ಭಾನುವಾರ, ಏಪ್ರಿಲ್ 18, 2021
24 °C
ಕಾರವಾರದ ಮತ್ಸ್ಯಾಲಯದ ಆವರಣದಲ್ಲಿರುವ ಬೃಹತ್ ತಿಮಿಂಗಿಲದ ಎಲುಬು

ಕಾರವಾರದಿಂದ ಧಾರವಾಡಕ್ಕೆ ಸಾಗಲಿದೆ ತಿಮಿಂಗಿಲದ ಅಸ್ತಿಪಂಜರ!

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಮತ್ಸ್ಯಾಲಯದ ಆವರಣದಲ್ಲಿರುವ ಬೃಹತ್ ತಿಮಿಂಗಿಲದ ಅಸ್ತಿಪಂಜರವನ್ನು ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಆ ಭಾಗದ ವಿದ್ಯಾರ್ಥಿಗಳಿಗೆ ಸಮುದ್ರ ಜೀವಿಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅದನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ಕೆಲವು ದಿನಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ಡಿ.ಬೊಳಿಶೆಟ್ಟಿ ಮತ್ತವರ ತಂಡದ ಸದಸ್ಯರು ಇಲ್ಲಿರುವ ಅಸ್ತಿಪಂಜರವನ್ನು ಗಮನಿಸಿದ್ದರು. ಬಳಿಕ, ಕಡಲ ಸಸ್ತನಿಯ ದೇಹ ರಚನೆಯ ಬಗ್ಗೆ ಮಕ್ಕಳಿಗೆ ಅಧ್ಯಯನ ಮಾಡಲು ಸಹಕಾರಿಯಾಗುವಂತೆ ಅಸ್ತಿಪಂಜರವನ್ನು ತಮ್ಮ ಕೇಂದ್ರಕ್ಕೆ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅದರ ಸ್ಥಳಾಂತರಕ್ಕೆ ಒಪ್ಪಿಗೆ ಸಿಕ್ಕಿದ ಬಳಿಕ ಅಲ್ಲಿಗೆ ರವಾನೆಯಾಗಲಿದೆ.

ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿರುವ ಈ ಅಸ್ತಿಪಂಜರವು ಸುಮಾರು 50 ವರ್ಷಗಳಷ್ಟು ಹಳೆಯದಾಗಿದೆ. 30 ಅಡಿಗಳಷ್ಟು ಉದ್ದವಿರುವ ಇದು, ಇಂದಿಗೂ ಗಟ್ಟಿಮುಟ್ಟಾಗಿದೆ. ತಿಮಿಂಗಿಲದ ಹಲ್ಲುಗಳು, ಬೆನ್ನುಮೂಳೆಯ ಜೋಡಣೆಗಳು, ತಲೆಯ ಭಾಗವು ಜೀವ ವೈವಿಧ್ಯದ ಅಧ್ಯಯನ ಮಾಡುವವರ ಜ್ಞಾನದಾಹ ತಣಿಸುವಂತಿದೆ. ಅಲ್ಲದೇ ಪ್ರವಾಸಿಗರನ್ನೂ ಆಕರ್ಷಿಸಲು ಸಹಕಾರಿಯಾಗುವ ರೀತಿಯಲ್ಲಿ ಆಕರ್ಷಕವಾಗಿದೆ. 

ಕೊರೊನಾ ಸಂದರ್ಭದಲ್ಲಿ ಬಾಗಿಲು ಮುಚ್ಚಿದ ಮತ್ಸ್ಯಾಲಯವು ಇನ್ನೂ ಪ್ರವಾಸಿಗರಿಗೆ ತೆರೆದಿಲ್ಲ. ಅಲ್ಲದೇ ಅದರ ಆವರಣದಲ್ಲಿ ನಿರ್ವಹಣೆಯೂ ಇಲ್ಲದೇ ಸೊರಗಿದೆ. ಇದೇ ಸಮಸ್ಯೆಯನ್ನು ತಿಮಿಂಗಿಲದ ಅಸ್ತಿಪಂಜರವೂ ಎದುರಿಸುತ್ತಿದೆ. ದೂಳು ಹಿಡಿದಿದ್ದು, ತಕ್ಷಣದ ಸ್ವಚ್ಛತೆಯನ್ನು ಎದುರು ನೋಡುತ್ತಿದೆ. ಹಾಗಾಗಿ ಜನಾಕರ್ಷಿಸುವಲ್ಲಿ ಹಿಂದೆ ಬಿದ್ದಿದೆ. ಇದೇ ಅಂಶವೀಗ ಅಸ್ತಿಪಂಜರಕ್ಕೆ ಬೇರೆ ಜಿಲ್ಲೆಗಳಿಂದ ಬೇಡಿಕೆ ಬರಲು ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ವಿಜ್ಞಾನ ಕೇಂದ್ರದ ಗೌರವ ಕಾರ್ಯದರ್ಶಿ ಡಾ.ವಿ.ಎನ್.ನಾಯ್ಕ, ‘ನಿರ್ವಹಣೆಯಿಲ್ಲದೇ ಹಾಳಾಗುವ ಬದಲು ಧಾರವಾಡದಲ್ಲಿ ಸೂಕ್ತ ಪ್ರದರ್ಶನ ಮಾಡುವುದು ಸೂಕ್ತ. ಅಲ್ಲಿನ ವಿದ್ಯಾರ್ಥಿಗಳಿಗಾದರೂ ಅನುಕೂಲವಾಗಬಹುದು’ ಎಂದರು.

‘1975ರ ಸುಮಾರಿಗೆ ಭಟ್ಕಳದಲ್ಲಿ ಸಿಕ್ಕಿದ ಅಸ್ತಿಪಂಜರವನ್ನು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದಲ್ಲಿ ಸಂರಕ್ಷಿಸಿ ಇಡಲಾಗಿದೆ. ಕೇಂದ್ರೀಯ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ (ಸಿ.ಎಂ.ಎಫ್.ಆರ್.ಐ) ಆವರಣದಲ್ಲೂ ತಿಮಿಂಗಿಲದ ಅಸ್ತಿಪಂಜರವಿದೆ. ಅದು ಕೂಡ ನಿರ್ವಹಣೆಯಿಲ್ಲದೇ ಹಾಳಾಗುತ್ತಿದೆ. ಬಾಲಭವನ ಸೊಸೈಟಿ ಸ್ಥಾಪನೆಯಾದಾಗ ಅಲ್ಲಿ ಪ್ರದರ್ಶನಕ್ಕಿಡಲು ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಅದಕ್ಕೆ ಅವಕಾಶ ಸಿಗಲಿಲ್ಲ’ ಎಂದರು.

‘ಇಲ್ಲೇ ಪ್ರದರ್ಶನ ಸೂಕ್ತ’

ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ತಿಮಿಂಗಿಲದ ಮತ್ತೊಂದು  ಅಸ್ತಿಪಂಜರವಿದೆ. ಆದರೆ, ಅದರಲ್ಲಿ ಹಲ್ಲುಗಳು ಸೇರಿದಂತೆ ಕೆಲವು ಅಂಗಗಳಿಲ್ಲ. ಮತ್ಸ್ಯಾಲಯದಲ್ಲಿರುವ ಅಸ್ತಿಪಂಜರವನ್ನು ಕೂಡ ಇಲ್ಲೇ ಆಕರ್ಷಕವಾಗಿ ಪ್ರದರ್ಶನಕ್ಕಿಡಲು ಸಾಧ್ಯವಿದೆ ಎಂಬ ಬೇಡಿಕೆ ಹಲವರದ್ದಾಗಿದೆ. ‘ಟ್ಯಾಗೋರ್ ಕಡಲತೀರದಲ್ಲಿ ಯುದ್ಧನೌಕೆ ವಸ್ತು ಸಂಗ್ರಹಾಲಯ, ಶಿಲ್ಪೋದ್ಯಾನ, ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರ, ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವಿದೆ. ಪ್ರವಾಸಿಗರು ಹೆಚ್ಚು ಬರುವ ಈ ಪ್ರದೇಶದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಪ್ರದರ್ಶನಕ್ಕೆ ಇಡಬೇಕು. ಇದು ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಮತ್ತು ಪ್ರವಾಸಿ ಆಕರ್ಷಣೆಯಾಗಿಯೂ ಗಮನ ಸೆಳೆಯಲಿದೆ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು