ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಬ್ರಿಟಿಷರ ಕಾಲದಿಂದಲೂ ಪ್ರಸಿದ್ಧವಾದ ಕಡಲತೀರದತ್ತ ಗಮನ ಅಗತ್ಯ

ಕುಡುಕರ ಅಡ್ಡೆಯಾದ ವನ್ನಳ್ಳಿ ಬೀಚ್

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ಪಟ್ಟಣದ ವನ್ನಳ್ಳಿ ಸಮುದ್ರ ತೀರ ಪಾನಪ್ರಿಯರಿಂದ ಅಂದಗೆಡುತ್ತಿದೆ. ಪ್ರಶಾಂತವಾದ ಸಮುದ್ರ ತೀರದಲ್ಲಿ ಗೆಳೆಯರೊಟ್ಟಿಗೆ ಕುಳಿತು ಬಿಯರ್ ಕುಡಿದು ಖಾಲಿ ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಿದ್ದಾರೆ. 

ನೂರಿನ್ನೂರು ಅಡಿ ಎತ್ತರದ, ಮೈಲುಗಟ್ಟಲೆ ವಿಸ್ತಾರವಾದ ಗುಡ್ಡ ಪ್ರದೇಶದ ಕೆಳಗೆ ಸಮುದ್ರ ಭೋರ್ಗರೆಯುತ್ತದೆ. ಆ ಜಾಗವನ್ನು ಗುರುತಿಸಿದ ಬ್ರಿಟಿಷರು ಅಲ್ಲಿ ಬಂದರು ನಿರ್ಮಿಸಿದ್ದರು. ಅದರಿಂದ ಮುಂಬೈಗೆ, ಅಲ್ಲಿಂದ ಲಂಡನ್ನಿಗೆ ಹತ್ತಿ ರಫ್ತಾಗುತ್ತಿತ್ತು. ಅದರ ಕುರುಹಾಗಿ ಈಗಲೂ ಲಂಡನ್‌ನಲ್ಲಿ ‘ಕುಮಟಾ ಕಾಟನ್ ಮಾರ್ಕೆಟ್’ ಇತ್ತು.

ಕಡಲತೀರದಲ್ಲಿದ್ದ ಬ್ರಿಟಿಷ್ ಕಾಲದ ಹಳೆಯ ಕಟ್ಟಡವೊಂದನ್ನು ನೆಲಸಮ ಮಾಡಿದ ಪ್ರವಾಸೋದ್ಯಮ ಇಲಾಖೆಯು, ಅಲ್ಲಿ ಕುಳಿತುಕೊಳ್ಳಲು ಅಣಬೆ ಆಕಾರದ ಆಸನ, ಕಲ್ಲು ಬೆಂಚು ಅಳವಡಿಸಿದೆ. ಈ ಜಾಗದಲ್ಲಿ ನೀಲಿ ಸಮುದ್ರವು ಆಗಸದ ನೀಲಿಯನ್ನು ಸ್ಪರ್ಶಿಸುವ ದೃಶ್ಯ ನೋಡುತ್ತಾ ಕುಳಿತರೆ ಹೊತ್ತು ಹೋಗುವುದೇ ಅರಿವಿಗೆ ಬರುವುದಿಲ್ಲ. 

ಜನರು ಹಗಲು ತಮ್ಮ ಕುಟುಂಬದೊಂದಿಗೆ ಬಂದು ಇಲ್ಲಿಯ ಆಹ್ಲಾದಕರ ವಾತಾವರಣ ಅನುಭವಿಸಿ ಹೋಗುತ್ತಾರೆ. ರಾತ್ರಿಯಾಗುತ್ತಿದ್ದಂತೆಯೇ ಚಿತ್ರಣವೇ ಬೇರೆಯಾಗುತ್ತದೆ. ಸಮುದ್ರ ತೀರದುದ್ದಕ್ಕೂ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸಿಮೆಂಟ್ ರಸ್ತೆಯೇ ಕುಡುಕರ ಅಡ್ಡೆಯಾಗಿದೆ. 

‘ಸಂಜೆ ಆರು ಗಂಟೆಯವರೆಗೆ ಇಲ್ಲಿ ಇಬ್ಬರು ಲೈಫ್ ಗಾರ್ಡ್‌ಗಳು ಗಸ್ತು ತಿರುಗುತ್ತಾರೆ. ಸಂಜೆ ಆರರ ನಂತರ ಇಲ್ಲಿ ಯಾರೂ ಕೇಳುವವರಿರುವುದಿಲ್ಲ. ಬಾರ್‌ನಲ್ಲಿ ಕುಳಿತು ಕುಡಿಯುವ ಬದಲು ಮದ್ಯದ ಬಾಟಲಿ, ತಿಂಡಿ ತೆಗೆದುಕೊಂಡು ಸೀದಾ ವನ್ನಳ್ಳಿ ಬೀಚ್‌ಗೆ ಬರುತ್ತಾರೆ’ ಎಂದು ಇಲ್ಲಿಯ ಪ್ರಗತಿಪರ ಕೃಷಿಕ ನಿತ್ಯಾನಂದ ನಾಯ್ಕ ತಿಳಿಸುತ್ತಾರೆ.

‘ಪೊಲೀಸ್ ಗಸ್ತು ನೇಮಿಸಿ’: ‘ಸ್ವಚ್ಛತಾ ಅಭಿಯಾನದ ಸಂದರ್ಭದಲ್ಲಿ ಅಧಿಕಾರಿಗಳು, ಕುಮಟಾ ಮುನ್ಸಿಪಲ್ ವ್ಯಾಯಾಮ ಶಾಲೆ ವಿದ್ಯಾರ್ಥಿಗಳು, ಸಾರ್ವಜನಿಕರು, ಪರಿಸರಾಸಕ್ತರು ಇಲ್ಲಿ ಶುಚಿತ್ವ ಮಾಡುತ್ತಾರೆ. ಇಲ್ಲಿಗೆ ಬರುವ ಪ್ರಜ್ಞಾವಂತರು ಇಲ್ಲಿ ಇಟ್ಟಿರುವ ಕಸದ ತೊಟ್ಟಿಯಲ್ಲೇ ಕಸ ಹಾಕುತ್ತಾರೆ. ಆಗಾಗ ಅವು ತುಂಬಿ ತುಳುಕುತ್ತವೆ. ಪೊಲೀಸ್ ಗಸ್ತು ನೇಮಿಸದ ಹೊರತು ಹೊರಗಿನಿಂದ ಇಲ್ಲಿಗೆ ಬಂದು ಕುಡಿದು ಹೋಗುವವರ ಹಾವಳಿ ತಪ್ಪಿಸಲು ಅಸಾಧ್ಯ’ ಎನ್ನುವುದು ಅವರ ಸಲಹೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು