ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ನಿಲಯದಲ್ಲಿ ಆರೈಕೆ ಕೇಂದ್ರ: ಆಕ್ಷೇಪ

ಅಂಕೋಲಾದ ಶೆಟಗೇರಿ ಆಗೇರ ಕಾಲೊನಿಯಲ್ಲಿ ಸ್ಥಳೀಯರಿಂದ ಆಕ್ರೋಶ
Last Updated 5 ಆಗಸ್ಟ್ 2021, 13:40 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನ ಶೆಟಗೇರಿ ಆಗೇರ ಕಾಲೊನಿಯ ಬಿ.ಸಿ.ಎಂ ವಸತಿ ನಿಲಯದಲ್ಲಿ, ಕೋವಿಡ್ ಆರೈಕೆ ಕೇಂದ್ರ ತೆರೆದು ಸೋಂಕಿತರಿಗೆ ವಸತಿ ಕಲ್ಪಿಸಿರುವುದಕ್ಕೆ ಸ್ಥಳೀಯರು ಗುರುವಾರ ಆಕ್ಷೇಪ ವ್ಯಕ್ತ ಪಡಿಸಿದರು.

ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋವಿಡ್ ಸೋಂಕಿತರಿಗೆ ಅಲ್ಲಿನ ಸ್ಥಳೀಯ ಶಾಲೆಯಲ್ಲಿ ಆರೈಕೆ ಕೇಂದ್ರ ತೆರೆಯಲಾಗಿತ್ತು. ಅಲ್ಲಿ ಅವಶ್ಯಕ ಸೌಲಭ್ಯಗಳಿಲ್ಲ ಎಂದು ಸೋಂಕಿತರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಹೊನ್ನೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಹಾಗೂ ಶೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಗಿಲ್‌ನ ಇಬ್ಬರು ಸೋಂಕಿತರನ್ನು ಬಿ.ಸಿ.ಎಂ ವಸತಿ ನಿಲಯಕ್ಕೆ ಕರೆತರಲಾಗಿತ್ತು. ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ವಸತಿ ನಿಲಯದ ಮುಂದೆ ಜಮಾಯಿಸಿ ಪ್ರತಿಭಟನೆಗೆ ಮುಂದಾದರು.

‘ಹಿರಿಯ ಅಧಿಕಾರಿಗಳ ಆದೇಶದಂತೆ ವಸತಿ ನಿಲಯಕ್ಕೆ ಕರೆತಂದಿದ್ದೇವೆ’ ಎಂದು ಹೊನ್ನೆಬೈಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶೆಟಗೇರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಆಶಾ ಕಾರ್ಯಕರ್ತೆ ಮತ್ತು ಕಿರಿಯ ಸಿಬ್ಬಂದಿ ಜನರಿಗೆ ತಿಳಿಸಿದರು. ಇದರಿಂದ ಗ್ರಾಮಸ್ಥರು ಸಮಾಧಾನಗೊಳ್ಳಲಿಲ್ಲ. ಈ ವೇಳೆ ಕೆಲವರು ವಸತಿ ನಿಲಯದ ಗೇಟ್ ತೆಗೆದು ಒಳಪ್ರವೇಶಿಸುವ ಯತ್ನ ಮಾಡಿದರು. ಸ್ಥಳಕ್ಕೆ ಬಂದ ‘112’‌ ಅಧಿಕಾರಿ ಮತ್ತು ಸಿಬ್ಬಂದಿ, ಜನರನ್ನು ಚದುರಿಸಿ ಮನವರಿಕೆ ಮಾಡಿದರು.

ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪಿ.ಎಸ್.ಐ ಪ್ರವೀಣಕುಮಾರ, ‘ಸರ್ಕಾರದ ನಿಯಮಾವಳಿಯಂತೆ ಕಾರ್ಯ ಪಾಲನೆಗೆ ಅವಕಾಶ ನೀಡಿ. ವಸತಿ ನಿಲಯದಲ್ಲಿನ ಕೋವಿಡ್ ಸೋಂಕಿತರಿಂದ ಸ್ಥಳೀಯರಿಗೆ ಯಾವುದೇ ತೊಂದರೆ ಇಲ್ಲ. ಕಾನೂನು ಮೀರಿ ಆಶಾ ಕಾರ್ಯಕರ್ತೆ ಅಥವಾ ಕಿರಿಯ ಅಧಿಕಾರಿಗಳಿಗೆ ಅನವಶ್ಯಕ ತೊಂದರೆ ನೀಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಿಬ್ಬಂದಿ ಮೇಲೆ ಹರಿಹಾಯ್ದ ಕೆಲವರು ಪೊಲೀಸರು ಬರುತ್ತಿದ್ದಂತೆ ಅಲ್ಲಿಂದ ಮರೆಯಾದರೆ, ಇನ್ನು ಕೆಲವರು ‘ಸ್ಥಳೀಯರಿಗೆ ಬೆಂಬಲ ನೀಡಲು ಬಂದಿದ್ದೇವೆ’ ಎಂದು ನುಣುಚಿಕೊಂಡರು.

ಶೆಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ನಾಯಕ, ಸದಸ್ಯರಾದ ಮಂಜುನಾಥ ನಾಯಕ, ಸತೀಶ ನಾಯ್ಕ, ಆರತಿ ಆಗೇರ, ‘ಆರೈಕೆ ಕೇಂದ್ರದ ಬಗ್ಗೆ ಆಕ್ಷೇಪವಿದ್ದಲ್ಲಿ ಲಿಖಿತವಾಗಿ ತಿಳಿಸಿ. ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು. ಪೊಲೀಸ್ ಸಿಬ್ಬಂದಿ ಸಂತೋಷ ನಾಯ್ಕ, ರಮೇಶ ತುಂಗಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT