ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಸ್ವಂತ ವೆಚ್ಚದಲ್ಲಿ 10 ಸಾವಿರ ಮಾಸ್ಕ್ ತಯಾರಿ: ಮಾದರಿಯಾದ ಮಹಿಳೆ

Last Updated 8 ಏಪ್ರಿಲ್ 2020, 2:18 IST
ಅಕ್ಷರ ಗಾತ್ರ

ಹಳಿಯಾಳ: ಕೊರೊನಾ ವೈರಸ್ ಸೋಂಕಿನಿಂದ ತಮ್ಮ ಊರಿನ ಜನರನ್ನು ರಕ್ಷಿಸಲು ಪಣತೊಟ್ಟಿರುವ ಮಹಿಳೆಯೊಬ್ಬರು 10ಸಾವಿರ ಮಾಸ್ಕ್ ಸಿದ್ಧಪಡಿಸಿ, ಜನರಿಗೆ ಉಚಿತವಾಗಿ ಹಂಚಲು ಮುಂದಾಗಿದ್ದಾರೆ.

ಹೊಲಿಗೆ ವೃತ್ತಿ ನಡೆಸುವ ಇಲ್ಲಿನ ರತ್ನಮಾಲಾ ಸುರೇಶ ಮುಳೆ ಅವರು ತಮ್ಮ ಜೊತೆ ಕೆಲಸ ಮಾಡುತ್ತಿರುವ 10 ಜನ ಕೆಲಸಗಾರರಿಗೆ ಉದ್ಯೋಗ ನೀಡಿ ಮಾಸ್ಕ್ ಸಿದ್ಧಪಡಿಸುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಪ್ರೇರಣೆಯಾಗಿದ್ದು ‘ಮಾಸ್ಕ್ ಸಿದ್ಧಪಡಿಸಲು ಗಾರ್ಮೆಂಟ್ ಕಾರ್ಖಾನೆಗೆ ಕೆಲಸಕ್ಕೆ ಮರಳಿ ಬನ್ನಿ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶ.

‘ಲಾಕ್‌ಡೌನ್ ಕಾರಣದಿಂದ ಏ.14ರವರೆಗೆ ಅಂಗಡಿಯ ಕೆಲಸಗಾರರಿಗೂ ಕೆಲಸವಿರಲಿಲ್ಲ. ಅವರಿಗೂ ಜೀವನಕ್ಕೆ ಆಧಾರವಾಗುತ್ತದೆ ಎಂದು ನಿರ್ಧರಿಸಿ, 10 ಜನ ಸಹಾಯಕರಿಗೆ ಸಂಬಳ ಕೊಟ್ಟು, ಕೆಲಸ ಮಾಡುತ್ತಿದ್ದೇನೆ. ಪತಿ ಸುರೇಶ ಮುಳೆ ಆರು ತಿಂಗಳ ಹಿಂದೆ ಹೃದಯಾಘಾತದಿಂದ ನಿಧನರಾದರು. ಅವರ ಸ್ಮರಣಾರ್ಥ ಸಮಾಜ ಸೇವೆ ಮಾಡಲು ನನಗೆ ಸಿಕ್ಕಿರುವ ಅವಕಾಶ ಇದು ಎಂದುಕೊಂಡಿದ್ದೇನೆ’ ಎಂದು ರತ್ನಮಾಲಾ ಪ್ರತಿಕ್ರಿಯಿಸಿದರು.

ರತ್ನಮಾಲಾ ಕಾರ್ಯಕ್ಕೆ ಅವರ ಪುತ್ರ ಅಮಿತ್ ಮುಳೆ, ಅಕ್ಷಯ ಮುಳೆ ಸೊಸೆ ಐಶ್ವರ್ಯಾ ಹಾಗೂ ಸಂಬಂಧಿಕರು ಸ್ವಖುಷಿಯಿಂದ ಕೈಜೋಡಿಸಿದ್ದಾರೆ. ಅಂಜಲಿ ಬುಲಬುಲೆ, ವಿದ್ಯಾ ಬುಲಬುಲೆ, ಅಶ್ವಿನಿ ಬೋಸ್ಲೆ, ಭಾರತಿ ಕದಂ, ಲಕ್ಷ್ಮಿ ಕಮ್ಮಾರ, ನಾಜೀಯಾ ತಾಂಬೀಟ್ಕರ, ಮಹಾದೇವಿ ಗೋಕಾವಿ ಹೊಲಿಗೆ ಕೆಲಸಕ್ಕೆ ನೆರವಾಗುತ್ತಿದ್ದಾರೆ.

‘ಹತ್ತಿ ಬಟ್ಟೆಯಲ್ಲಿ ಸಿದ್ಧಪಡಿಸುವ ಮಾಸ್ಕ್‌ಗೆ ಕಚ್ಚಾ ಸಾಮಗ್ರಿ ಕೊರತೆಯಾಯಿತು. ಹಳಿಯಾಳದ ಎಲ್ಲ ಬಟ್ಟೆ ಅಂಗಡಿ ತಿರುಗಾಡಿ, ಕಾಟನ್ ಬಟ್ಟೆ ಮತ್ತು ಇಲಾಸ್ಟಿಕ್ ಖರೀದಿಸಿದೆ. ಇದಕ್ಕಾಗಿ ನಾನು ಯಾರ ಸಹಾಯವನ್ನೂ ಪಡೆದಿಲ್ಲ. ಹೊಲಿಗೆ ವೃತ್ತಿಯಿಂದಲೇ ಕೂಡಿಟ್ಟ ಹಣವನ್ನು ಇದಕ್ಕಾಗಿ ಬಳಸಿದ್ದೇನೆ. ಮಾಸ್ಕ್ ಸಿದ್ಧಪಡಿಸುವವರಿಗೆ ದಿನಕ್ಕೆ ₹ 300 ಸಂಬಳ ನೀಡುತ್ತೇನೆ’ ಎಂದು ಅವರು ತಿಳಿಸಿದರು.

ಮೊದಲನೇ ಹಂತದ ಮಾಸ್ಕ್ ವಿತರಣೆ ಮಂಗಳವಾರ ಹಳಿಯಾಳದಲ್ಲಿ ನಡೆಯಿತು. ತಹಶೀಲ್ದಾರ್ ವಿದ್ಯಾಧರ ಗುಳಗಳಿ ಮಾಸ್ಕ ವಿತರಣೆಗೆ ಚಾಲನೆ ನೀಡಿದರು. ಪಟ್ಟಣದ ಪುರಸಭೆ, ತಾಲ್ಲೂಕಾ ಆಸ್ಪತ್ರೆ ಹಾಗೂ ವಿವಿಧ ವಾರ್ಡ್‌ಗಳಲ್ಲಿ ಸುಮಾರು 3000 ಮಾಸ್ಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

*
ಯಾವುದೇ ಸಂಸ್ಥೆ, ರಾಜಕೀಯ ವ್ಯಕ್ತಿಗಳು ಮಾಸ್ಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಲು ಸಿದ್ಧವಿದ್ದಲ್ಲಿ ಯೋಗ್ಯಬೆಲೆಗೆ ಉತ್ತಮ ಗುಣಮಟ್ಟದ ಮಾಸ್ಕ್ ತಯಾರಿಸಿಕೊಡಲು ನಾವು ಸಿದ್ಧರಿದ್ದೇವೆ.
–ರತ್ನಮಾಲಾ ಮುಳೆ,ಮಾಸ್ಕ್ ತಯಾರಿಸುವ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT