ಶುಕ್ರವಾರ, ಮಾರ್ಚ್ 5, 2021
30 °C

ಪೋಷಕ ಪಾತ್ರಕ್ಕೆ ಹಿರಿಮೆ ತಂದ ಕಲಾವಿದ ತಿಮ್ಮಣ್ಣ ಯಾಜಿ ಮಣ್ಣಿಗೆ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾವರ: ಯಕ್ಷಗಾನ ಕಲಾವಿದ ತಿಮ್ಮಣ್ಣ ಯಾಜಿ ಮಣ್ಣಿಗೆ (94) ಮಂಗಳವಾರ ಸಂಜೆ ನಿಧನರಾದರು. ಅವರಿಗೆ ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ಕೆರೆಮನೆ, ಅಮೃತೇಶ್ವರಿ, ಸಾಲಿಗ್ರಾಮ, ಗುಂಡಬಾಳಾ ಮೊದಲಾದ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ತಿಮ್ಮಣ್ಣ ಯಾಜಿ ರಾಜ್ಯೋತ್ಸವ ಪ್ರಶಸ್ತಿ, ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಗೆ ಭಾಜನರಾಗಿದ್ದರು.

ತಿಮ್ಮಣ್ಣ ಯಾಜಿ ಯಕ್ಷಗಾನದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸಜ್ಜನ ಕಲಾವಿದ. ಧರ್ಮರಾಯ, ಭೀಮ ಮೊದಲಾದ ಪೋಷಕ ಪಾತ್ರಗಳ ಮೂಲಕ ಯಕ್ಷಗಾನದಲ್ಲಿ ತನ್ನದೇ ಛಾಪು ಮೂಡಿಸಿದ್ದ ಅವರು, ಬಳ್ಕೂರು ಸಮೀಪದ ‘ಮಣ್ಣಿಗೆ’ ಊರಿನವರು. ತಿಮ್ಮಣ್ಣ ಯಾಜಿ ಮಣ್ಣಿಗೆ ಎಂದೇ ಪರಿಚಿತರಾಗಿದ್ದರು.

94 ಸಂತೃಪ್ತ ವಸಂತಗಳನ್ನು ಕಂಡಿದ್ದ ಅವರು, ಇನ್ನು ನೆನಪು ಮಾತ್ರ. ಕೆರೆಮನೆ ಶಿವರಾಮ ಹೆಗಡೆ ಅವರ ಜರಾಸಂಧನ ಪಾತ್ರಕ್ಕೆ ಜೋಡಿಯಾಗಿ ಭೀಮನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ಖ್ಯಾತಿ ಅವರದ್ದು. ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ ಸೇರಿದಂತೆ ಹಲವು ಖ್ಯಾತ ಕಲಾವಿದರ ಜೊತೆಗೆ ಸಹ ಕಲಾವಿದರಾಗಿ ವಿವಿಧ ಪಾತ್ರಗಳನ್ನು ನಿಭಾಯಿಸಿದ್ದಾರೆ. ವೀರಮಣಿ, ಕುಳಿಂದ, ಕಿರಾತ, ಮಂಥರೆ, ಶಬರ ಮೊದಲಾದ ಪಾತ್ರಗಳು ಹೆಸರು ತಂದುಕೊಟ್ಟವು.

ಯಕ್ಷಗಾನ ಭಾಗವತರಾಗಿಯೂ ತಿಮ್ಮಣ್ಣ ಯಾಜಿ ಸೇವೆ ಸಲ್ಲಿಸಿದ್ದಾರೆ. ಕೆರೆಮನೆ, ಗುಂಡಬಾಳಾ, ಅಮೃತೇಶ್ವರಿ, ಸಾಲಿಗ್ರಾಮ ಮೊದಲಾದ ಮೇಳಗಳಲ್ಲಿ ವೃತ್ತಿ ಕಲಾವಿದರಾಗಿದ್ದರು. ಗುಂಡಬಾಳ, ಮೂಡ್ಕಣಿ, ಗುಂಡಿಬೈಲ್ ಮೊದಲಾದ ಮೇಳಗಳ ಸಂಘಟಕರಾಗಿ ಕೆಲಸ ಮಾಡಿದ ಹಿರಿಮೆ ಅವರದ್ದು.

‘ರಾಜ್ಯೋತ್ಸವ ಪ್ರಶಸ್ತಿ’, ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’, ‘ಡಾ.ಕೆರೆಮನೆ ಮಹಾಬಲ ಹೆಗಡೆ ಸ್ಮಾರಕ ಪ್ರತಿಷ್ಠಾನ ಪ್ರಶಸ್ತಿ’ ಅವರಿಗೆ ಸಂದಿವೆ. ಹಲವು ಸಂಘಸಂಸ್ಥೆಗಳು ತಿಮ್ಮಣ್ಣ ಯಾಜಿ ಅವರ ಕಲಾಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು