7

ಕುಸಿದ ನೆಲ; ಒಳಚರಂಡಿ ಕಳಪೆ ಕಾಮಗಾರಿ

Published:
Updated:
ಕುಸಿದು ಹೋದ ಒಳ ಚರಂಡಿ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ವೀಕ್ಷಿಸಿದರು

ಕುಮಟಾ: ಒಂದೂವರೆ ವರ್ಷದಿಂದ ಪಟ್ಟಣದಲ್ಲಿ ನಡೆಯುತ್ತಿರುವ ಸುಮಾರು ₹42 ಕೋಟಿ ವೆಚ್ಚದ ಒಳಚರಂಡಿ ಕಾಮಗಾರಿ ಮಳೆಗಾಲದಲ್ಲಿ ತನ್ನ ನಿಜ ರೂಪ ಪ್ರದರ್ಶಿಸಿದೆ.

ಹೊಸ ಬಸ್ ನಿಲ್ದಾಣ ಎದುರು ಹೆದ್ದಾರಿ ಬದಿ ಪೈಪ್ ಅಳವಡಿಸಲು ಗುಂಡಿ ತೋಡಿದ್ದ ಜಾಗದಲ್ಲಿ ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ಬಂದ ಖಾಸಗಿ ಬಸ್ಸೊಂದು ನಿಂತಾದ ಸಡಿಲಗೊಂಡಿದ್ದ ಮಣ್ಣು ಕುಸಿದು ಬಸ್ಸಿನ ಚಕ್ರ ಹೂತು ಹೋಗಿದೆ. ಹೆದ್ದಾರಿಯಿಂದ ನೆಲ್ಲಿಕೇರಿ ರಸ್ತೆಗೆ ತಿರುಗುವಲ್ಲಿ ಡಾಂಬರು ಒಡೆದು ರಸ್ತೆ ಉದ್ದಕ್ಕೆ ಕುಸಿದಿದೆ. ಮೂರೂರು ಕ್ರಾಸ್ ಬಳಿಯೂ ಇದೇ ಪರಿಸ್ಥಿತಿ ಉಂಟಾಗಿದೆ.

ಹಿಂದೆ ಒಳಚರಂಡಿ ಕಳಪೆ ಕಾಮಗಾರಿ ವಿರುದ್ಧ ರಸ್ತೆ ತಡೆ, ಪ್ರತಿಭಟನೆ, ಸಭೆ ನಡೆಸಿದ್ದ ದಿನಕರ ಶೆಟ್ಟಿ ಈಗ ಶಾಸಕರಾಗಿದ್ದಾರೆ. ಅವರು ಮಂಗಳವಾರ ಸ್ಥಳಕ್ಕೆ ಬಂದು ಪರಿಶೀಲಿಸಿದರು.

‘ಒಳಚರಂಡಿ ಪಟ್ಟಣಕ್ಕೆ ಬೇಕೇ ಬೇಕು. ಈಗ ಮಳೆ ಬೀಳುತ್ತಿರುವುದರಿಂದ ದುರಸ್ತಿ ಕಾರ್ಯ ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾದ ನಂತರ ಒಳಚರಂಡಿ ಯೋಜನೆ ಬಗ್ಗೆ ಮಾಹಿತಿ ಇರುವ ತಜ್ಞ ಎಂಜಿಯಿರ್ ಕರೆಸಿ ಅವರ ಸಲಹೆಯಂತೆ ಕಾಮಗಾರಿ ಹಾಳಾದಲ್ಲಿ ಸರಿಪಡಿಸಲಾಗುವುದು’ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಗುಜರಾತಿನ ಸೂಪರ್ ಕನಸ್ಟ್ರಕ್ಷನ್ ಕಂಪನಿಗೆ ಕಾಮಗಾರಿ ಟೆಂಡರ್ ಆಗಿತ್ತು. ಗುಣಮಟ್ಟದ ಕೊರತೆಯಿಂದಾಗಿ ಆರಂಭದಲ್ಲಿಯೇ ಕಾಮಗಾರಿ ಸಾರ್ವಜನಿಕರ ಆಕ್ಷೇಪಕ್ಕೆ ಗುರಿಯಾಗಿತ್ತು. ಅಂದಿನ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರನ್ನು ಕರೆದುಕೊಂಡು ಹೋಗಿ ಕಾಮಗಾರಿಯನ್ನು ತೋರಿಸಿದ್ದರು. ಚರ್ಚೆ ನಡೆಸಲು ಸಭೆ ಕರೆದರೂ ಸಭೆ ಫಲಪ್ರದವಾಗಿರಲಿಲ್ಲ. ಸಾರ್ವಜನಿಕರು ಪ್ರತಿಭಟನೆಯನ್ನೂ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !