ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಕುತೂಹಲ

ಗುರುವಾರ , ಜೂಲೈ 18, 2019
22 °C
ಕೇಂದ್ರ ಬಜೆಟ್‌: ದಶಕದ ಬೇಡಿಕೆಯ ಬಗ್ಗೆ ಮತ್ತೆ ಗರಿಗೆದರಿದ ನಿರೀಕ್ಷೆ

ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಕುತೂಹಲ

Published:
Updated:

ಕಾರವಾರ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಚೊಚ್ಚಲ ಬಜೆಟ್ ಮಂಡನೆಯ ಬಗ್ಗೆ ಜಿಲ್ಲೆಯಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ವಿಶೇಷವಾಗಿ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ಯೋಜನೆಯನ್ನು ಪ್ರಸ್ತಾಪಿಸಬಹುದೇ ಎಂಬ ಕುತೂಹಲ ಮೂಡಿದೆ. 

ಲೋಕಸಭೆ ಚುನಾವಣೆಗೆ ಪೂರ್ವದಲ್ಲಿ ನಡೆದ ಮಧ್ಯಂತರ ಬಜೆಟ್‌ನಲ್ಲಿ ಕೂಡ ಇದೇ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಆಗ ಬಜೆಟ್ ಮಂಡಿಸಿದ್ದ ಪಿಯೂಷ್ ಗೋಯಲ್ ಅವರ ಭಾಷಣದಲ್ಲಿ ಯೋಜನೆಯ ಉಲ್ಲೇಖ ಇರಲಿಲ್ಲ. ಆದರೆ, ಈ ಬಾರಿ ಬೆಳಗಾವಿಯ ಸಂಸದ ಸುರೇಶ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾರೆ.

ರಾಜ್ಯಸಭೆಗೆ ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿಯಾಗಿದ್ದಾರೆ. ಹಾಗಾಗಿ ಈ ಯೋಜನೆಗೆ ಅನುಕೂಲವಾಗಬಹುದು ಎಂಬುದು ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಪ್ರಮುಖರ ಲೆಕ್ಕಾಚಾರವಾಗಿದೆ.

‘ಕಳೆದ ಬಾರಿ ಬಜೆಟ್ ಮಂಡನೆಗೂ ಮೊದಲು ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲಿ ಸಕಾರಾತ್ಮಕವಾಗಿ ಚಿಂತನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದರು. ಚುನಾವಣೆ ಸಂದರ್ಭದಲ್ಲಿ ಹೋರಾಟ ಆರಂಭಿಸಿದರೆ ಬೇರೆಯದೇ ಬಣ್ಣ ಪಡೆಯುತ್ತದೆ ಎಂದು ಸುಮ್ಮನಿದ್ದೆವು. ಈ ಬಾರಿಯ ಬಜೆಟ್‌ನಲ್ಲಿ ನಮಗೆ ಸ್ವಲ್ಪ ನಿರೀಕ್ಷೆಯಿದೆ’ ಎಂದು ಸಮಿತಿಯ ಕಾರ್ಯದರ್ಶಿ ವಿಠ್ಠಲದಾಸ್ ಕಾಮತ್ ವಿವರಿಸಿದರು.

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಸಾಗುವ ಈ ಯೋಜನೆ ಜಾರಿಯ ವಿಚಾರ ನ್ಯಾಯಾಲಯದಲ್ಲಿದೆ. ಆದ್ದರಿಂದ ಹೋರಾಟಗಾರರ ಬೇಡಿಕೆಗೆ ಬದಲಾಗಿ, ಜಿಲ್ಲೆಯ ಮೂಲಕ ಸಾಗುವ ಬೇರೆ ಹೊಸ ರೈಲು ಘೋಷಣೆ ಮಾಡಿ ಸಮಾಧಾನ ಮಾಡಬಹುದು ಎಂದೂ ಹೋರಾಟ ಸಮಿತಿಯ ಪ್ರಮುಖರು ಹೇಳುತ್ತಾರೆ.

ಯಾವುದೇ ನಿರೀಕ್ಷೆ ಹೊಂದಿಲ್ಲ: ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ರಮಾನಂದ ನಾಯಕ, ನಿರ್ದಿಷ್ಟವಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ನಿರೀಕ್ಷೆ ಹೊಂದಿಲ್ಲ ಎನ್ನುತ್ತಾರೆ.

‘ಮೊದಲು ರೈಲ್ವೆ ಬಜೆಟ್ ಪ್ರತ್ಯೇಕವಿದ್ದಾಗ ಏನಾದರೂ ನಿರೀಕ್ಷಿಸಬಹುದಿತ್ತು. ಆದರೆ, ಈಗ ಎಲ್ಲವನ್ನು ಒಂದೇ ಬಜೆಟ್‌ನಡಿ ತಂದಿರುವ ಕಾರಣ ಅಂಕೋಲಾ– ಹುಬ್ಬಳ್ಳಿ ರೈಲು ಮಾರ್ಗದ ಬೇಡಿಕೆಗೆ ಮನ್ನಣೆ ಸಿಗುವ ನಿರೀಕ್ಷೆಯಿಲ್ಲ. ಒಂದುವೇಳೆ ಯೋಜನೆಯ ಬಗ್ಗೆ ಸಚಿವರು ಭಾಷಣದಲ್ಲಿ ಉಲ್ಲೇಖಿಸಿದರೆ ಸಂತೋಷ’ ಎಂದರು.

ಉಳಿದಂತೆ, ಬಂದರು, ರಾಷ್ಟ್ರೀಯ ಹೆದ್ದಾರಿ, ನಾಗರಿಕ ವಿಮಾನ ನಿಲ್ದಾಣ ಮುಂತಾದ ವಿಚಾರಗಳ ಬಗ್ಗೆ ಕೇಂದ್ರದ ಬಜೆಟ್‌ನಲ್ಲಿ ಪ್ರಸ್ತಾಪವಾಗಬಹುದೇ ಎಂಬ ಕುತೂಹಲವೂ ಇದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !