ಭಾನುವಾರ, ಆಗಸ್ಟ್ 14, 2022
28 °C
ಗ್ರಾಮ, ಇತರ ಸಂಘ ಸಂಸ್ಥೆಗಳ ಮಾಹಿತಿ ನೀಡಲು ಜಿ.ಪಂ ಸಿ.ಇ.ಒ ಪ್ರಿಯಾಂಗಾ ಸೂಚನೆ

ಕಾರವಾರ: ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಮೇಳಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಜಿಲ್ಲೆಯಲ್ಲಿ ಶೀಘ್ರವೇ ಕೋವಿಡ್ ಲಸಿಕಾ ಮೇಳ ಮೇಳ ಆಯೋಜಿಸಲಾಗುತ್ತಿದೆ. ಇದಕ್ಕೆ ಆಯಾ ತಾಲ್ಲೂಕಿನವರು ತಮ್ಮ ಭಾಗದಲ್ಲಿ ಲಸಿಕೆ ಕೊಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಎಲ್ಲ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ, ಅವರ ಕಾರ್ಯಕ್ಷಮತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

‘ಲಸಿಕೆ ತೆಗೆದುಕೊಳ್ಳದಿರುವ ಗ್ರಾಮ ಮತ್ತು ಇತರ ಸಂಘ ಸಂಸ್ಥೆಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಗ್ರಾಮದಲ್ಲಿ ಲಸಿಕಾ  ಮೇಳ ಇರುವಾಗ ಅಲ್ಲಿಗೆ ವಾಹನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಇರುವ ಇತರ ಇಲಾಖೆಗಳ ವಾಹನಗಳನ್ನು ಬಳಸಿಕೊಳ್ಳಬೇಕು. ಯಾರಿಗೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದರು’ ಎಂದು ನಿರ್ದೇಶನ ನೀಡಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಐಸೋಲೇಶನ್ ಕೇಂದ್ರ ತೆರೆಯಬೇಕು. ಅದಕ್ಕೆ ಶೌಚಾಲಯ, ಬೆಳಕು, ನೀರಿನ ವ್ಯವಸ್ಥೆ ಇರುವಂಥ ಕಟ್ಟಡ ಗುರುತಿಸಬೇಕು’ ಎಂದು ಸೂಚಿಸಿದರು.

‘ಸ್ವ ಸಹಾಯ ಸಂಘದ ಸದಸ್ಯರು ಮತ್ತು ಉದ್ಯೋಗ ಖಾತ್ರಿ ಕಾರ್ಡ್ ಹೊಂದಿರುವವರನ್ನು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮೆ ಯೋಜನೆಯಡಿ ತಪ್ಪದೇ ನೋಂದಣಿ ಮಾಡಿಸಬೇಕು. ಹಳೆ ಸದಸ್ಯರನ್ನು ನವೀಕರಣ ಮಾಡಿಸಬೇಕು.‌ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಕೆಲಸ ನಿಂತು ಹೋಗಿದ್ದರೆ ಕೆಲಸವನ್ನು ಕೂಡಲೇ ಆರಂಭಿಸಬೇಕು. ಕಳೆದ ವರ್ಷ ಕೈಗೊಳ್ಳಲಾದ ಕಾಮಗಾರಿಯಲ್ಲಿ ಕೆಲವನ್ನು ಕೂಡಲೇ ಶುರು ಮಾಡಬೇಕು. ಜೊತೆಗೆ, ಕೆಲಸದ ಅಂದಾಜು ಪಟ್ಟಿ ಸಲ್ಲಿಸಬೇಕು ಎಂದು ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನ ಯೋಜನೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕದ ಬಗ್ಗೆ ಮಾಹಿತಿ ಪಡೆದ ಅವರು, ‘ಸ್ವಚ್ಛ ಸಂರ್ಕೀಣದಲ್ಲಿ ಕಾರ್ಯನಿರ್ವಹಿಸುವ ಚಾಲಕರಿಗೆ ಗ್ರಾಮ ಪಂಚಾಯಿತಿಯಿಂದ ವೇತನ ನೀಡಲು ಅವಕಾಶ ಇಲ್ಲ. ಈ ರೀತಿ ಆಗಿದ್ದರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಶೌಚಾಲಯ ನಿರ್ಮಾಣ:

‘ಆ.31ರೊಳಗೆ ಘನ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ಪೂರ್ಣಗೊಳಿಸಬೇಕು. ಶೌಚಾಲಯ ಇರುವ ಪ‍್ರವಾಸಿ ತಾಣ ಮತ್ತು ಎಲ್ಲೆಲ್ಲಿ ನಿರ್ಮಿಸಬೇಕಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಕಟ್ಟಡ ನಿರ್ಮಾಣಕ್ಕೆ ಸಮಸ್ಯೆಯಾದಲ್ಲಿ ಮೊಬೈಲ್ ಶೌಚಾಲಯ ನಿರ್ಮಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ನಾಗೇಶ್ ರಾಯ್ಕರ್ (ಆಡಳಿತ), ಎನ್.ಜಿ.ನಾಯ್ಕ (ಅಭಿವೃದ್ಧಿ), ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು