ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಅಪಾಯದ ಸ್ಥಿತಿಯಲ್ಲಿ ಅಂಗನವಾಡಿ ಕಟ್ಟಡ

Published 31 ಜುಲೈ 2023, 4:49 IST
Last Updated 31 ಜುಲೈ 2023, 4:49 IST
ಅಕ್ಷರ ಗಾತ್ರ

ಗಣಪತಿ ಹೆಗಡೆ

ಕಾರವಾರ: ಸೋರುವ ಚಾವಣಿ, ನೀರು ಒಸರುವ ನೆಲ, ಮುರಿದು ಬೀಳುವ ಸ್ಥಿತಿಯಲ್ಲಿರುವ ಕಿಟಕಿಗಳು, ಅಂಗಳದಲ್ಲಿ ಕೆರೆ ನೀರು, ತಿನ್ನಲು ಕೊಳೆತ ಮೊಟ್ಟೆ.

ಇದು ಜಿಲ್ಲೆಯ ಹತ್ತಾರು ಅಂಗನವಾಡಿಗಳಲ್ಲಿ ಸದ್ಯ ಕಾಣಸಿಗುತ್ತಿರುವ ಚಿತ್ರಣ.

ಸತತವಾಗಿ ಮಳೆ ಬೀಳುವ ಉತ್ತರ ಕನ್ನಡದಲ್ಲಿ ಮುರಿದು ಬೀಳುವ ಸ್ಥಿತಿಯ ಅಂಗನವಾಡಿಯತ್ತ ಆಡಳಿತ ವ್ಯವಸ್ಥೆಯ ಲಕ್ಷ್ಯ ಹೊರಳುವುದು ಕಡಿಮೆ. ಪುಟ್ಟ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವ ಪಾಲಕರು ಮಗು ಮರಳಿ ಮನೆಗೆ ಬರುವವರೆಗೂ ಆತಂಕದಲ್ಲೇ ಕಳೆಯುವ ಸ್ಥಿತಿ ಇದೆ.

ಮುಂಗಾರು ಮಳೆಯ ಅಬ್ಬರಕ್ಕೆ ಜಿಲ್ಲೆಯಲ್ಲಿ 166 ಅಂಗನವಾಡಿಗಳು ಹಾನಿಗೆ ಒಳಗಾಗಿವೆ. ಶಿಥಿಲಗೊಂಡ ಸ್ಥಿತಿಯ ಅಂಗನವಾಡಿ ಸಂಖ್ಯೆ 300 ದಾಟುತ್ತದೆ. 2,687 ಅಂಗನವಾಡಿಗಳ ಪೈಕಿ 278 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಇವುಗಳಿಗೆ ವರ್ಷದಿಂದಲೂ ಬಾಡಿಗೆ ಹಣವೇ ಬಿಡುಗಡೆಯಾಗಿಲ್ಲ. ಶಿರಸಿ, ಸಿದ್ದಾಪುರ ಹೊರತುಪಡಿಸಿದರೆ ಉಳಿದ ಬಹುತೇಕ ತಾಲ್ಲೂಕುಗಳಲ್ಲಿ ಆಗಾಗ ಕೊಳೆತ ಮೊಟ್ಟೆ ಪೂರೈಕೆಯಾಗುತ್ತಿರುವ ದೂರುಗಳಿವೆ. ಕ್ಷೀರಭಾಗ್ಯ ಯೋಜನೆ ಅಡಿ ಮಕ್ಕಳಿಗೆ ನೀಡಬೇಕಿದ್ದ ಹಾಲು ವಿತರಣೆ ಸ್ಥಗಿತಗೊಳಿಸಿ ಎಂಟು ತಿಂಗಳು ಕಳೆದಿದೆ.

‘‍ಪುಟ್ಟ ಮಕ್ಕಳು ಕಲಿಯುವ ಅಂಗನವಾಡಿಯಲ್ಲಿ ಸುರಕ್ಷತೆಗೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಬಹುತೇಕ ಕಡೆ ರಸ್ತೆಯ ಅಂಚಿನಲ್ಲೇ ಅಂಗನವಾಡಿ ಇದೆ. ಅದರ ಪಕ್ಕದಲ್ಲೇ ಆಗಲೋ ಈಗಲೋ ಬೀಳುವ ಮರಗಳಿವೆ. ಸಮುದಾಯ ಭವನದಲ್ಲೋ, ಗ್ರಂಥಾಲಯದ ಕಟ್ಟಡದಲ್ಲಿಯೋ ಮಕ್ಕಳಿಗೆ ಪಾಠ ಕಲಿಸಿ, ತಿನಿಸು ಸಿದ್ಧಪಡಿಸಿ ನೀಡಬೇಕಾಗುತ್ತಿದೆ’ ಎಂದು ಬೈತಕೋಲದ ಶ್ಯಾಮಲಾ ಗೌಡ ಬೇಸರ ತೋಡಿಕೊಳ್ಳುತ್ತಾರೆ.

ಶಿರಸಿ ತಾಲ್ಲೂಕಿನ 44 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಮೂರು ಅಂಗನವಾಡಿಗಳಿಗೆ ಶೌಚಾಲಯವಿಲ್ಲ. 12 ಕಡೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಅಗತ್ಯವಿದೆ.

ಶಿಥಿಲಗೊಂಡ ಕಟ್ಟಡದಲ್ಲಿ ಮಕ್ಕಳನ್ನು ಕೂರಿಸುವುದಿಲ್ಲ. ಅಂತಹ ಕಟ್ಟಡದ ಬದಲು ಪರ್ಯಾಯ ವ್ಯವಸ್ಥೆಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ.
ಹುಲಿಗೆಮ್ಮ ಕುಕನೂರ, ಉಪನಿರ್ದೇಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

‘ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನೀಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಉತ್ತಮ ಗುಣಮಟ್ಟದ ಮೊಟ್ಟೆ ಮಕ್ಕಳಿಗೆ ವಿತರಿಸಲಾಗುತ್ತಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವೇರ್ಣೆಕರ್ ಹೇಳುತ್ತಾರೆ.

ಜೊಯಿಡಾ ತಾಲ್ಲೂಕಿನಲ್ಲಿ ಹತ್ತು ಅಂಗನವಾಡಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕಳೆದ ವರ್ಷ ರಾಮನಗರ ಹನುಮಾನ ಗಲ್ಲಿಯಲ್ಲಿ  ನಿರ್ಮಿತಿ ವತಿಯಿಂದ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಸೋರುತ್ತಿದೆ.

ಯರಮುಖ, ಅಸು, ಪೋಟೊಲಿ, ಜಗಲಪೇಟ ಸೇರಿದಂತೆ 8 ಕಡೆಗಳಲ್ಲಿ ಹೊಸ ಕಟ್ಟಡಗಳು ಮಂಜರಾಗಿದ್ದು ಕಾಮಗಾರಿ ಇನ್ನಷ್ಟೆ ಆರಂಭವಾಗಬೇಕಾಗಿದೆ. ಕಳಪೆ ಮೊಟ್ಟೆ ಪೂರೈಕೆ ಆರೋಪ ಕೆಲ ಅಂಗನವಾಡಿ ಕೇಂದ್ರಗಳಿಂದ ಬಂದ ಹಿನ್ನಲೆಯಲ್ಲಿ ಜೂನ್ ತಿಂಗಳಲ್ಲಿ  ಮೊಟ್ಟೆಗಳನ್ನು ಪೂರೈಸಿರಲಿಲ್ಲ.

- ಪುಟ್ಟ ಮಕ್ಕಳು ಕಲಿಯುವ ಕಟ್ಟಡಗಳು ಭದ್ರವಾಗಿರಬೇಕು ಸೌಲಭ್ಯ ಹೊಂದಿರಬೇಕು. ಹಾಗಿದ್ದರೆ ಪಾಲಕರಿಗೂ ಆತಂಕ ಇರುವುದಿಲ್ಲ.
ಸುಧಾ ನಾಯ್ಕ ಶಿರಸಿ, ಪಾಲಕಿ

‘ರಾಮನಗರದಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡ  ಸೋರುತ್ತಿರುವ ಕುರಿತು ಜಿಲ್ಲಾ ನಿರ್ಮಿತಿ ಅಧಿಕಾರಿಗೆ ಪತ್ರ ಬರೆಯಲಾಗಿದೆ’ ಶಿಶು ಅಭಿವೃದ್ಧಿ ಅಧಿಕಾರಿ ಶಾರದಾ ಮರಾಠೆ ಹೇಳಿದರು.

ಯಲ್ಲಾಪುರ ತಾಲ್ಲೂಕಿನಲ್ಲಿ ಮೂರು ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ, 29 ಶಾಲೆ ಕಟ್ಟಡದಲ್ಲಿ ನಡೆಯುತ್ತಿವೆ. ಅಂಗನವಾಡಿಗಳಿಗೆ ಪೂರೈಸಲಾಗುತ್ತಿರುವ ಮೊಟ್ಟೆಗಳ ಗುಣಮಟ್ಟ ಉತ್ತಮವಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಪರಿಸ್ಥಿತಿ ಸುಧಾರಿಸಿದೆ. ಐದು ಕಟ್ಟಡಗಳು ಶಿಥಿಲಗೊಂಡಿದ್ದು ಅವುಗಳ ತೆರವಿಗೆ ಕ್ರಮವಹಿಸಲಾಗಿದೆ. ಆರು ಅಂಗನವಾಡಿಗಳಿಗೆ ಶಿಕ್ಷಕರ ಕೊರತೆಯಿದೆ.

ದಾಂಡೇಲಿ ತಾಲ್ಲೂಕಿನಲ್ಲಿ 22 ಅಂಗನವಾಡಿಗಳು ಬಾಡಿಗೆ ಕಟ್ಟಡವನ್ನು ಅವಲಂಬಿಸಿವೆ. ವಿರಾಶಿಗಲ್ಲಿ, ಅಂಬೇವಾಡಿ ನವಗ್ರಾಮ,ಅಂಬಿಕಾನಗರದಲ್ಲಿ ಶಾಸಕರ ಅನುದಾನದಲ್ಲಿ ಕಟ್ಟಡ ಪ್ರಗತಿಯಲ್ಲಿದೆ.

‘ಒಂದು ವರ್ಷದಿಂದ ಅನುದಾನ ಬಿಡುಗಡೆಯಾಗದೆ ಬಾಡಿಗೆ ಪಾವತಿಯೂ ಆಗುತ್ತಿಲ್ಲ. ಕಟ್ಟಡಗಳ ಮಾಲೀಕರ ಒತ್ತಡಕ್ಕೆ ಬೇಸತ್ತು ಕೆಲವು ಕಡೆ ಅಂಗವಾಡಿ ಶಿಕ್ಷಕಿಯರೆ ಸ್ವಂತ ವೆಚ್ಚ ಭರಿಸಿ ಬಾಡಿಗೆ ಕೊಟ್ಟ ಉದಾಹರಣೆಗಳಿವೆ’ ಎಂದು ಹಳಿಯಾಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಿ ಹೇಳಿದರು.

ಕಳೆದ ವರ್ಷ ಮಳೆ ಗಾಳಿಗೆ ಹಾನಿಗೀಡಾಗಿದ್ದ ಹೊನ್ನಾವರ ತಾಲ್ಲೂಕಿನ ಹಿರೇಬೈಲಿನ ಅಂಗನವಾಡಿ ಕಟ್ಟಡ ಇನ್ನೂ ದುರಸ್ತಿಯಾಗಿಲ್ಲ. ಹಿರೇಬೈಲ್ ಸೇರಿದಂತೆ ಒಟ್ಟೂ 18 ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ.

ಸಹಾಯಕಿ ಹೆರಿಗೆ ರಜೆಯ ಮೇಲಿದ್ದಾಗ ನಾನೇ ಎಲ್ಲ ಕೆಲಸ ನಿರ್ವಹಿಸಬೇಕಾಯಿತು. ಚುನಾವಣೆ ಜನಗಣತಿ ಮನೆ ಮನೆ ಸರ್ವೆ ಹೀಗೆ ಉಳಿದ ಕೆಲಸಗಳ ಒತ್ತಡವೂ ಹೆಚ್ಚುತ್ತಿದೆ. ಎಷ್ಟೇ ಕೆಲಸ ಮಾಡಿದರೂ ಬರುವ ಸಂಬಳ ಮಾತ್ರ ನಾಲ್ಕಂಕಿ ದಾಟುವುದಿಲ್ಲ.
ಹೊನ್ನಾವರ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆ

ಮೂರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ 19 ಸಹಾಯಕಿಯರ ಹುದ್ದೆಗಳನ್ನು ಇನ್ನಷ್ಟೆ ಭರ್ತಿ ಮಾಡಬೇಕಿದೆ. ಕಾರ್ಯಕರ್ತೆಯರು ಅಥವಾ ಸಹಾಯಕಿಯರು ರಜೆಯ ಮೇಲೆ ತೆರಳಿದರೆ ಬದಲಿ ವ್ಯವಸ್ಥೆ ಕಲ್ಪಿಸುತ್ತಿಲ್ಲ.

‘ಜೂನ್ ತಿಂಗಳಲ್ಲಿ ಬಂದಿದ್ದ ಒಂದು ಲೋಡ್ ಮೊಟ್ಟೆಗಳೆಲ್ಲ ಹಾಳಾಗಿದ್ದರಿಂದ ವಾಪಸು ಕಳಿಸಲಾಯಿತು. ಎರಡು ತಿಂಗಳಿಗೆ ನೀಡಬೇಕಿದ್ದ ಮೊಟ್ಟೆಯನ್ನು ಈಗ ಮಕ್ಕಳಿಗೆ ನೀಡಲಾಗಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಸುಶೀಲಾ ಮೊಗೇರ ಹೇಳಿದರು.

ಕುಮಟಾ ತಾಲ್ಲೂಕಿನಲ್ಲಿ ಏಳು ಹೊಸ ಅಂಗನವಾಡಿಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮಣ್ಣಿನ ಗೋಡೆಗಳು ಇದ್ದ ಅಂಗನವಾಡಿಗಳನ್ನು ಸುರಕ್ಷಿರತ ಕಟ್ಟಡಗಳಿಗೆ ಸ್ಥಳಾಂತರ ಮಾಡಲಾಗಿದೆ.

ಅಂಗನವಾಡಿಯಲ್ಲಿ ಒಮ್ಮೆ ಮಕ್ಕಳಿಗೆ ಕೊಳೆತ ಮೊಟ್ಟೆ ನೀಡಲಾಗಿತ್ತು. ಇದರಿಂದ ಮಕ್ಕಳು ಅಸ್ವಸ್ಥಗೊಳ್ಳಬೇಕಾಗಿ ಬಂದಿತ್ತು.
ಕವಿತಾ ನಾಯ್ಕ ಕೇಣಿ ಪಾಲಕಿ

‘ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈಗ ಕಾರ್ಯನಿರ್ವಹಿಸುತ್ತಿರುವ ಎಲ್ಲ ಕಟ್ಟಡಗಳಿಗೂ ಸುರಕ್ಷತೆ ಪ್ರಮಾಣ ಪತ್ರ ಪಡೆದಿದ್ದೇವೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ನಾಗರತ್ನಾ ನಾಯಕ ಹೇಳಿದರು.

ಗೋಕರ್ಣದ ಮುಖ್ಯ ಕಡಲತೀರದ ಬಳಿ ಇರುವ ಅಂಗನವಾಡಿ ಕೇಂದ್ರ ಅಗತ್ಯ ಸೌಲಭ್ಯವಿದ್ದರೂ ಮಕ್ಕಳ ಕೊರತೆಯಿಂದ ಮುಚ್ಚಲ್ಪಡುವ ಹಂತಕ್ಕೆ ಬಂದಿದೆ. ಮೊದಲು 30 ರಿಂದ 40 ಜನ ಮಕ್ಕಳ ಹಾಜರಾತಿಯಿದ್ದ ಅಂಗನವಾಡಿಯಲ್ಲಿ ಈಗ ಕೇವಲ ಆರು ಮಕ್ಕಳಿದ್ದಾರೆ.

ಅಂಕೋಲಾ ತಾಲ್ಲೂಕಿನಲ್ಲಿ 23 ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಕೆಲವು ಕಟ್ಟಡಗಳಲ್ಲಿ ಮಕ್ಕಳಿಗೆ ಸರಿಯಾಗಿ ಆಟದ ಸ್ಥಳವಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎಂದು ಪಾಲಕರು ದೂರುತ್ತಿದ್ದಾರೆ.

‘ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಿ ಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಸವಿತಾ ಶಾಸ್ತ್ರೀಮಠ ಹೇಳಿದರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ರವಿ ಸೂರಿ, ಪ್ರವೀಣಕುಮಾರ ಸುಲಾಖೆ, ಜ್ಞಾನೇಶ್ವರ ದೇಸಾಯಿ, ವಿಶ್ವೇಶ್ವರ ಗಾಂವ್ಕರ್, ಮೋಹನ ದುರ್ಗೇಕರ್.

ಮಳೆ ಬಿದ್ದರೆ ಮಕ್ಕಳಿಗೆ ರಜೆ

ಮುಂಡಗೋಡ ತಾಲ್ಲೂಕಿನ ಗ್ರಾಮೀಣ ಭಾಗದ ಕೆಲವು ಅಂಗನವಾಡಿ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತಿದ್ದು ಅಂತಹ ಕಟ್ಟಡಗಳಲ್ಲಿ ಅತಿ ಮಳೆಯಾಗುವ ಸಮಯದಲ್ಲಿ ರಜೆ ನೀಡಲಾಗುತ್ತಿದೆ. ಕೆಲವೊಂದು ಕೇಂದ್ರಗಳಿಗೆ ಆವರಣ ಗೋಡೆ ಇಲ್ಲದಿರುವುದರಿಂದ ಮಕ್ಕಳ ಸುರಕ್ಷತೆಯ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ‘ಕುಂದರಗಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರವು ಸೋರುತ್ತಿದ್ದು ಸತತ ಮಳೆಯಿಂದ ಕೇಂದ್ರದ ಸನಿಹದಲ್ಲಿಯೇ ಕೆರೆಯ ನೀರು ಬಂದಿದೆ. ಮಳೆಯಾದರೆ ಮಕ್ಕಳು ಅಂಗನವಾಡಿಗೆ ಬರಲು ಆಗದು’ ಎಂದು ಅಲ್ಲಿನ ನಿವಾಸಿ ಕೃಷ್ಣ ದೂರಿದರು. ‘ತಾಲ್ಲೂಕಿನಲ್ಲಿ 13 ಕೇಂದ್ರಗಳು ಮಳೆಗಾಲದಲ್ಲಿ ಸೋರುತ್ತಿವೆ. ಅವುಗಳ ದುರಸ್ತಿಗೆ ಈಗಾಗಲೇ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗಕ್ಕೆ ಪ್ರಸ್ತಾವನೆ ಕಳಿಸಲಾಗಿದೆ’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ದೀಪಾ ಬಂಗೇರ ಹೇಳಿದರು.

ಸಿಬ್ಬಂದಿಗೆ ಅನ್ಯ ಕೆಲಸದ ಒತ್ತಡ

ಹಳಿಯಾಳ ತಾಲ್ಲೂಕಿನ ಭೀಮನಳ್ಳಿ ಕುರಿಗದ್ದಾ ಚಿಬ್ಬಲಗೇರಿ ಹೊಸೂರ ನೀರಲಗಾ ಮುಂಡವಾಡದಲ್ಲಿ ಅಂಗನವಾಡಿ ಕೇಂದ್ರಗಳು ಶಿಥಿಲಗೊಂಡಿವೆ. ಅಂಗನವಾಡಿಗಳಿಗೆ ವಿತರಣೆ ಮಾಡಲಾಗುತ್ತಿದ್ದ ಹಾಲಿನ ಪುಡಿ ಸಕ್ಕರೆ ಸರಿಯಾಗಿ ವಿತರಣೆಯಾಗುತ್ತಿಲ್ಲ. ಕಳೆದ ಕೆಲ ದಿನಗಳಿಂದ ಮೊಟ್ಟೆ ವಿತರಣೆಯಲ್ಲಿಯೂ ವ್ಯತ್ಯಾಸಗಳಾಗುತ್ತಿದೆ. ‘ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಗೊಳಿಸುವ ಸಲುವಾಗಿ ಅಂಗನವಾಡಿ ಕಾರ್ಯಕರ್ತೆಯರನ್ನು ಮನೆ ಮನೆ ಸಮೀಕ್ಷೆ ಇನ್ನಿತರ ಕೆಲಸಕ್ಕೆ ನೇಮಿಸಲಾಗುತ್ತಿದೆ. ಇದರಿಂದ ಅಂಗನವಾಡಿಯಲ್ಲಿ ಮಕ್ಕಳ ಕಡೆಗೆ ಲಕ್ಷ್ಯಕೊಡಲು ತೊಂದರೆಯಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಂಗನವಾಡಿ ಕಾರ್ಯಕರ್ತೆಯರು ದೂರಿದರು.

ಕಾರವಾರದ ಬೈತಕೋಲದ ಅಂಗನವಾಡಿ ಕೇಂದ್ರದಲ್ಲಿ ನೆಲ ಒಸರುವ ಪರಿಣಾಮ ಮಕ್ಕಳಿಗೆ ಬೆಚ್ಚಗೆ ಕೂರಿಸಲು ಬೆಂಚಿನ ಮೇಲೆ ಚಾಪೆ ಹಾಸಿರುವುದು
ಕಾರವಾರದ ಬೈತಕೋಲದ ಅಂಗನವಾಡಿ ಕೇಂದ್ರದಲ್ಲಿ ನೆಲ ಒಸರುವ ಪರಿಣಾಮ ಮಕ್ಕಳಿಗೆ ಬೆಚ್ಚಗೆ ಕೂರಿಸಲು ಬೆಂಚಿನ ಮೇಲೆ ಚಾಪೆ ಹಾಸಿರುವುದು
ಮುಂಡಗೋಡ ತಾಲ್ಲೂಕಿನ ಕುಂದರಗಿಯ ಅಂಗನವಾಡಿ ಕೇಂದ್ರದ ಸನಿಹವೇ ಕೆರೆಯ ನೀರು ಬಂದಿರುವುದು
ಮುಂಡಗೋಡ ತಾಲ್ಲೂಕಿನ ಕುಂದರಗಿಯ ಅಂಗನವಾಡಿ ಕೇಂದ್ರದ ಸನಿಹವೇ ಕೆರೆಯ ನೀರು ಬಂದಿರುವುದು
ನಿರ್ಮಿತಿ ಕೇಂದ್ರದ ವತಿಯಿಂದ ಜೊಯಿಡಾ ತಾಲ್ಲೂಕಿನ ರಾಮನಗರ ಹನುಮಾನ ಗಲ್ಲಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಸೋರುತ್ತಿರುವುದು
ನಿರ್ಮಿತಿ ಕೇಂದ್ರದ ವತಿಯಿಂದ ಜೊಯಿಡಾ ತಾಲ್ಲೂಕಿನ ರಾಮನಗರ ಹನುಮಾನ ಗಲ್ಲಿಯಲ್ಲಿ ನಿರ್ಮಿಸಿರುವ ಅಂಗನವಾಡಿ ಕೇಂದ್ರ ಸೋರುತ್ತಿರುವುದು
ಅಂಕೋಲಾ ತಾಲ್ಲೂಕಿನ ಶಿರಕುಳಿ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲ ಸ್ಥಿತಿಯಲ್ಲಿರುವುದು
ಅಂಕೋಲಾ ತಾಲ್ಲೂಕಿನ ಶಿರಕುಳಿ ಗ್ರಾಮದಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲ ಸ್ಥಿತಿಯಲ್ಲಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT