ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆ ತಡೆಗೋಡೆ ನಿರ್ಮಾಣಕ್ಕೆ ಸಹಮತ

ಬೆಳಂಬಾರ ಗ್ರಾಮದಲ್ಲಿ ಪರಿಸರ ಅಹವಾಲು ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ
Last Updated 24 ಫೆಬ್ರುವರಿ 2021, 14:50 IST
ಅಕ್ಷರ ಗಾತ್ರ

ಅಂಕೋಲಾ: ಬೆಳಂಬಾರದಲ್ಲಿ ₹ 130 ಕೋಟಿ ವೆಚ್ಚದಲ್ಲಿ ಉದ್ದೇಶಿತ ಅಲೆ ತಡೆಗೋಡೆ (ಬ್ರೇಕ್ ವಾಟರ್) ಮತ್ತು ಮೀನುಗಾರಿಕೆ ಬಂದರಿನಲ್ಲಿ ದೋಣಿಗಳ ತಂಗುದಾಣ ನಿರ್ಮಾಣ ಯೋಜನೆ ಕುರಿತು ಬುಧವಾರ ಸಾರ್ವಜನಿಕರ ಪರಿಸರ ಅಹವಾಲು ಆಲಿಕೆ ಸಭೆ ನಡೆಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸರ್ಕಾರದ ನಿರ್ಧಾರವನ್ನು ಗ್ರಾಮಸ್ಥರು ಹಾಗೂ ಮೀನುಗಾರರು ಒಕ್ಕೊರಲಿನಿಂದ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಕೃಷ್ಣಮೂರ್ತಿ, ‘ರಾಜ್ಯದಲ್ಲಿ ಇಂಥ ಬಂದರು ಉಡುಪಿಯ ಕಾಪುವಿನಲ್ಲಿದೆ. ಬೆಳಂಬಾರ ಬಂದರನ್ನು ಅದಕ್ಕಿಂತಲೂ ಹೆಚ್ಚು ಸುಸಜ್ಜಿತವಾಗಿ ನಿರ್ಮಿಸಲಾಗುವುದು. ಇಲ್ಲಿನ ಜನರು ಸಲ್ಲಿಸುವ ಅಹವಾಲುಗಳನ್ನು ಪರಿಸರ ಮತ್ತು ವಿವಿಧ ಸಂಬಂಧಿತ ಇಲಾಖೆಗಳಿಗೆ ನೀಡಲಾಗುವುದು. ಜನರ ನೈಜ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು’ ಎಂದರು.

ಯೋಜನಾ ತಜ್ಞ ಬಾಲಕೃಷ್ಣರಾಜ್ ನಿರಚಾರ, ‘ಹಾಲಿ ಬಂದರು 255 ಮೀಟರ್‌ ಉದ್ದವಿದೆ. ನೋಂದಣಿಯಾದ 130 ದೋಣಿಗಳು ಇಲ್ಲಿವೆ. ಇವುಗಳ ನಿಲುಗಡೆ, ಮೀನು ಶೇಖರಣೆ ಹಾಗೂ ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವುದು ಮತ್ತು ಸುತ್ತಲಿನ ಮೀನುಗಾರರ ಜೀವನಮಟ್ಟ ಸುಧಾರಿಸಲು ಯೋಜನೆ ನೆರವಾಗಲಿದೆ’ ಎಂದರು.

‘ಉತ್ತರದ ಅಲೆ ತಡೆಗೋಡೆ, ತಾಣ ತಂಗುದಾಣ ಕಟ್ಟೆ, ಸಜ್ಜುಗೊಳಿಸುವಿಕೆ ಕಟ್ಟೆ, ಹೂಳೆತ್ತುವುದು, ಬಾಹ್ಯ ಅಲಂಕಾರ, ಆಡಳಿತ ಕಚೇರಿ ನಿರ್ಮಾಣ, ಉಪಾಹಾರ ಗೃಹ, ಮೀನುಗಾರರ ವಿಶ್ರಾಂತಿ ತಾಣಗಳು, ರೇಡಿಯೊ ಸಂವಹನ ಗೋಪುರ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುವುದು. ನಿರ್ಮಾಣ ಹಂತದಲ್ಲಿ ಕೌಶಲ ಹೊಂದಿರುವ ಮತ್ತು ಕೌಶಲರಹಿತ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದರು.

ಯೋಜನೆಯ ಪರಿಣಾಮಗಳು

‘ಕಾಮಗಾರಿಯಿಂದ ದೂಳು ಮತ್ತು ತ್ಯಾಜ್ಯಗಳಿಂದ ಮಾಲಿನ್ಯ ಉಂಟಾಗಬಹುದು. ಯಂತ್ರಗಳ ಮತ್ತು ಭಾರಿ ವಾಹನಗಳ ಸಂಚಾರದಿಂದ ಶಬ್ದ ಮಾಲಿನ್ಯ ಹೆಚ್ಚಾಗುವುದು. ಹೆಚ್ಚು ನೀರಿನ ಬಳಕೆಯಿಂದ ಒಳಚರಂಡಿಯಲ್ಲಿ ಕಲುಷಿತ ನೀರು ಉತ್ಪತ್ತಿಯಾಗಬಹುದು. ಪರಿಸರ ಹಾಗೂ ಅರಣ್ಯ ಸಚಿವಾಲಯದ 2018ರ ನಿಯಮದಂತೆ ಕಾರ್ಪೊರೇಟ್ ಪರಿಸರ ಜವಾಬ್ದಾರಿಗಳನ್ನು ನಿಭಾಯಿಸಿದರೆ ಈ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಬಾಲಕೃಷ್ಣರಾಜ್ ಅಭಿಪ್ರಾಯಪಟ್ಟರು.

ಅಹವಾಲು ಸಲ್ಲಿಕೆ

ಸಭೆಯಲ್ಲಿ ಅಹವಾಲುಗಳನ್ನು ಸಲ್ಲಿಸಿದ ಗ್ರಾಮಸ್ಥರು, ಭಾರಿ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಪಾತಿ ದೋಣಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು, ಸ್ಥಳೀಯ ಮೀನುಗಾರರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಯೋಜನೆ ಕುರಿತು ಸ್ಪಷ್ಟ ಚಿತ್ರಣ ಒದಗಿಸಬೇಕು ಎಂದು ಒತ್ತಾಯಿಸಿದರು.

‘ಅಲೆ ತಡೆಗೋಡೆಯನ್ನು ಉತ್ತರ ದಿಕ್ಕಿಗೆ ನಿರ್ಮಿಸುವುದರಿಂದ ಸಮುದ್ರದ ಕೊರತೆ ಉಂಟಾಗಲಿದೆ. ಅಲ್ಲಿನ ಕೃಷಿ ಜಮೀನುಗಳಿಗೆ ಉಪ್ಪುನೀರು ನುಗ್ಗಿ ಹಾನಿಯಾಗಬಹುದು. ಈ ಕುರಿತು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೂ ಸರ್ಕಾರದ ಯೋಜನೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇನೆ’ ಎಂದು ಬೆಳಂಬಾರ ಗ್ರಾಮಸ್ಥ ಉಲ್ಲಾಸ ಶೇಣ್ವಿ ತಿಳಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ವಲಯದ ಹಿರಿಯ ಪರಿಸರ ಅಧಿಕಾರಿ ರಮೇಶ ನಾಯ್ಕ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಟಿ.ನಾಗರಾಜ್, ಅಧಿಕಾರಿಗಳಾದ ರಾಜಕುಮಾರ ಹೆಡೆ, ರೆನಿಟಾ ಡಿಸೋಜ, ಜಿ.ಆರ್.ತಾಂಡೇಲ, ನಾರಾಯಣ ಮಡಿವಾಳ, ಪಿ.ಎಸ್.ಐ ಸಂಪತ್ ಜಗದೀಶ ಖಾರ್ವಿ ಸೇರಿದಂತೆ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT