ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಕನ್ನಡ| 470 ಬಿಪಿಎಲ್ ಪ‍ಡಿತರ ಚೀಟಿ ರದ್ದು

ಅಕ್ರಮವಾಗಿ ಸೌಲಭ್ಯ ಪಡೆದ 102 ಸರ್ಕಾರಿ ನೌಕರರಿಂದ ದಂಡ ವಸೂಲಿ
Last Updated 7 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರವು ಮಂಜೂರು ಮಾಡಿರುವ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಅಕ್ರಮವಾಗಿ ಹೊಂದಿರುವ 470 ಕುಟುಂಬಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದೆ. ಅವುಗಳಲ್ಲಿ 102 ಕುಟುಂಬಗಳು ಸರ್ಕಾರಿ ನೌಕರರಿಗೇ ಸೇರಿವೆ.

ಅಕ್ರಮ ಎಂದು ಗುರುತಿಸಲಾಗಿರುವ ಎಲ್ಲರ ಪಡಿತರ ಚೀಟಿಗಳನ್ನೂ ರದ್ದು ಮಾಡಲಾಗಿದೆ. ಇನ್ನೂ ಹಲವು ಕುಟುಂಬಗಳು ಮಾಹಿತಿ ಮುಚ್ಚಿಟ್ಟಿರುವ ಬಗ್ಗೆ ಅನುಮಾನವಿದೆ. ಮನೆಯಲ್ಲಿ ಸಾಕಷ್ಟು ಅನುಕೂಲವಿದ್ದರೂ ಸರ್ಕಾರದ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳಲು ಹುನ್ನಾರ ನಡೆಸಿದ ಹಲವರ ಅಕ್ರಮ ಈಗ ಬೆಳಕಿಗೆ ಬರುತ್ತಿದೆ. ಈ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕ್ರಮಕ್ಕೆ ಮುಂದಾಗಿದೆ.

ದಂಡ ಪಾವತಿಗೆ ಸೂಚನೆ:‘ತಮ್ಮನ್ನು ಬಡತನ ರೇಖೆಗಿಂತ ಕೆಳಗಿನವರು ಎಂದು ಘೋಷಿಸಿಕೊಂಡಿರುವ ಸರ್ಕಾರಿ ನೌಕರರ ವಿರುದ್ಧವೂ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಅವರು ಬಿ.ಪಿ.ಎಲ್ ಪಡಿತರ ಚೀಟಿ ಮಾಡಿಸಿಕೊಂಡ ದಿನಾಂಕದಿಂದ ಚೀಟಿ ರದ್ದು ಮಾಡಿದ ದಿನಾಂಕದವರೆಗೆ ಮಾರುಕಟ್ಟೆಯಲ್ಲಿ ವಿವಿಧ ಪಡಿತರ ಸಾಮಗ್ರಿಗೆ ಇದ್ದ ದರವನ್ನು ವಸೂಲಿ ಮಾಡಲಾಗುತ್ತಿದೆ. ಸರ್ಕಾರಕ್ಕೆ ಮೋಸ ಮಾಡಿದವರಿಂದ ಈ ಮೂಲಕ ನಷ್ಟವನ್ನು ಭರಿಸಿಕೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ ತಿಳಿಸಿದ್ದಾರೆ.

ಸರ್ಕಾರಿ ನೌಕರರಲ್ಲದವರಿಂದ ಸದ್ಯಕ್ಕೆ ಯಾವುದೇ ದಂಡ ವಸೂಲಿ ಮಾಡುತ್ತಿಲ್ಲ. ಅವರ ಪಡಿತರ ಚೀಟಿಯನ್ನು ರದ್ದು ಮಾಡಿ ಎಚ್ಚರಿಕೆ ಕೊಡಲಾಗುತ್ತಿದೆ. ಒಂದುವೇಳೆ, ಪಡಿತರ ಚೀಟಿ ಮಾಡಿಸಿಕೊಂಡು ಆರು ತಿಂಗಳಿನಿಂದ ಪಡಿತರ ಸಾಮಗ್ರಿ ಪಡೆಯದವರ ವಿರುದ್ಧವೂ ಕ್ರಮ ಕೈಗೊಳ್ಳಲು ಇಲಾಖೆ ಚಿಂತನೆ ನಡೆಸಿದೆ. ಈ ರೀತಿ ಎಷ್ಟು ಕುಟುಂಬಗಳಿವೆ ಎಂಬುದನ್ನು ಪರಿಶೀಲಿಸಿಪಡಿತರ ಚೀಟಿಯನ್ನು ರದ್ದು ಮಾಡಲು ಉದ್ದೇಶಿಸಲಾಗಿದೆ.

ಈಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ಪಡಿತರ ಪಡೆಯದೇ ಇದ್ದರೆ ಆ ಕುಟುಂಬ ಸ್ಥಳೀಯವಾಗಿ ವಾಸವಾಗಿಲ್ಲ ಎಂದು ನಿರ್ಧರಿಸಲಾಗುತ್ತದೆ. ಬಳಿಕ ಅವರ ಚೀಟಿಯನ್ನು ರದ್ದು ಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

***

ರದ್ದು ಮಾಡಿದ ಬಿಪಿಎಲ್ ಚೀಟಿಗಳು

ತಾಲ್ಲೂಕು ಸರ್ಕಾರಿ ನೌಕರರು ಇತರರು ಒಟ್ಟು

ಕಾರವಾರ 24 69 93

ಅಂಕೋಲಾ 5 74 79

ಕುಮಟಾ 4 30 34

‌ಹೊನ್ನಾವರ 18 10 28

ಭಟ್ಕಳ 24 17 41

ಶಿರಸಿ 4 48 52

ಸಿದ್ದಾಪುರ 7 6 13

ಯಲ್ಲಾಪುರ 8 20 28

ಮುಂಡಗೋಡ 0 34 34

‌ಹಳಿಯಾಳ 3 50 53

ಜೊಯಿಡಾ 5 10 15

ಒಟ್ಟು 102 368 470

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT