ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವಿಶತಕ ತಲುಪಿದ ಬೀನ್ಸ್ ದರ

ಬರ ಪರಿಸ್ಥಿತಿಯ ಕಾರಣಕ್ಕೆ ಗಗನಮುಖಿಯಾದ ತರಕಾರಿ, ಹಣ್ಣಿನ ಬೆಲೆ
Published 11 ಮೇ 2024, 4:49 IST
Last Updated 11 ಮೇ 2024, 4:49 IST
ಅಕ್ಷರ ಗಾತ್ರ

ಕಾರವಾರ: ಅತಿಯಾದ ಬಿಸಿಲು, ಹೆಚ್ಚಿದ ಆರ್ದ್ರತೆಯಿಂದ ಕಂಗೆಟ್ಟಿರುವ ಕರಾವಳಿ ಭಾಗದ ಜನತೆಗೆ ತರಕಾರಿ, ಹಣ್ಣಿನ ದರದ ಬಿಸಿಯೂ ತಟ್ಟಿದೆ. ಶತಕದ ಆಸುಪಾಸಿನಲ್ಲಿದ್ದ ಬೀನ್ಸ್ ದರವು ಏಕಾಏಕಿ ದ್ವಿಶತಕ ದಾಟಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.

ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಮಾರುಕಟ್ಟೆಗೆ ಬೆಳಗಾವಿ, ಹುಬ್ಬಳ್ಳಿ ಭಾಗದಿಂದ ತರಕಾರಿ, ಹಣ್ಣು ಪೂರೈಕೆ ಆಗುತ್ತಿದೆ. ಬಿಸಿಲ ಝಳ ಹೆಚ್ಚಿದ ಬಳಿಕ ಬೇಡಿಕೆಯಲ್ಲಿರುವ ತರಕಾರಿ, ಹಣ್ಣುಗಳ ದರ ವಿಪರೀತ ಏರಿಕೆ ಕಂಡಿದೆ. ಕಳೆದ ಎರಡು ವಾರಗಳಿಂದ ಈಚೆಗೆ ದರದಲ್ಲಿ ಮತ್ತಷ್ಟು ವ್ಯತ್ಯಾಸ ಕಂಡಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಬೇಸಿಗೆ ಆರಂಭಕ್ಕೂ ಮೊದಲು ಪ್ರತಿ ಕೆ.ಜಿಗೆ ಸರಾಸರಿ ₹80–100 ದರದ ಆಸುಪಾಸಿನಲ್ಲಿ ಮಾರಾಟ ಕಾಣುತ್ತಿದ್ದ ಬೀನ್ಸ್ ಈಗ ಕೆ.ಜಿವೊಂದಕ್ಕೆ ₹200ಕ್ಕೆ ಮಾರಾಟವಾಗುತ್ತಿದೆ. ಕೆ.ಜಿ ಲೆಕ್ಕದಲ್ಲಿ ಖರೀದಿಸುತ್ತಿದ್ದ ಗ್ರಾಹಕರು ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುವ ಸ್ಥಿತಿಗೆ ಬಂದಿದೆ.

‘ಬಹುತೇಕ ತರಕಾರಿಗಳು ಬೆಳಗಾವಿ, ದಕ್ಷಿಣ ಮಹಾರಾಷ್ಟ್ರದ ಜಿಲ್ಲೆಗಳಿಂದ ಪೂರೈಕೆ ಆಗುತ್ತವೆ. ಬೀನ್ಸ್ ಸೇರಿದಂತೆ ಬಹುತೇಕ ತರಕಾರಿಗಳನ್ನು ಬೆಳೆಯುವ ಪ್ರದೇಶದಲ್ಲಿ ನೀರಿನ ಕೊರತೆ ಉಂಟಾಗಿದ್ದರಿಂದ ಇಳುವರಿಯೂ ಕುಸಿತವಾಗಿದೆ. ಹೀಗಾಗಿ, ಬೇಡಿಕೆಯಷ್ಟು ತರಕಾರಿ ಪೂರೈಕೆ ಆಗುತ್ತಿಲ್ಲ. ಬೀನ್ಸ್‌ನಂತಹ ಹೆಚ್ಚು ನೀರು ಬೇಕಿರುವ ತರಕಾರಿಗಳ ಬೆಳೆ ಅರ್ಧಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ಇದೇ ದರ ಏರಿಕೆಗೆ ಕಾರಣವಾಗಿರಬಹುದು’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸಂಗಮೇಶ ಕಲ್ಯಾಣಿ.

ಕೇವಲ ತರಕಾರಿ ಮಾತ್ರವಲ್ಲದೆ ಹಣ್ಣಿನ ದರದಲ್ಲೂ ಭಾರಿ ವ್ಯತ್ಯಾಸ ಉಂಟಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಬಹುಬೇಡಿಕೆಯಲ್ಲಿರುತ್ತಿದ್ದ ಕರಿ ಇಷಾಡ ಮಾವಿನ ಹಣ್ಣು ಈ ಬಾರಿ ಮಾರುಕಟ್ಟೆಗೆ ಅಷ್ಟಾಗಿ ಬಂದಿಲ್ಲ. ಬೆರಳೆಣಿಕೆಯಷ್ಟು ವ್ಯಾಪಾರಿಗಳು ಮಾತ್ರ ಮಾರಾಟಕ್ಕೆ ತರುತ್ತಿದ್ದಾರಾದರೂ ಕೆಲವೇ ಗಂಟೆಯಲ್ಲಿ ಖರ್ಚಾಗುತ್ತಿದೆ. ಪ್ರತಿ ಡಜನ್ ಹಣ್ಣು ₹1 ಸಾವಿರ ಬೆಲೆಗೆ ಮಾರಾಟ ಕಾಣುತ್ತಿದೆ.

ತಿಂಗಳ ಹಿಂದೆ ಕೆ.ಜಿ.ಗೆ ಸರಾಸರಿ ₹120–140 ದರದಲ್ಲಿದ್ದ ದಾಳಿಂಬೆ ದರ ಈಗ ₹160ಕ್ಕೆ ತಲುಪಿದೆ. ₹160 ಇದ್ದ ಸೇಬು ಹಣ್ಣಿನ ದರ ₹220 ರಿಂದ 280ರ ವರೆಗೂ ದಾಟಿದೆ. ಕಿತ್ತೆಳೆ ಹಣ್ಣಿನ ದರ ಪ್ರತಿ ಕೆ.ಜಿಗೆ ₹60, ಮೋಸಂಬಿ ದರ ₹20 ರಷ್ಟು ಏರಿಕೆಯಾಗಿದೆ. ಆಪೂಸ್ ತಳಿಯ ಮಾವು ಕೆ.ಜಿಗೆ ₹120 ರಿಂದ 150 ದರಕ್ಕೆ ಮಾರಾಟವಾಗುತ್ತಿದೆ.

‘ಪ್ರತಿ ಬೇಸಿಗೆಯಲ್ಲೂ ಹಣ್ಣುಗಳ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಆಗುತ್ತಿತ್ತು. ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ ದರ ಏರಿಕೆ ಕಂಡಿದೆ. ದರ ಹೆಚ್ಚಳವಾಗಿರುವುದರಿಂದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಹಣ್ಣಿನ ವ್ಯಾಪಾರಿ ಮಹ್ಮದ್ ಜಾಫರ್ ಪ್ರತಿಕ್ರಿಯಿಸಿದರು.

ಕಾರವಾರ ನಗರದ ರಸ್ತೆ ಬದಿಯಲ್ಲಿ ಮಾವಿನ ಹಣ್ಣು ಮಾರಾಟಕ್ಕಿಟ್ಟು ಕುಳಿತಿರುವ ವ್ಯಾಪಾರಿಗಳು.
ಕಾರವಾರ ನಗರದ ರಸ್ತೆ ಬದಿಯಲ್ಲಿ ಮಾವಿನ ಹಣ್ಣು ಮಾರಾಟಕ್ಕಿಟ್ಟು ಕುಳಿತಿರುವ ವ್ಯಾಪಾರಿಗಳು.
ಮಾವಿನ ಹಣ್ಣಿನ ರಾಶಿ
ಮಾವಿನ ಹಣ್ಣಿನ ರಾಶಿ

ಕೋಳಿ ಮಾಂಸದ ದರದಲ್ಲಿ ಇಳಿಕೆ ಕಳೆದ ಒಂದು ತಿಂಗಳ ಹಿಂದೆ ₹300ರ ವರೆಗೆ ತಲುಪಿದ್ದ ಪ್ರತಿ ಕೆ.ಜಿ ಕೋಳಿ ಮಾಂಸದ ದರ ಈಗ ಸ್ವಲ್ಪ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ₹250 ರಿಂದ 260ಕ್ಕೆ ಕೋಳಿಮಾಂಸ ದೊರೆಯುತ್ತಿದೆ. ಆದರೆ ಮೊಟ್ಟೆಯ ಬೆಲೆಯಲ್ಲಿ ಏರಿಕೆಯಾಗಿದ್ದು ಪ್ರತಿ ಹತ್ತು ಮೊಟ್ಟೆಗೆ ₹65 ದರ ನಿಗದಿಯಾಗಿದೆ. ‘ಬರದ ಹಿನ್ನೆಲೆಯಲ್ಲಿ ಕೋಳಿ ಫಾರಂಗಳಲ್ಲಿ ಸಾಕಣಿಕೆ ಕುಂಠಿತಗೊಂಡಿತ್ತು. ಕೆಲ ದಿನಗಳಿಂದ ಬೇಡಿಕೆಯಷ್ಟು ಕೋಳಿ ಪೂರೈಕೆಯಾಗುತ್ತಿದೆ. ಹೀಗಾಗಿ ದರದಲ್ಲಿ ಇಳಿಕೆಯಾಗಿದೆ’ ಎನ್ನುತ್ತಾರೆ ಕೋಳಿಮಾಂಸದ ಉದ್ಯಮಿ ರಾಜೇಶ ಬಾಡಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT