ಸೋಮವಾರ, ಜೂನ್ 14, 2021
27 °C

ಕಾರವಾರ: ಸರ್ವಿಸ್ ರಸ್ತೆ ಮುಚ್ಚಿ ಹೆದ್ದಾರಿ ಕಾಮಗಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರಸಭೆ ವ್ಯಾಪ್ತಿಯ ಬಿಣಗಾದಲ್ಲಿ ಮಾಳಸಾ ರಸ್ತೆ ಕ್ರಾಸ್‌ನಿಂದ ಅಂಚೆ ಕಚೇರಿ ತನಕ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಅಸಮರ್ಪಕವಾಗಿದೆ. ಎಂಟರಿಂದ 10 ಅಡಿಗಳಷ್ಟು ಎತ್ತರಕ್ಕೆ ಕೆಂಪು ಮಣ್ಣು ಸುರಿಯಲಾಗಿದ್ದು, ಸರ್ವಿಸ್ ರಸ್ತೆಯನ್ನು ಮುಚ್ಚಲಾಗಿದೆ ಎಂದು ಬಿಣಗಾ ನಾಗರಿಕರ ವೇದಿಕೆಯ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿ, ಈ ಸಮಸ್ಯೆಯನ್ನು ಸರಿ‍ಪಡಿಸುವಂತೆ ಐ.ಆರ್.ಬಿ ಕಂಪನಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಶ್ರೀ ಸೋಮನಾಥ ಪ್ರೌಢಶಾಲೆಯಿಂದ ಬಿಣಗಾ ಅಂಚೆ ಕಚೇರಿಯ ತನಕ ರಸ್ತೆಯನ್ನು ಸೂಕ್ತ ರೀತಿಯಲ್ಲಿ ಮಾಡಲಾಗಿದೆ. ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ, ಅಲ್ಲಿಂದ ಮುಂದೆ ಕಂಪನಿಯವರು ಮನಸೋ ಇಚ್ಛೆ ಕಾಮಗಾರಿ ಮಾಡುತ್ತಿದ್ದಾರೆ. ರಸ್ತೆಯ ದಕ್ಷಿಣ ಭಾಗದಲ್ಲಿ ಕೆಂಪು ಮಣ್ಣು ಸುರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟುಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ರೀತಿ ಮಣ್ಣು ಸುರಿದ ಕಾರಣ ಮಳೆಗಾಲದಲ್ಲಿ ನೀರು ಹರಿದು ಹೋಗಲು ಸಾಧ್ಯವಾಗುವುದಿಲ್ಲ. ಸಮೀಪದ ಹೊಲಗಳಲ್ಲಿ ತುಂಬಿಕೊಂಡು ಸಮೀಪದ ಮನೆಗಳು ಜಲಾವೃತವಾಗುವ ಆತಂಕವಿದೆ. 2009ರಲ್ಲೂ ಇದೇ ರೀತಿ ಆಗಿ ಜೀವಹಾನಿಗಳಾಗಿದ್ದವು ಎಂದು ತಿಳಿಸಿದ್ದಾರೆ.

ಗುಡ್ಡದ ಮೇಲಿನಿಂದ ರಭಸವಾಗಿ ಮಳೆ ನೀರು ಹರಿದು ಬಂದಾಗ ಕೆಂಪು ಮಣ್ಣು ಕೊಚ್ಚಿಕೊಂಡು ಬಂದು ಮನೆಗಳಿಗೆ ಹರಿಯುವ ಸಾಧ್ಯತೆಯೂ ಇದೆ. ಹಾಗಾಗಿ ಈ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ, ಸೂಕ್ತ ಚರಂಡಿ ಮತ್ತು ಸರ್ವಿಸ್ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಕಾಮಗಾರಿಯನ್ನು ತಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಷ್ಣು ಹರಿಕಾಂತ, ಉಪಾಧ್ಯಕ್ಷ ವಿಠ್ಠಲ.ಯು.ನಾಯ್ಕ, ನಗರಸಭೆ ಸದಸ್ಯೆ ಶ್ವೇತಾ ಜಿ.ನಾಯ್ಕ, ಪ್ರಮುಖರಾದ ರಮೇಶ ಗೌಡ, ಪ್ರದೀಪ ನಾಯ್ಕ ಬಿಣಗಾ, ಸತೀಶ ಅಂಚೇಕರ, ಮೋಹನ ಆರ್ ಮಾಳಸೇಕರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು