ಶುಕ್ರವಾರ, ಜನವರಿ 22, 2021
29 °C

ಕುಮಟಾ: ತಮಿಳುನಾಡು ಮೂಲದ ಇಬ್ಬರು ಮನೆಗಳ್ಳರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಪಟ್ಟಣ ಹಾಗೂ ಬೆಂಗಳೂರು ಸುತ್ತಮುತ್ತ ಮನೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಟಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅವರಿಂದ ಕಳವು ಮಾಡಿದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತಮಿಳುನಾಡಿನ ‌ಹೊಸೂರು ನಿವಾಸಿಗಳಾದ ಜಿ.ಗೋಪಿ ಹಾಗೂ ಡೇವಿಡ್ ಬಂಧಿತರು. ಗೋಪಿಯ ತಮ್ಮ, ಮತ್ತೊಬ್ಬ ಆರೋಪಿ ರಾಜು ತಪ್ಪಿಸಿಕೊಂಡಿದ್ದಾನೆ. ಕುಮಟಾದ ಹೆಗಡೆ ಕ್ರಾಸ್ ಎದುರು ರಾಷ್ಟ್ರೀಯ ಹೆದ್ದಾರಿ 66ರ ಅಂಚಿನ ಗಜಾನನ ಗೌರಯ್ಯ ಅವರ ಮನೆಯಲ್ಲಿ ಈಚೆಗೆ ₹ 9.81 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿತ್ತು. ಪ್ರಕರಣವನ್ನು ಭೇದಿಸಲು ಭಟ್ಕಳದ ಎ.ಎಸ್‌.ಪಿ ನಿಖಿಲ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.

ಫೋರ್ಡ್ ಕಾರಲ್ಲಿ ಸಂಚಾರ!

 ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ‘ಕುಮಟಾದ ಗಿಬ್ ವೃತ್ತದಲ್ಲಿ ಸೋಮವಾರ ಬೆಳಿಗ್ಗೆ ಫೋರ್ಡ್ ಕಾರೊಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಗಸ್ತು ತಿರುಗುತ್ತಿದ್ದ ಪೊಲೀಸರು ಅದನ್ನು ತಡೆದು ತಪಾಸಣೆ ನಡೆಸಿದಾಗ ಕಬ್ಬಿಣದ ಸಲಾಕೆ ಮತ್ತಿತರ ಮಾರಕಾಸ್ತ್ರಗಳು ಕಂಡವು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿವಿಧ ಊರುಗಳಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು ತಿಳಿಯಿತು’ ಎಂದು ಹೇಳಿದರು.

‘ರಾಜು ವಿರುದ್ಧ ಬೆಂಗಳೂರು ಸುತ್ತಮುತ್ತ 26, ಗೋಪಿ ವಿರುದ್ಧ 11 ಹಾಗೂ ಡೇವಿಡ್ ವಿರುದ್ಧ ಆರು ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ. ಬಂಧಿತರಿಂದ ಕುಮಟಾದಲ್ಲಿ ಕಳವು ಮಾಡಿದ ಆಭರಣ, ನಗದು ವಶಪಡಿಸಿಕೊಳ್ಳಲಾಗಿದೆ. ಅಂಕೋಲಾದ ಕೃಷ್ಣಕುಮಾರ ಗಣಪತಿ ನಾಯ್ಕ ಅವರ ಮನೆಯಿಂದ ಕದ್ದ ₹ 18 ಸಾವಿರ ನಗದು ಸಹ ಸಿಕ್ಕಿದೆ. ಕೃತ್ಯಕ್ಕೆ ಬಳಸಿದ ಕಾರನ್ನೂ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಪೊಲೀಸ್ ಸಿಬ್ಬಂದಿ ನಿಯೋಜನೆ

‘ಪಟ್ಟಣದ ಹೊರವಲಯದಲ್ಲಿರುವ ಒಂಟಿ ಮನೆಗಳ ನಿವಾಸಿಗಳು ಹೊರಗೆ ಹೋಗುವ ಮುನ್ನ ಸ್ಥಳೀಯ ಬೀಟ್ ಪೊಲೀಸರಿಗೆ ಅಥವಾ ಠಾಣೆಗೆ ತಿಳಿಸಿದರೆ ನಿಗಾ ಇಡಲು ಅನುಕೂಲವಾಗುತ್ತದೆ. ಇದಕ್ಕಾಗಿಯೇ ಕುಮಟಾದಲ್ಲಿ 18 ಪೊಲೀಸ್ ಬೀಟ್‌ಗಳನ್ನು ಆರಂಭಿಸಲಾಗಿದೆ. ಪಟ್ಟಣದಲ್ಲಿ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಬೆಳಿಗ್ಗೆ 9ರಿಂದ 11 ಹಾಗೂ ಸಂಜೆ 5ರಿಂದ 7ವರೆಗೆ ಅಲ್ಲಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು’ ಎಂದು ಶಿವಪ್ರಕಾಶ್ ದೇವರಾಜು ತಿಳಿಸಿದರು.

ಪೊಲೀಸರ ತಂಡದಲ್ಲಿ ಸಿ.ಪಿ.ಐ ಪರಮೇಶ್ವರ ಗುನಗಾ, ಪಿ.ಎಸ್.ಐ ಆನಂದಮೂರ್ತಿ, ಸಿಬ್ಬಂದಿ ಮಾರುತಿ ಗಾಳಿಪೂಜಿ, ದಯಾನಂದ ನಾಯ್ಕ, ಸಂತೋಷ ಬಾಳೇರ, ಕೃಷ್ಣ.ಎನ್.ಜೆ., ಬಸವರಾಜ ಜಾಡರ್, ಹುಚ್ಚಪ್ಪ ಚಾವಡಿ, ಸುರೇಂದ್ರ ಮಗದಮ್ಮ, ಹಾಲಪ್ಪ ಬಾಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು