕ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವಪ್ರಸಾದ ಗಾಂವಕರ, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದ ಅಮರೇಶ, ಜೊಯಿಡಾ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಬಾಬಾ ಸಾಹೇಬ್ ಹುಲ್ಲಣ್ಣವರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು