ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಗಾತ್ರ ₹ 1.36 ಸಾವಿರ ಕೋಟಿ

ಜಿಲ್ಲಾ ಪಂಚಾಯ್ತಿಯ ಆಯವ್ಯಯ ಮಂಡಿಸಿದ ಅಧ್ಯಕ್ಷೆ ಜಯಶ್ರೀ ಮೊಗೇರ
Last Updated 29 ಮೇ 2020, 13:59 IST
ಅಕ್ಷರ ಗಾತ್ರ

ಕಾರವಾರ: 2020–21ನೇ ಸಾಲಿಗೆ ಜಿಲ್ಲಾ ಪಂಚಾಯ್ತಿಯ ಆಯವ್ಯಯದ ಅಂದಾಜು ಗಾತ್ರವು ₹ 1 ಸಾವಿರದ 36 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದು ₹ 953.96 ಕೋಟಿಯಾಗಿತ್ತು.

ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಜಯಶ್ರೀ ಮೊಗೇರ ಆಯವ್ಯಯ ಮಂಡಿಸಿದರು. ಈ ಕರಡು ಯೋಜನೆಗೆ ರಾಜ್ಯ ಸರ್ಕಾರವು ಈಗಾಗಲೇ ಒಪ್ಪಿಗೆ ನೀಡಿದೆ.ಈ ವರ್ಷ ಯೋಜನೆ ಲೆಕ್ಕ ಶೀರ್ಷಿಕೆ ಮತ್ತು ಯೋಜನೇತರ ಲೆಕ್ಕ ಶೀರ್ಷಿಕ ಎಂಬ ಪ್ರತ್ಯೇಕ ವಿಂಗಡಣೆ ಇಲ್ಲ ಎಂದು ತಿಳಿಸಿದರು.

‘ಜಿಲ್ಲಾ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 315.44 ಕೋಟಿ, ತಾಲ್ಲೂಕು ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 720.31 ಕೋಟಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯಕ್ರಮಗಳಿಗೆ ₹ 66 ಲಕ್ಷ ಒದಗಿಸಲಾಗಿದೆ. ಜಿಲ್ಲಾ ಪಂಚಾಯ್ತಿಯ ಹಾಗೂ ಅಧೀನ ಇಲಾಖೆಗಳ ಸಿಬ್ಬಂದಿಯ ವೇತನಕ್ಕೆ ₹ 101.17 ಕೋಟಿ, ಹೊರ ಗುತ್ತಿಗೆ ನೌಕರರ ವೇತನಕ್ಕೆ ₹ 80.8 ಕೋಟಿ, ದಿನಗೂಲಿ ನೌಕರರ ವೇತನಕ್ಕೆ ₹ 77.04 ಲಕ್ಷ ಹಾಗೂ ಕಚೇರಿ ವೆಚ್ಚ, ಅಭಿವೃದ್ಧಿ ಕಾರ್ಯಗಳಿಗೆ ₹ 205.40 ಕೋಟಿಯನ್ನು ವಿಂಗಡಿಸಲಾಗಿದೆ ಎಂದುಮಾಹಿತಿ ನೀಡಿದರು.

ಬಿಲ್ ಬಾಕಿ ಬಗ್ಗೆ ಚರ್ಚೆ: ಕಳೆದ ಸಾಲಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರು ಬಿಲ್ ಪಾವತಿಸುವಂತೆ ಪದೇಪದೇ ಕೇಳುತ್ತಿದ್ದಾರೆ. ಇದರಲ್ಲಿ ಲೋಪವಾಗಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಪ್ರತಿಕ್ರಿಯಿಸಿ, ‘ಇದರಲ್ಲಿತಪ್ಪು ಮಾಡಿದವರಿಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೇ ಖಜಾನೆಯು ಈ ವರ್ಷದ ಲೆಕ್ಕಪತ್ರಗಳಸ್ವೀಕಾರವನ್ನು ನಿಲ್ಲಿಸುವುದಾಗಿ ಮಾರ್ಚ್ 13ರಂದು ಪ್ರಕಟಣೆ ಬಂತು. ಅದಾದ ಬಳಿಕ10 ದಿನ ಅವಕಾಶ ನೀಡಲಾಯಿತು. ಗುತ್ತಿಗೆದಾರರಿಗೆ ಹಣ ಪಾವತಿಯ ಬಗ್ಗೆ ಯಾವುದೇ ಅನುಮಾನ ಬೇಡ’ ಎಂದು ಭರವಸೆ ನೀಡಿದರು.

ಇದೇವೇಳೆ, ಕೊರೊನಾ ವಿರುದ್ಧ ಹೋರಾಡುತ್ತಿರುವ ಎಲ್ಲರನ್ನು ಸದಸ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.ಶ್ರೀಕಲಾ ಶಾಸ್ತ್ರಿ ಮಾತನಾಡಿ, ‘ಮೊಹಮ್ಮದ್ ರೋಶನ್ ಅವರು‌ ಭಟ್ಕಳದಆಸ್ಪತ್ರೆಗಳಿಗೇ ಭೇಟಿ ನೀಡಿಬಂದಿದ್ದಾರೆ. ಅಧಿಕಾರಿಗಳು ತಮ್ಮ ಜೀವದ ಹಂಗು ತೊರೆದು ಈ ರೀತಿ ಮುಂದುವರಿಯುವುದು ಬಹಳ ಕಡಿಮೆ. ಕ್ರಿಮ್ಸ್‌ ವೈದ್ಯರು ಮತ್ತು ಸಿಬ್ಬಂದಿ ಐದು ತಿಂಗಳ ಮಗುವಿನಿಂದ ಹಿಡಿದು, 83 ವರ್ಷದ ಹಿರಿಯರ ತನಕ ವಿವಿಧ ಸೋಂಕಿತರನ್ನು ಗುಣಪಡಿಸಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ಸೂಚಿಸಿದರು.

ಜಗದೀಶ ನಾಯಕ‌ ಮೊಗಟಾ ಮಾತನಾಡಿ, ‘ಜಿಲ್ಲಾ ಪಂಚಾಯ್ತಿಯ ಸದಸ್ಯರನ್ನೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಪರಿಗಣಿಸಬೇಕಿತ್ತು. ಅಗತ್ಯ ಸಾಮಗ್ರಿಗಳವಿತರಣೆಗೆ ತೆರಳಿದಾಗಚೆಕ್‌ಪೋಸ್ಟ್‌ಗಳಲ್ಲಿ ಪಾಸ್ ಕೇಳುತ್ತಿದ್ದುದು ಮುಜುಗರ ತರುತ್ತಿತ್ತು’ ಎಂದರು.

ಆಲ್ಬರ್ಟ್ ಡಿಕೊಸ್ತ ಮಾತನಾಡಿ, ‘ಭಟ್ಕಳದಲ್ಲಿ ಲಾಕ್‌ಡೌನ್ ಸಂಬಂಧ ಕೇವಲ ಅಧಿಕಾರಿಗಳು ಸಭೆ ನಡೆಸಿದರು. ಅಧಿಕಾರ ವಿಕೇಂದ್ರೀಕರಣ ಮಾಡಿದ್ದರೆ ಎರಡನೇ ಹಂತದ ಲಾಕ್‌ಡೌನ್ ತಡೆಯಬಹುದಿತ್ತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಚ್ಛ ಭಾರತ – 2:ಸ್ವಚ್ಛ ಭಾರತ ಅಭಿಯಾನದ ಎರಡನೇ ಹಂತದ ಕಾರ್ಯಕ್ರಮಗಳ ಬಗ್ಗೆ ಅಭಿಯಾನದ ಮಾನವ ಸಂಪನ್ಮೂಲ ಅಭಿವೃದ್ಧಿ ಸಮಾಲೋಚಕ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದರು.

ಗೋಕರ್ಣದಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕಸ್ಥಾಪಿಸಲು ಉದ್ದೇಶಿಸಲಾಗಿದೆ. ಅದೇರೀತಿ, ಎಲ್ಲ ಗ್ರಾಮಗಳಲ್ಲಿಘನತ್ಯಾಜ್ಯ ವಿಲೇವಾರಿ ಘಟಕಗಳು, ಜೈವಿಕ ತ್ಯಾಜ್ಯಗಳ ನಿರ್ವಹಣೆ, ‘ಗೋಬರ್‌ಧನ್’ ಯೋಜನೆಯಡಿಜೈವಿಕ ಅನಿಲ ಉತ್ಪಾದನೆಯ ಘಟಕಗಳನ್ನು ಸ್ಥಾಪಿಸಲಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ ರೇಣಕೆ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚೈತ್ರಾ ಕೊಠಾಕರ್, ಬಸವರಾಜ ದೊಡ್ಮನಿ, ಉಷಾ ಉದಯ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT