ಶುಕ್ರವಾರ, ಮೇ 27, 2022
22 °C
ಅಚವೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ

ಉತ್ತರ ಕನ್ನಡ: ಜಿಲ್ಲೆಯಲ್ಲಿ 23 ಹೊಸ ಗ್ರಾಮಗಳ ರಚನೆ -ಸಚಿವ ಅಶೋಕ್ ಘೋಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಚವೆ (ಕಾರವಾರ): 'ಉತ್ತರ ಕನ್ನಡದಲ್ಲಿ 23 ಹೊಸ ಗ್ರಾಮಗಳನ್ನು ಘೋಷಣೆ ಮಾಡಲಾಗುವುದು. ಕಂದಾಯ ಇಲಾಖೆಯಿಂದ 110 ಎಕರೆ ಜಮೀನನ್ನು ಸಾರ್ವಜನಿಕ ಕಟ್ಟಡಗಳ ನಿರ್ಮಾಣಕ್ಕೆಂದು ಮಂಜೂರು ಮಾಡಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್ ಪ್ರಕಟಿಸಿದರು.

ಅಂಕೋಲಾ ತಾಲ್ಲೂಕಿನ ಅಚವೆಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಜಿಲ್ಲೆಯಲ್ಲಿ ಗಂಭೀರವಾಗಿರುವ ಇ ಸ್ವತ್ತು ಸಮಸ್ಯೆ ಬಗೆಹರಿಸಲು ಸಂಪುಟ ಉಪ ಸಮಿತಿ ರಚಿಸಲಾಗಿದೆ. ಈ ಸಮಸ್ಯೆಗೆ ಶೀಘ್ರವೇ ಮುಕ್ತಿ ನೀಡಲಾಗುವುದು' ಎಂದು ಭರವಸೆ ನೀಡಿದರು.

'ಕೋವಿಡ್ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಕಂದಾಯ ಇಲಾಖೆಯಿಂದ ರೂ 26 ಕೋಟಿ ಬಿಡುಗಡೆ ಮಾಡಲಾಗಿದೆ. ಸೋಂಕಿನಿಂದ ಮೃತರ ಕುಟುಂಬಗಳಿಗೆ ಪರಿಹಾರವಾಗಿ ರೂ 10 ಕೋಟಿ ನೀಡಲಾಗಿದೆ. ಬೆಳೆ ಹಾನಿಗೆ ಪರಿಹಾರವಾಗಿ ₹ 5.60 ಕೋಟಿ, ನೆರೆಯಿಂದ ಹಾನಿಗೀಡಾದ ಮನೆಗಳ ದುರಸ್ತಿ, ಪುನರ್ವಸತಿಗಾಗಿ ₹11.99 ಕೋಟಿ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ ಪಿಂಚಣಿ ಫಲಾನುಭವಿಗಳಿಗೆ ₹ 180 ಕೋಟಿ ಬಿಡುಗಡೆ ಮಾಡಲಾಗುತ್ತಿದೆ' ಎಂದು ತಿಳಿಸಿದರು.

'ಈ ಹಿಂದೆ ಕಂದಾಯ ಇಲಾಖೆಗಳ ದಾಖಲೆಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ತಿಂಗಳುಗಟ್ಟಲೆ ಕಾಯಬೇಕಿತ್ತು. ಜನ ಪ್ರತಿ ಬಾರಿಯೂ ಅದದೇ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳಿಗೆ ಅಲೆದಾಡಬೇಕಿತ್ತು. ಇದು ನನ್ನ ಮನಸ್ಸಿಗೆ ಬಂದು, ವ್ಯವಸ್ಥೆಯನ್ನು ಪರಿವರ್ತನೆ ಮಾಡಲು ಯೋಚಿಸಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಬಳಿಗೆ ಬಂದಾಗ ವಿಶ್ವಾಸ ಮೂಡುತ್ತದೆ' ಎಂದರು.

'ಈಗ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಅಭಿಯಾನದ ಮೂಲಕ ರಾಜ್ಯದ 250 ಕಡೆಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ಇದರ ಸಕಾರಾತ್ಮಕ ಪರಿಣಾಮದಿಂದಾಗಿ ವಿರೋಧ ಪಕ್ಷಗಳ ಶಾಸಕರೂ ಮೆಚ್ಚಿಕೊಂಡಿದ್ದಾರೆ' ಎಂದು ಹೇಳಿದರು.

'50 ಲಕ್ಷ ಕಂದಾಯ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ನೀಡಲಾಗಿದೆ. ಈ ಹಿಂದೆ ರೈತರೇ ಅಧಿಕಾರಿಗಳ ಬಳಿಗೆ ಹೋಗಬೇಕಿತ್ತು. ಇದರಿಂದ ಅವರ ಹಣ, ಶ್ರಮ, ಸಮಯ ಎಲ್ಲವೂ ವ್ಯರ್ಥವಾಗುತ್ತಿತ್ತು. ಬಡವರ ಕಷ್ಟವನ್ನು ಕೇಳುವವರು ಇರಲಿಲ್ಲ. ಅದಕ್ಕಾಗಿ ವಿಶೇಷವಾದ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ರೀತಿಯ ವಾಸ್ತವ್ಯ ನಿರಂತರವಾಗಿ ನಡೆಯಬೇಕು' ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 'ಇ ಸ್ವತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ. ನಾನು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹಾಗೂ ನೀವು (ಅಶೋಕ್) ಸಭೆ ಸೇರಿ ನಿರ್ಧಾರ ಮಾಡೋಣ' ಎಂದು ಹೇಳಿದರು.

ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, 'ಜಿಲ್ಲೆಯಲ್ಲಿ ಇ ಸ್ವತ್ತು, ಹಂಗಾಮಿ ಲಾಗಣಿ, ಅರಣ್ಯ ಒತ್ತುವರಿ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಅಧಿಕಾರಿಗಳು ಧೈರ್ಯದಿಂದ ಕೆಲಸ ಮಾಡಬೇಕು' ಎಂದರು.

ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಾಸಕ ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯ ಶಾಂತರಾಮ ಸಿದ್ದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ.ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಗ್ರಾಮ ಪಂಚಾಯಿತಿ ಅಧ್ಯಕ್ಷರಿದ್ದರು.

4,820 ಪ್ರಮಾಣ ಪತ್ರ ವಿತರಣೆ: ಕಂದಾಯ ಇಲಾಖೆಯ 1458, ಪಂಚಾಯತ್‌ರಾಜ್ ಇಲಾಖೆಯ 1390, ಸಮಾಜ ಕಲ್ಯಾಣ ಇಲಾಖೆಯ 42, ಕೃಷಿ ಇಲಾಖೆಯ 86, ತೋಟಗಾರಿಕೆ ಇಲಾಖೆಯ 161, ರೇಷ್ಮೆ ಇಲಾಖೆಯ 24, ಅರಣ್ಯ ಇಲಾಖೆಯ 13, ಕಾರ್ಮಿಕ ಇಲಾಖೆಯ 311, ಆರೋಗ್ಯ ಇಲಾಖೆಯ 489, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 262, ಮೀನುಗಾರಿಕೆ ಇಲಾಖೆಯ 39, ಪಶು ಸಂಗೋಪನಾ ಇಲಾಖೆಯ 43, ಹೆಸ್ಕಾಂ 493 ಹಾಗೂ ನಗರಾಭಿವೃದ್ಧಿ ಇಲಾಖೆಯ 9 ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಗ್ರಾಮಕ್ಕೆ ₹ 1 ಕೋಟಿ ಬಿಡುಗಡೆ: ಅಚವೆ ಗ್ರಾಮದಲ್ಲಿ ವಾಸ್ತವ್ಯ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವ ಅಶೋಕ್, ₹ 1 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿದ್ದಾಗಿ ತಿಳಿಸಿದರು.

ಮಾಣಿಗದ್ದೆ- ಅಚವೆ ಸೇತುವೆ ನಿರ್ಮಾಣಕ್ಕೆ ₹ 25 ಲಕ್ಷ, ಅಚವೆ- ಕುಂಟಗಣಿ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ, ಗ್ರಾಮದ ದುರ್ಗಾಂಬಿಕಾ ದೇಗುಲದ ರಸ್ತೆ ಅಭಿವೃದ್ಧಿಗೆ ₹ 25 ಲಕ್ಷ, ಮತ್ತೊಂದು ರಸ್ತೆ ನಿರ್ಮಾಣಕ್ಕೆ ₹ 10 ಲಕ್ಷ ಮತ್ತು ಹಿಲ್ಲೂರಿನಲ್ಲಿ ಸಭಾಭವನ ನಿರ್ಮಾಣಕ್ಕೆ ₹ 15 ಲಕ್ಷ ಅನುದಾನ ನೀಡಿರುವುದಾಗಿ ಸಚಿವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು