ಸೋಮವಾರ, ಏಪ್ರಿಲ್ 12, 2021
26 °C
ಜಿಲ್ಲೆಯಲ್ಲಿ ಸುಗಮವಾಗಿ ನಡೆಯುತ್ತಿರುವ ಲಸಿಕಾ ಅಭಿಯಾನ: ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಸುಗಮವಾಗಿ ನಡೆಯುತ್ತಿರುವ ಲಸಿಕಾ ಅಭಿಯಾನ: ಜಿಲ್ಲಾಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಹೆಚ್ಚು ಜನರಿಗೆ ಕೋವಿಡ್ ಲಸಿಕೆ ವಿತರಿಸಿದ ರಾಜ್ಯದ ಅಗ್ರ ಐದು ಜಿಲ್ಲೆಗಳಲ್ಲಿ ಉತ್ತರ ಕನ್ನಡವೂ ಒಂದು. ಮೊದಲ ಡೋಸ್ ಅನ್ನು ಶೇ 84ರಷ್ಟು ಹಾಗೂ ಎರಡನೇ ಡೋಸ್‌ ಅನ್ನು ಶೇ 73.60ರಷ್ಟು ಮಂದಿ ಪಡೆದುಕೊಂಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಲಸಿಕೆ ವಿತರಣಾ ಕಾರ್ಯವು ಸುಗಮವಾಗಿ ನಡೆಯುತ್ತಿದೆ. ಕೋವಿಶೀಲ್ಡ್ ಲಸಿಕೆ ಪಡೆದುಕೊಂಡವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ. ಮೂರನೇ ಹಂತದ ಅಭಿಯಾನವು ಜಾರಿಯಾಗಿದ್ದು, ಸಾರ್ವಜನಿಕರು ನಿರ್ಭೀತಿಯಿಂದ ಸಮೀಪದ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬಹುದು’ ಎಂದರು.

‘ಎಲ್ಲ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರದಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳು, ಐದು ಖಾಸಗಿ ಆಸ್ಪತ್ರೆಗಳಲ್ಲಿ ವಾರ ಪೂರ್ತಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಲಸಿಕೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಸಾರ್ವಜನಿಕರು ಲಸಿಕಾ ಕೇಂದ್ರಕ್ಕೆ ಭೇಟಿ ನೀಡುವಾಗ ಆಧಾರ್ ಕಾರ್ಡ್, ವೋಟರ್ ಐಡಿ, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಚಾಲನಾ ಪರವಾನಗಿ ಅಥವಾ ಭಾವಚಿತ್ರ ಇರುವ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.

8ರಿಂದ ವಿವಿಧೆಡೆ ವಿತರಣೆ:

‘ಮಾರ್ಚ್ 8ರಿಂದ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಗೂ ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕದಡಿಯಲ್ಲಿ ನೋಂದಣಿ ಪಡೆದಿರುವ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳ ಪೈಕಿ ಶಿರಸಿಯ ಟಿ.ಎಸ್‍.ಎಸ್ ಆಸ್ಪತ್ರೆ, ಹೊನ್ನಾವರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ, ಕುಮಟಾದ ಕೆನರಾ ಹೆಲ್ತ್ ಕೇರ್ ಸೆಂಟರ್ ಹಾಗೂ ಹೈಟೆಕ್ ಲೈಫ್ ಲೈನ್ ಆಸ್ಪತ್ರೆ, ಕಾರವಾರದ ಅರ್ಥ್ ಮೆಡಿಕಲ್ ಸೆಂಟರ್‌ನವರು ಲಸಿಕೆ ವಿತರಣೆಗೆ ಮುಂದೆ ಬಂದಿದ್ದಾರೆ’ ಎಂದು ಹೇಳಿದರು.

‘ಸಾರ್ವಜನಿಕರು ಎಲ್ಲ ನಗರ ಹಾಗೂ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಉಚಿತವಾಗಿ, ಖಾಸಗಿ ಆಸ್ಪತ್ರೆಯಲ್ಲಿ ₹ 250 ಪಾವತಿಸಿ ಲಸಿಕೆ ಪಡೆದುಕೊಳ್ಳಬಹುದು’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಆರ್.ಸಿ.ಎಚ್ ಡಾ.ರಮೇಶ್ ರಾವ್ ಇದ್ದರು.

ಲಸಿಕೆ ವಿತರಣೆ: ಅಂಕಿ–ಅಂಶ

14,332

ಮೊದಲ ಹಂತದಲ್ಲಿ ನೋಂದಣಿ ಮಾಡಿಸಿದವರು

12,180

ಮೊದಲ ಡೋಸ್ ಲಸಿಕೆ ಪಡೆದವರು

8,964

ಎರಡನೇ ಡೋಸ್‍ ಪಡೆದವರು

5,845

ಎರಡನೇ ಹಂತದಲ್ಲಿ ನೋಂದಾಯಿಸಿಕೊಂಡವರು

4,484 

ಮೊದಲ ಡೋಸ್‍ ಪಡೆದವರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು