ಶಿರಸಿ: ಗಗನದೆತ್ತರದ ಅಡಿಕೆ ಮರ ಹತ್ತಿ ತೂಕದ ಕೊನೆ ಕೆಳಗಿಳಿಸುವ ಚತುರ ಕಾರ್ಮಿಕರ ಕೊರತೆ, ಸಮಯ ಉಳಿತಾಯ, ಮರ ಏರುವಾಗಿನ ಅಪಾಯದ ಭೀತಿ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದೀಚೆಗೆ ಶೇ 50ರಷ್ಟು ಅಡಿಕೆ ಬೆಳೆಗಾರರು ದೋಟಿಯ ಮೂಲಕ ಅಡಿಕೆ ಕೊಯ್ಲಿಗೆ ಮಾರ್ಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 32 ಸಾವಿರ ಹೆಕ್ಟೇರ್ಗೂ ಹೆಚ್ಚು ಅಡಿಕೆ ಕ್ಷೇತ್ರವಿದೆ. ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ತೋಟ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮರಗೆಲಸ ಮಾಡುವವರ ಕೊರತೆ, ಈ ಹಿಂದೆ ಕೊನೆ ಕೊಯ್ಲು ಮಾಡುತ್ತಿದ್ದ ಕಾರ್ಮಿಕರಿಗೆ ವಯಸ್ಸಾಗಿರುವುದು, ಮರ ಏರುವ ಅಪಾಯದ ನಡುವೆ ಕೊನೆಗೌಡ (ಅಡಿಕೆ ಕೊನೆ ಕೊಯ್ಲು ಮಾಡುವ ಕಾರ್ಮಿಕ) ಲಭ್ಯತೆ ಕ್ಷೀಣಿಸಿದೆ.

ಕೆಲವೆಡೆ ಮರ ಏರಿದ ಕಾರ್ಮಿಕ ಕೆಳಗೆ ಬಿದ್ದು ಜೀವ ಬಿಟ್ಟ ಘಟನೆಗಳು ನಡೆದಿವೆ. ಇವೆಲ್ಲವುಗಳ ಕಾರಣಕ್ಕೆ ಅಪಾಯಕ್ಕೆ ಆಸ್ಪದವಿಲ್ಲದ, ನೆಲದ ಮೇಲೆಯೇ ನಿಂತು ಅಡಿಕೆ ಕೊನೆ ಕೊಯ್ಲು ಮಾಡುವ ಕಾರ್ಬನ್ ಫೈಬರ್ ದೋಟಿ ಬಳಸಿಕೊಂಡು ಸರಾಗವಾಗಿ ಕೊನೆ ಕೊಯ್ಲು ನಡೆಸಲು ಆದ್ಯತೆ ನೀಡುತ್ತಿದ್ದಾರೆ.

‘60ರಿಂದ 80 ಅಡಿ ಎತ್ತರದ ಕಾರ್ಬನ್ ಫೈಬರ್ ದೋಟಿ 5ರಿಂದ 6 ಕೆ.ಜಿ ತೂಗುತ್ತದೆ. ಈ ದೋಟಿಗೆ ಕತ್ತಿಯನ್ನು ಕಟ್ಟಿ ಅದರ ಸಹಾಯದಿಂದ ಒಬ್ಬ ಕಾರ್ಮಿಕ ಅಡಿಕೆ ಮರಗಳಲ್ಲಿನ ಕೊನೆಗಳನ್ನು ಕಿತ್ತರೆ, ಇನ್ನೊಬ್ಬ ದೊಡ್ಡ ಜಾಳಿಗೆಯಲ್ಲಿ ಆ ಕೊನೆ ಹಿಡಿದುಕೊಳ್ಳುತ್ತಾರೆ. ನಾಲ್ಕೈದು ಕೊನೆಗಳು ಜಾಳಿಗೆ ಸೇರುತ್ತಿದ್ದಂತೆ ಅವುಗಳನ್ನು ನೆಲಕ್ಕೆ ಹಾಕುತ್ತ ಮುಂದೆ ಸಾಗುತ್ತಾರೆ. ದಿನಕ್ಕೆ ಕನಿಷ್ಠ 500ರಿಂದ 600 ಕೊನೆಗಳನ್ನು ಈ ದೋಟಿ ಕಾರ್ಮಿಕರು ಕೊಯ್ಲು ಮಾಡುವುದರಿಂದ ಕೊಯ್ಲು ಕಾರ್ಯವೂ ವೇಗವಾಗಿ ನಡೆಯುತ್ತದೆ’ ಎನ್ನುತ್ತಾರೆ ಬಹುತೇಕ ಅಡಿಕೆ ಬೆಳೆಗಾರರರು.

'ಕೊಯ್ಲು ಮಾಡುವ ಪ್ರತಿ ಕೊನೆಗೆ ₹5ರಿಂದ ₹7 ದೋಟಿ ಕಾರ್ಮಿಕನಿಗೆ ಕೊಡಬೇಕು. ಅದರಲ್ಲಿ ಕೊನೆ ಹಿಡಿಯುವ ಕಾರ್ಮಿಕನ ಸಂಬಳವೂ ಸೇರಿಸುತ್ತದೆ. ಕೃಷಿಕರಿಗೆ ಅಡಿಕೆ ಹೆಕ್ಕಲು ಪ್ರತ್ಯೇಕ ಕಾರ್ಮಿಕರ ಅಗತ್ಯತೆ ಬೀಳುವುದಿಲ್ಲ. ಸಂಬಳವು ಅಡಿಕೆ ಕೊನೆಯ ಲೆಕ್ಕವಾದ್ದರಿಂದ ಕಾರ್ಮಿಕರೂ ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ. ಚಿಕ್ಕಪುಟ್ಟ ಹಿಡುವಳಿದಾರರದ್ದು ಕೊಯ್ಲು ಒಂದೆರಡು ದಿನಗಳಲ್ಲಿಯೇ ಪೂರ್ಣವಾಗುತ್ತದೆ' ಎನ್ನುತ್ತಾರೆ ಬೆಳೆಗಾರ ಮಂಜುನಾಥ ಭಟ್.

‘ಈ ಹಿಂದೆ ಕೊನೆಗೌಡನಾಗಿ ಮರ ಏರಿ ಕೊಯ್ಲು ಮಾಡುತ್ತಿದ್ದೆ. ಈಗ ಮರ ಏರಲು ಕಷ್ಟವಾಗುವ ಕಾರಣಕ್ಕೆ ದೋಟಿಯ ಮೂಲಕ ಕೊಯ್ಲು ಆರಂಭಿಸಿದ್ದೇನೆ. ನನ್ನಂತೆ ಹಲವು ಕೊನೆಗೌಡರು ಸಾಕಷ್ಟು ಸಂಖ್ಯೆಯಲ್ಲಿ ದೋಟಿ ಕೆಲಸ ಆರಂಭಿಸಿದ್ದಾರೆ’ ಎನ್ನುತ್ತಾರೆ ಕೊಪ್ಪದ ಕಾರ್ಮಿಕ ಕೇಶವ ಗೌಡ.

ದೋಟಿಯಿಂದ ಕೊನೆ ಕೊಯ್ಲು ಮಾಡುವುದರಿಂದ ಕಾರ್ಮಿಕರ ಜೀವಕ್ಕೆ ಅಪಾಯವಾಗದು. ಇದು ಬೆಳೆಗಾರರ ಲಕ್ಷ್ಯ ದೋಟಿಯತ್ತ ಹರಿಯುವಂತೆ ಮಾಡಿದೆ
ನಾಗರಾಜ ನಾಯ್ಕ ಅಡಿಕೆ ಬೆಳೆಗಾರ

ಕೊನೆಗೌಡರ ಬದಲು ದೋಟಿ

‘ಕೊನೆಗೌಡರ ಕೆಲಸ ಎಷ್ಟು ಲಾಭದಾಯಕವೋ ಅಷ್ಟೇ ಅಪಾಯಕಾರಿ ಕೂಡ. ಮರ ಹತ್ತುವ ಅವರಿಗೆ ಇಳಿಯುತ್ತೇನೆ ಎಂಬ ನಂಬಿಕೆ ಇರುವುದಿಲ್ಲ. ಏಕೆಂದರೆ 60ರಿಂದ 80 ಅಡಿ ಎತ್ತರದ ಮರ ಹತ್ತುವುದು ಸುಲಭದ ಕೆಲಸವಲ್ಲ. ಯಾವುದೇ ಯಂತ್ರದ ಸಹಾಯವಿಲ್ಲದೆ ಸ್ವತಃ ಮಾಡಿಕೊಂಡ ಮರದ ಸಲಕರಣೆ ಬಳಸಿ ಮರ ಏರುವ ಅವರ ಜೀವಕ್ಕೆ ಯಾವುದೇ ಭರವಸೆ ಇರುವುದಿಲ್ಲ. ಗಾಳಿಗೆ ಬಗ್ಗುವ ಮರಗಳು ಮಳೆಗೆ ನೆಂದು ಕುಸಿಯುವ ಖಾಜಿಗೆಗಳು ಕೊನೆಯ ಭಾರಕ್ಕೆ ಮುರಿದು ಬೀಳುವ ಮರದ ತಲೆಗಳು ಕೊನೆಗೌಡರ ಜೀವಕ್ಕೆ ಆಪತ್ತು ತರುತ್ತವೆ. ಇಂತಹ ಕಷ್ಟದ ಸ್ಥಿತಿಗಳು ಈ ಕೆಲಸಕ್ಕೆ ಜನರನ್ನು ಬಾರದಂತೆ ಮಾಡಿದೆ. ಇದೇ ಕಾರಣಕ್ಕೆ ಕೊನೆಗೌಡರ ಜಾಗವನ್ನು ದೋಟಿ ಬಳಸುವ ಕಾರ್ಮಿಕರು ಆಕ್ರಮಿಸುತ್ತಿದ್ದಾರೆ’ ಎನ್ನುತ್ತಾರೆ ಶಿರಸಿಯ ಪ್ರಗತಿಪರ ಕೃಷಿಕ ನಾರಾಯಣ ಹೆಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.