ಭಟ್ಕಳ: ವಿಶಿಷ್ಟ ಸುವಾಸನೆಯಿಂದ ದೇಶ, ವಿದೇಶಗಳಲ್ಲಿ ಪ್ರಸಿದ್ಧವಾಗಿರುವ ಭಟ್ಕಳ ಮಲ್ಲಿಗೆ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಿಯ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಅವಿನಾಭಾವ ನಂಟಿದೆ. ದಸರಾದ ಒಂಬತ್ತೂ ದಿನ ದೇವಿಗೆ ಈ ಮಲ್ಲಿಗೆ ಮುಡಿಸದೆ ರಾತ್ರಿ ಅಲಂಕಾರ ಪೂಜೆ ನಡೆಯವುದಿಲ್ಲ.
ದೇವಿಯ ವಿಗ್ರಹವನ್ನು ಭಟ್ಕಳದ ಮಲ್ಲಿಗೆಯಿಂದ ಅಲಂಕರಿಸುವ ಪದ್ಧತಿಯು ತಲೆತಲಾಂತರಗಳಿಂದ ನಡೆದು ಬಂದಿರುವ ಪದ್ಧತಿಯಾಗಿದೆ. ನವರಾತ್ರಿಯ ಪ್ರತಿದಿನ ಭಟ್ಕಳಕ್ಕೆ ಬರುವ ಒಂದು ಬಡಾವಣೆಯ ಜನ, ಪಟ್ಟಣದ ಹೂವಿನ ಮಾರುಕಟ್ಟೆಯಲ್ಲಿ ಸಂಚರಿಸುತ್ತಾರೆ. ಹೂವು ವ್ಯಾಪಾರಿಗಳು ನೀಡುವ ಹೂವು ಮತ್ತು ಕಾಣಿಕೆಯನ್ನು ಸ್ವೀಕರಿಸಿ ಅದನ್ನು ದೇಗುಲಕ್ಕೆ ಒಪ್ಪಿಸಿ ಬರುತ್ತಾರೆ. ಈ ಹಿಂದೆ ರಸ್ತೆಗಳಿಲ್ಲದ ಕಾಲದಲ್ಲಿ, ಹೂ ಮಾರಾಟ ಮಾಡುತ್ತಿದ್ದ ಗೋಪಾಲ ಎಂಬುವವರ ಮನೆಯಲ್ಲಿ ರಾತ್ರಿ ಉಳಿದುಕೊಂಡು, ಮುಂಜಾನೆ ಹೂ ತೆಗೆದುಕೊಂಡು ಹೋಗುತ್ತಿದ್ದರಂತೆ.
ಉಪ್ಪುಂದ ಗ್ರಾಮಸ್ಥರಿಂದ ಸೇವೆ: ಕೊಲ್ಲೂರು ದೇವಸ್ಥಾನಕ್ಕೆ ಸಂಬಂಧಪಟ್ಟ ಜಮೀನು ಉಪ್ಪುಂದ ಗ್ರಾಮದಲ್ಲಿದೆ. ಅದನ್ನು ಉಂಬಳಿಯಾಗಿ ಪಡೆದ ಕೆಲವು ಕುಟುಂಬದವರು ಅಮ್ಮನತೋಪು ಎಂಬ ಬಡಾವಣೆ ಹೆಸರಿನಲ್ಲಿ ನೆಲೆಸಿದ್ದಾರೆ. ಈ ಬಡಾವಣೆಯ ಕುಟುಂಬದವರು ಪ್ರತಿ ವರ್ಷ ಈ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ಈ ಮೊದಲು ನವರಾತ್ರಿ, ಯುಗಾದಿ ಹಾಗೂ ಕೊಲ್ಲೂರು ರಥೋತ್ಸವ ಸಂದರ್ಭದಲ್ಲಿ ಉಪ್ಪುಂದದಿಂದ ಮುಂಜಾನೆ ಕಾಲ್ನಡಿಗೆಯಲ್ಲಿ ಭಟ್ಕಳಕ್ಕೆ ಬರುತ್ತಿದ್ದರು. ಬುಟ್ಟಿ ಹಿಡಿದು ಹೂವಿನ ಮಾರುಕಟ್ಟೆಯಲ್ಲಿ ಅಂಗಡಿಕಾರರು ನೀಡುವ ಮಲ್ಲಿಗೆ ಹೂವನ್ನು ಸ್ವೀಕರಿಸಿ ಪುನಃ ಕಾಲ್ನಡಿಗೆಯಲ್ಲಿ ಉಪ್ಪುಂದ ಗ್ರಾಮಕ್ಕೆ ತೆರಳುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ವಾಹನಗಳಲ್ಲಿ ಬಂದು ಹೂವನ್ನು ಪಡೆದು ಹೋಗುತ್ತಿದ್ದಾರೆ. ಉಪ್ಪುಂದಕ್ಕೆ ತೆರಳಿ ಅಲ್ಲಿ ಹೂವುಗಳನ್ನು ಶುಭ್ರವಾಗಿ ತೊಳೆದು ಬಾಳೆ ಎಲೆಯಲ್ಲಿ ಸುತ್ತಿಕಟ್ಟಿ ಅದರ ಜೊತೆ ಅಮ್ಮನತೋಪು ಜಮೀನಿನಲ್ಲಿ ಬೆಳೆದ ಎಳನೀರು ಹಾಗೂ ತೆಂಗಿನ ನಾರಿನಿಂದ ಮಾಡಿದ ಕಸಬರಿಗೆ ಕಟ್ಟನ್ನು ತೆಗೆದುಕೊಂಡು ನೀಡಿ ಬರುತ್ತಾರೆ. ಸಂಜೆ ಸೂರ್ಯಾಸ್ತಕ್ಕೂ ಮೊದಲು ಕೊಲ್ಲೂರು ತಲುಪುತ್ತಾರೆ. ರಾತ್ರಿ ಅಲಂಕಾರ ಪೂಜೆಗೆ ಹೂವನ್ನು ಅರ್ಪಿಸಿ ಪುನಃ ಉಪ್ಪುಂದಕ್ಕೆ ಬರುವುದು ವಾಡಿಕೆಯಾಗಿದೆ.
ಉಪ್ಪುಂದದ ಅಮ್ಮನತೋಪು ಬಡಾವಣೆಯಿಂದ ಪ್ರತಿವರ್ಷ ನವರಾತ್ರಿಯಲ್ಲಿ ಮಲ್ಲಿಗೆ ಹೂ ಸಂಗ್ರಹಿಸಿ ದೇವಿಗೆ ಅರ್ಪಿಸುತ್ತಿದ್ದೇವೆ. ಇದು ಪೂರ್ವಜರಿಂದ ಬಂದ ಪದ್ಧತಿ.
- ಮಾಧವ ಪೂಜಾರಿ, ಉಪ್ಪುಂದ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.