ದಾಂಡೇಲಿ: ನಗರದಲ್ಲಿ ಅನೇಕ ಕಡೆ ಪ್ರತಿಷ್ಠಾಪನೆ ಮಾಡಿರುವ ಗಣಪತಿಗಳನ್ನು ಕಳೆದ ಐದು ದಿನಗಳಿಂದ ಗಣ ಹೋಮ, ವಿಶೇಷ ಅಲಂಕಾರ, ವಿಶೇಷ ಪೂಜೆಯೊಂದಿಗೆ ಶ್ರದ್ದಾ ಭಕ್ತಿಯಿಂದ ಗಣಪತಿ ಆರಾಧನೆ ನಡೆಯುತ್ತದೆ.
ನಗರದ ಜೆ.ಎನ್. ರಸ್ತೆಯ ಗಜಾನನ ಸಮಿತಿ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗಿರುವ ಗಣೇಶ ಮಂಟಪದಲ್ಲಿ ಪ್ರದರ್ಶನ ಆಗುತ್ತಿರುವ ಸಮುದ್ರ ಮಂಥನ ರೂಪಕ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೆ.ಸಿ. ಸರ್ಕಲ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಡಿ ನಡೆಯುತ್ತಿರುವ ಗಣೇಶೋತ್ಸವದ ಗಣಪತಿ ಮಂಟಪದಲ್ಲಿ ಭಕ್ತ ಕುಂಬಾರ ಗೊಂಬೆ ರೂಪಕವು ಜನಾಕರ್ಷಣೆಯ ಪಡೆದು ಜನರ ಗಮನ ಸೆಳೆಯುತ್ತಿದೆ.
ಎರಡೂ ಕಡೆ ಪ್ರತಿದಿನ ಸಂಜೆ 6.30 ರಿಂದ ಈ ರೂಪಕದ ಪ್ರದರ್ಶನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ, ಈ ರೂಪಕವನ್ನು ಕಣ್ಣುಂಬಿಕೊಳ್ಳುತ್ತಿದ್ದಾರೆ. ಚೌತಿಯ ಹನ್ನೊಂದನೆ ದಿನ ಗಣಪನ ವಿಸರ್ಜನೆಯ ಮುನ್ನ ದಿನದವರೆಗೆ ಈ ಪ್ರದರ್ಶನ ನಡೆಯಲಿದೆ ಎಂದು ಸಮಿತಿಯ ಸದಸ್ಯರು ತಿಳಿಸಿದ್ದಾರೆ.
ನಗರದಲ್ಲಿ ಸುಮಾರು 37ಕ್ಕೂ ಹೆಚ್ಚು ಕಡೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ನಗರವು ಬಹುತೇಕ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಸಂಜೆ ಆಗುತ್ತಿದ್ದಂತೆ ಜನರು ಗಣಪತಿ ವೀಕ್ಷಣೆಗೆ ತಂಡ ತಂಡವಾಗಿ ಬರುತ್ತಿದ್ದಾರೆ. ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆವರಣದಲ್ಲಿ ಆರು ಕಡೆ ಪ್ರತಿಷ್ಠಾಪನೆ ಮಾಡಿರುವ ಗಣಪತಿ ಮುಂದೆ ಮಾರವಾಡಿ ಸಮುದಾಯದವರಿಂದ ನಿರಂತರ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಪ್ರಸಾದ ವಿತರಣೆ ನಡೆಯುತ್ತಿವೆ.
5 ದಿನ ಮುಗಿಸಿದ 10ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆಯೊಂದಿಗೆ ಕಾಳಿ ನದಿಯಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಯಲ್ಲಿ ಡಿಜೆ ಸೇರಿದಂತೆ ಅನೇಕ ಸಾಂಸ್ಕೃತಿಕ ಕುಣಿತ ಕಂಡುಬಂದವು.