ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರವೇ ಪಶ್ಚಿಮಾಭಿಮುಖ ನದಿಗೆ ಕಿಂಡಿ ಅಣೆಕಟ್ಟು?

ಯೋಜನೆಗೆ ಅಂತಿಮ ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ತಾಕೀತು
Last Updated 4 ಡಿಸೆಂಬರ್ 2021, 20:30 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿ, ಉಪನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ‘ಪಶ್ಚಿಮ ವಾಹಿನಿ ಯೋಜನೆ’ ಶೀಘ್ರ ಅನುಷ್ಠಾನಗೊಳ್ಳುವ ಲಕ್ಷಣ ಗೋಚರಿಸಿದೆ.

‘ಅಣೆಕಟ್ಟೆ ನಿರ್ಮಿಸಬಹುದಾದ ಸ್ಥಳಗಳ ಅಂತಿಮ ಪಟ್ಟಿ ನೀಡಬೇಕು. ಕಾಮಗಾರಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಿ ವರದಿ ಸಲ್ಲಿಸಬೇಕು’ ಎಂದು ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದಿಂದ ನವೆಂಬರ್ ಎರಡನೇ ವಾರವೇ ಸೂಚನೆ ಬಂದಿದೆ.

ಪಶ್ಚಿಮ ವಾಹಿನಿ ಯೋಜನೆ ಕಾರ್ಯಗತಗೊಳಿಸಲು ಉತ್ತರ ಕನ್ನಡಕ್ಕೆ ₹100 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಈ ಪೈಕಿ ಶಿರಸಿ ಮತ್ತು ಹಳಿಯಾಳ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹30 ಕೋಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಪ್ರತಿನಿಧಿಸುವ ಯಲ್ಲಾಪುರ ಕ್ಷೇತ್ರಕ್ಕೆ ₹40 ಕೋಟಿ ಮೀಸಲಿಡಲಾಗಿದೆ.

ಏನಿದು ಪಶ್ಚಿಮ ವಾಹಿನಿ ಯೋಜನೆ?

ಪಶ್ಚಿಮಾಭಿಮುಖವಾಗಿ ಹರಿಯುವ ಅಘನಾಶಿನಿ, ಬೇಡ್ತಿ, ಕಾಳಿ ನದಿಗಳಿಗೆ ಮತ್ತು ಅವುಗಳ ಉಪನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಕೃಷಿ ಕ್ಷೇತ್ರಗಳಿಗೆ ವರ್ಷಪೂರ್ತಿ ನೀರು ಒದಗಿಸುವುದು ಯೋಜನೆಯ ಉದ್ದೇಶ.

‘ನದಿಗಳ ನೀರು ಸಮುದ್ರ ಸೇರಿ ಅನಗತ್ಯ ಪೋಲಾಗುತ್ತಿದೆ. ಇದನ್ನು ತಡೆಹಿಡಿದು ಕೃಷಿ ಚಟುವಟಿಕೆಗೆ ಬಳಸಿಕೊಳ್ಳಲು ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ’ ಎಂದು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಈ ಹಿಂದೆ ಹೇಳಿದ್ದರು.

ಪಶ್ಚಿಮ ವಾಹಿನಿ ಯೋಜನೆ ಅನುಷ್ಠಾನದ ಬಗ್ಗೆ ಪರಿಸರವಾದಿಗಳಿಂದ ಆಕ್ಷೇಪಣೆಯೂ ವ್ಯಕ್ತವಾಗಿತ್ತು. ಆದರೆ ಇದೀಗ ಸರ್ಕಾರ ಸದ್ದಿಲ್ಲದೆ ಯೋಜನೆ ಕಾರ್ಯಗತಗೊಳಿಸಲು ಮುಂದಾಗಿದೆ.

‘ಕಿಂಡಿ ಅಣೆಕಟ್ಟು ನಿರ್ಮಿಸುವ ಸ್ಥಳಗಳ ಪಟ್ಟಿಯನ್ನು ಈ ಮೊದಲು ಸಿದ್ಧಪಡಿಸಿ ನೀಡಲಾಗಿತ್ತು. ಅಷ್ಟಕ್ಕೆ ಚಟುವಟಿಕೆ ಸ್ತಬ್ಧಗೊಂಡಿತ್ತು. ಈ ಬಾರಿ ಮರು ಪ್ರಸ್ತಾವ ಮತ್ತು ಕ್ರಿಯಾಯೋಜನೆ ಸಿದ್ಧಪಡಿಸಿ ನೀಡಲು ಸೂಚನೆ ಬಂದಿದೆ. ಈ ಪ್ರಕ್ರಿಯೆಯನ್ನು ತ್ವರಿತವಾಗಿ ನಡೆಸಲು ಸೂಚಿಸಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ಕೃಷಿ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿರಲಿದೆ. ನದಿಗಳಿಗಿಂತ ಉಪನದಿಗಳಿಗೆ ಹೆಚ್ಚು ಆದ್ಯತೆ ನೀಡಿ 6 ಅಡಿಯಷ್ಟು ಎತ್ತರದ ಕಿಂಡಿ ಅಣೆಕಟ್ಟೆ ನಿರ್ಮಿಸಲಾಗುತ್ತದೆ. ಅರಣ್ಯ ನಾಶ ಮಾಡದೆ ಯೋಜನೆ ಅನುಷ್ಠಾನಕ್ಕೆ ತರುವ ಗುರಿ ಇಟ್ಟುಕೊಂಡಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ಪರಿಸರಕ್ಕೆ ಧಕ್ಕೆ ತರುವ ಪ್ರಯತ್ನ

‘ನದಿಯ ಮೂಲಸ್ವರೂಪ ಹದಗೆಡಿಸಿ ಸಂಪೂರ್ಣ ಪರಿಸರಕ್ಕೆ ಧಕ್ಕೆ ತರುವುದೇ ಪಶ್ಚಿಮ ವಾಹಿನಿ ಯೋಜನೆಯ ದುರುದ್ದೇಶ’ ಎಂದು ಪರಿಸರವಾದಿ ಶಿರಸಿಯ ಪಾಂಡುರಂಗ ಹೆಗಡೆ ಹೇಳಿದರು.

‘ನೀರಿನ ಹರಿವು ನೈಸರ್ಗಿಕವಾಗಿ ಇರಲು ಬಿಡಬೇಕು. ಸಾಲು ಸಾಲು ಕಿಂಡಿ ಅಣೆಕಟ್ಟೆಗಳನ್ನು ನಿರ್ಮಿಸಿದರೆ ಹರಿವಿನ ದಿಕ್ಕು ಬದಲಾಗುತ್ತದೆ. ಸಮುದ್ರ ಸೇರುವ ಪ್ರಮಾಣವೂ ಕಡಿಮೆಯಾದರೆ ಕರಾವಳಿ ಭಗಕ್ಕೂ ಅಪಾಯ. ಪಶ್ಚಿಮ ಘಟ್ಟದ ಸೂಕ್ಷ್ಮ ಅರಣ್ಯ ಸಂಪತ್ತಿನ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಪ್ರಕೃತಿಯ ದೃಶ್ಯವೇ ಬದಲಾಗುತ್ತದೆ’ ಎಂದರು.

–––––––––

ಅಂಕಿ–ಅಂಶ

ಯೋಜನೆಗೆ ಮಂಜೂರಾದ ಅನುದಾನ:₹100 ಕೋಟಿ

ಸಂಭವನೀಯ ಕಿಂಡಿ ಅಣೆಕಟ್ಟುಗಳು ಸಂಖ್ಯೆ:87

ಅಂದಾಜು ಅಚ್ಚುಕಟ್ಟು ಪ್ರದೇಶ:4 ಸಾವಿರ ಹೆಕ್ಟೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT