ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಥ’ ಬದಲಿಸಿದ ಕಾಡಾನೆ ಹಿಂಡು: ಬೇಸಿಗೆ ಬೆಳೆಯೂ ನಾಶ

Last Updated 9 ಮಾರ್ಚ್ 2022, 20:30 IST
ಅಕ್ಷರ ಗಾತ್ರ

ಮುಂಡಗೋಡ: ವಾರ್ಷಿಕ ಸಂಚಾರ ಮುಗಿಸಿ ಮರಳಬೇಕಿದ್ದ ಗಜಪಡೆ ಇನ್ನೂ ತಾಲ್ಲೂಕಿನಲ್ಲಿಯೇ ಬೀಡುಬಿಟ್ಟಿವೆ. ಇದರಿಂದ ಬೇಸಿಗೆ ಬೆಳೆಯೂ ಆನೆ ದಾಳಿಗೆ ನಲುಗುತ್ತಿದೆ.

ಕಾಡಂಚಿನ ಗದ್ದೆಗಳಲ್ಲಿ ಆಹಾರದ ಲಭ್ಯತೆಯ ಪ್ರಮಾಣ ಹೆಚ್ಚಾಗಿರುವುದರಿಂದ, ಕಾಡಾನೆಗಳು ಇನ್ನೂ ಅಭಯಾರಣ್ಯದತ್ತ ಮರಳಲು ಮನಸ್ಸು ಮಾಡುತ್ತಿಲ್ಲ. ಒಂದು ದಶಕದಲ್ಲಿ ‘ಹೆಜ್ಜೆ’ ಇಡದಂಥ ಭಾಗಗಳಿಗೂ ಕಾಡಾನೆಗಳು ಈ ಬಾರಿ ಸಾಗಿವೆ. ‘ಆನೆ ಪಥ’ ಬದಲಾಗಿರುವುದನ್ನು ಪುಷ್ಟೀಕರಿಸುತ್ತಿದೆ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿ.

ಪ್ರತಿ ವರ್ಷ ಅಕ್ಟೋಬರ್‌ ಮಧ್ಯಭಾಗದಲ್ಲಿ ‘ಗುಳೆ’ ಹೊರಡುವಂತೆ, ದಾಂಡೇಲಿ ಅಭಯಾರಣ್ಯದಿಂದ ಕಾಡಾನೆಗಳು ತಾಲ್ಲೂಕಿನ ಗುಂಜಾವತಿ ಅರಣ್ಯ ಪ್ರದೇಶದ ಮೂಲಕ ಪ್ರವೇಶಿಸುತ್ತವೆ.

ಹೆಚ್ಚು ಕಡಿಮೆ 3– 4 ತಿಂಗಳು, ಅರಣ್ಯ ಸಹಿತ, ತೋಟ, ಗದ್ದೆಗಳಿಗೆ ನುಗ್ಗಿ, ತಿಂದು, ತುಳಿದು ಹಾಳು ಮಾಡುವುದು ವಾಡಿಕೆಯಾಗಿದೆ. ಆದರೆ, ಈ ವರ್ಷ ಮಾರ್ಚ್‌ ತಿಂಗಳು ಆರಂಭವಾದರೂ ಕಾಡಾನೆಗಳ ಹಿಂಡು ತಾಲ್ಲೂಕಿನಿಂದ ಕದಲುತ್ತಿಲ್ಲ. ಮರಿ ಆನೆ ಸಹಿತ ಎರಡು ಆನೆಗಳು ಗೋವಿನಜೋಳದ ಗದ್ದೆ, ತೋಟಗಳಿಗೆ ನಿತ್ಯವೂ ದಾಳಿ ಮಾಡುತ್ತಿವೆ ಎಂದು ರೈತರು ದೂರುತ್ತಿದ್ದಾರೆ.

ತಾಲ್ಲೂಕಿನ ಕಾತೂರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆಗಳು ಒಂದು ವಾರದಿಂದ ಕಾಣಿಸಿಕೊಳ್ಳುತ್ತಿವೆ. ಬೇಸಿಗೆ ಬೆಳೆಯಾಗಿ ಗೋವಿನಜೋಳ ಬೆಳೆದಿರುವ ಗದ್ದೆಗಳು, ಆನೆಗಳಿಗೆ ಆಹಾರದ ತಾಣಗಳಾಗುತ್ತಿವೆ. ಕಾಡಾನೆಗಳು ತಿಂದಿದ್ದಕ್ಕಿಂತ, ತುಳಿದು, ಮುರಿದು ಹಾಳು ಮಾಡುವುದೇ ಹೆಚ್ಚಾಗುತ್ತಿದೆ.

‘ಅರಣ್ಯದಂಚಿನಿಂದ ನುಗ್ಗುವ ಆನೆಗಳು, ಬೆಳಗಿನ ಜಾವದವರೆಗೂ ಬೆಳೆ ಹಾನಿ ಮಾಡುತ್ತಿವೆ. ಆನೆಗಳು ಬಂದಿದ್ದು ಗೊತ್ತಾದರೆ ಅವುಗಳನ್ನು ಓಡಿಸಲು ಏನಾದರೂ ಮಾಡಬಹುದು. ಆದರೆ, ಬೆಳಿಗ್ಗೆ ಗದ್ದೆಗೆ ಹೋದಾಗಲೇ ಕಾಡಾನೆಗಳು ಕಾಲಿಟ್ಟಿದ್ದು ಗೊತ್ತಾಗುತ್ತಿದೆ’ ಎಂದು ರೈತರು ಅಸಹಾಯಕರಾಗಿ ಹೇಳುತ್ತಾರೆ.

ತಾಲ್ಲೂಕಿನಲ್ಲಿ ಪ್ರತಿ ವರ್ಷ ಕಾಡಾನೆಗಳು ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುತ್ತಿರುವುದು ದಾಖಲೆಯಿಂದ ಕಂಡುಬರುತ್ತಿದೆ. ಆದರೆ, ಎರಡು ವರ್ಷಗಳಿಂದ ಆನೆಗಳು ಸಾಂಪ್ರದಾಯಿಕ ಪಥ ಬಿಟ್ಟು ಸಾಗುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

‘ಆನೆ ಕಾರಿಡಾರ್‌ನಲ್ಲಿ ಅಡೆತಡೆ ಆದಾಗ, ಪಥ ಬದಲಾವಣೆ ಆಗುವ ಸಾಧ್ಯತೆಯಿದೆ. ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸಿದರೆ, ಕಾಡಾನೆಗಳ ನಿಯಂತ್ರಣಕ್ಕೆ ಸಹಾಯವಾಗುತ್ತದೆ. ಆನೆ ತುಳಿದಿದ್ದೇ ದಾರಿ ಎಂಬಂತಾದರೆ, ಸುರಕ್ಷಾ ಕ್ರಮಗಳಲ್ಲಿಯೂ ಮಾರ್ಪಾಡಿಸಿಕೊಳ್ಳುವುದು ಅಗತ್ಯ’ ಎನ್ನುತ್ತಾರೆ ಕಾತೂರ ವಲಯ ಅರಣ್ಯಾಧಿಕಾರಿ ಅಜಯ ನಾಯ್ಕ.

2– 3 ಆನೆಗಳ ಸಂಚಾರ:

‘ಒಂದು ವಾರದ ಅವಧಿಯಲ್ಲಿ ಚಿಗಳ್ಳಿ, ಮುಡಸಾಲಿ, ಭದ್ರಾಪುರ ಹಾಗೂ ಓರಲಗಿ ಭಾಗದಲ್ಲಿ ಕಾಡಾನೆಗಳಿದ್ದವು. ಚಿಗಳ್ಳಿ ಜಲಾಶಯದ ಕೆಳಭಾಗದ ಗದ್ದೆಗಳಲ್ಲಿ ಆನೆಗಳು ಹೆಜ್ಜೆ ಇಟ್ಟಿರುವುದು, ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಕಾಡಿನಲ್ಲಿಯೂ ಆಹಾರದ ಲಭ್ಯತೆಯಿದೆ. ಕಾಡಿನಿಂದ ಹೊರಬಂದರೆ, ಗೋವಿನಜೋಳ, ಕಬ್ಬು ಬೆಳೆ ಸಿಗುತ್ತಿದೆ. ಇದರಿಂದ, ಹಿಂಡಿನಿಂದ ಬೇರ್ಪಟ್ಟ 2– 3 ಆನೆಗಳು ಇನ್ನೂ ಸಂಚಾರ ನಡೆಸುತ್ತಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT