ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಭಟ್ಕಳ ತಾಲ್ಲೂಕಿನ ಮುಂಡಳ್ಳಿಯ ಜೋಗಿಮನೆ ಗ್ರಾಮಸ್ಥರ ಪರದಾಟ

ಭಟ್ಕಳ | ನದಿಯಲ್ಲಿ ದಿಬ್ಬ: ಗ್ರಾಮ ಜಲಾವೃತವಾಗಿ ಜನರ ಪರದಾಟ

ಮೋಹನ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಭಟ್ಕಳ: ತಾಲ್ಲೂಕಿನ ಮುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಗಿಮನೆ ಗ್ರಾಮದಲ್ಲಿ ‘ತೌತೆ’ ಚಂಡಮಾರುತದ ಪ್ರಭಾವದಿಂದ ಹೊಲ ಗದ್ದೆಗಳಿಗೆ ನುಗ್ಗಿದ ನೀರು ಇನ್ನೂ ಇದೆ. ಇದಕ್ಕೆ ಅಸಮರ್ಪಕ ರೀತಿಯಲ್ಲಿ ಸೇತುವೆ ಕಾಮಗಾರಿ ನಡೆಸಿದ್ದೇ ಕಾರಣ ಎಂಬುದು ಸ್ಥಳೀಯರ ಆರೋಪವಾಗಿದೆ.

10 ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದ ಮತ್ತು ಚಂಡಮಾರುತದಿಂದಾಗಿ ಸಮುದ್ರದ ಉಪ್ಪು ನೀರು ಗ್ರಾಮಕ್ಕೆ ನುಗ್ಗಿದೆ. ಇದರಿಂದ 100ಕ್ಕೂ ಅಧಿಕ ಬಾವಿಗಳು, ಮಲ್ಲಿಗೆ ಕೃಷಿ ಜಮೀನು ಜಲಾವೃತವಾಗಿದೆ. ಉಪ್ಪು ನೀರಿನಿಂದಾಗಿ ಬಾವಿ ನೀರು, ಮಲ್ಲಿಗೆ ಗಿಡಗಳಿಗೆ ಹಾನಿಯಾಗಿದೆ.

ಮುಂಡಳ್ಳಿಯಿಂದ ನಸ್ತಾರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ, ಅಂದಾಜು ₹ 50 ಲಕ್ಷ ಮೌಲ್ಯದ ಕಿರು ಸೇತುವೆ ಕಾಮಗಾರಿಗೆ ಸಣ್ಣ ನೀರಾವರಿ ಇಲಾಖೆ ಚಾಲನೆ ನೀಡಿದೆ. ಅದರ ಗುತ್ತಿಗೆದಾರರು ಹಾವಳಿಕಂಠ ನದಿಯಲ್ಲಿ ಮಣ್ಣಿನ ದಿಬ್ಬ ನಿರ್ಮಿಸಿ ಕಾಮಗಾರಿ ಪ್ರಾರಂಭಿಸಿದ್ದರು. ಮಳೆಗಾಲದ ಪೂರ್ವದಲ್ಲಿ ಕಾಮಗಾರಿ ಮುಗಿಸುವ ಯೋಚನೆಯಲ್ಲಿದ್ದ ಗುತ್ತಿಗೆದಾರರು, ನದಿಯಿಂದ ಸಮುದ್ರಕ್ಕೆ ನೀರು ಸಾಗಲು ಸಣ್ಣ ಗಾತ್ರದ ಪೈಪನ್ನು ಅಳವಡಿಸಿದ್ದರು.

ಕಾಮಗಾರಿಯು ನಿಗದಿತ ಅವಧಿಯಲ್ಲಿ ಮುಕ್ತಾಯವಾಗಿದ್ದರೂ ನದಿಗೆ ಅಡ್ಡಲಾಗಿ ಹಾಕಿದ್ದ ಮಣ್ಣಿನ ದಿಬ್ಬವನ್ನು ತೆಗೆಯಲು 15 ದಿನಗಳ ಕಾಲವಕಾಶಕ್ಕಾಗಿ ಕಾಯಲಾಗಿತ್ತು. ಅಷ್ಟರಲ್ಲಿ ಬಂದರೆಗಿದ ‘ತೌತೆ’ ಚಂಡಮಾರುತವು, ಅಲೆಗಳನ್ನು ಸಮುದ್ರದಲ್ಲಿ  ಮುನ್ನುಗ್ಗಿಸಿತು. ಇದರಿಂದ ಸಂಪೂರ್ಣ ಜೋಗಿಮನೆ ಗ್ರಾಮ ಜಲಾವೃತಗೊಂಡಿದ್ದು, ಗ್ರಾಮಸ್ಥರು ನೀರಿನಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಅನೇಕ ಮನೆಗಳ ಬಾವಿಗಳಿಗೆ ಉಪ್ಪು ನೀರು ಸೇರಿದ್ದು, ಸೇವನೆಗೆ ಸಾಧ್ಯವಾಗುತ್ತಿಲ್ಲ. ಒಂದೆಡೆ, ಕೊರೊನಾ ಸಂಕಷ್ಟದಲ್ಲಿ ಮಲ್ಲಿಗೆ ಬೆಳೆಗೆ ವ್ಯಾಪಾರವಿಲ್ಲದೇ ರೈತರು ಕಂಗೆಟ್ಟಿದ್ದಾರೆ. ಇದರ ನಡುವೆ, ಮಲ್ಲಿಗೆ ತೋಟಕ್ಕೇ ಉಪ್ಪು ನೀರು ನುಗ್ಗಿ ಸಂಪೂರ್ಣ ಗಿಡ ನಾಶವಾಗುವ ಹಂತದಲ್ಲಿದೆ.

ನದಿಗೆ ಅಡ್ಡಲಾಗಿ ಹಾಕಲಾದ ಮಣ್ಣಿನ ದಿಬ್ಬವನ್ನು ತೆಗೆದರೆ, ಸೇತುವೆ ಇನ್ನೂ ಗಟ್ಟಿಯಾಗದ ಕಾರಣ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಆತಂಕ ಅಧಿಕಾರಿಗಳದ್ದಾಗಿದೆ. ಸಣ್ಣ ಪೈಪಿನಿಂದ ನೀರು ಸಾರಾಗವಾಗಿ ಹರಿಯದ ಕಾರಣ ಈ ಆವಾಂತರ ಸಂಭವಿಸಿದೆ. ಈ ರೀತಿಯ ಅಸಮರ್ಪಕ ಕಾಮಗಾರಿಯಿಂದ ಉಂಟಾದ ಹಾನಿಗೆ ಅವರೇ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

‘ಗುತ್ತಿಗೆದಾರ ನದಿಯ ನೀರು ಹರಿದು ಹೋಗಲು ದೊಡ್ಡ ಗಾತ್ರ ಪೈಪ್‌ಗಳನ್ನು ಅಳವಡಿಸಬೇಕಿತ್ತು. ಅವರ ನಿಷ್ಕಾಳಜಿಯಿಂದ ಗ್ರಾಮ ಸಂಪೂರ್ಣ ಜಲಾವೃತಗೊಂಡು ಅಪಾರ ಹಾನಿಯಾಗಿದೆ. ಸಣ್ಣ ನೀರಾವರಿ ಇಲಾಖೆಯ ಬೇಜವಾಬ್ದಾರಿಯ ಕಾರಣ ಸಂಭವಿಸಿರುವ ಹಾನಿಗೆ ಅವರೇ ಪರಿಹಾರ ನೀಡಬೇಕು’ ಎನ್ನುತ್ತಾರೆ ಜೋಗಿಮನೆ ಗ್ರಾಮದ ನಾಗಯ್ಯ ಗೋವಿಂದ ದೇವಾಡಿಗ.

‘ಶೀಘ್ರ ತೆರವು’: ‘ಮಣ್ಣಿನ‌ ತಡಗೋಡೆಯಿಂದ ನೀರು ಸಮುದ್ರಕ್ಕೆ ಹರಿದು ಹೋಗದೇ ಜನರಿಗೆ ತೊಂದರೆಯಾಗಿದೆ. ಕಿರು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಮೇ 30ರ ಸುಮಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಅಂದು ತಡೆಗೋಡೆ ಒಡೆದ ನಂತರ ನದಿಯಲ್ಲಿ ಶೇಖರಣೆಯಾದ ನೀರು ಸಮುದ್ರಕ್ಕೆ ಹರಿದು ಸಮಸ್ಯೆ ನಿವಾರಣೆಯಾಗಲಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿನೋದ ನಾಯ್ಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು