ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಬಾರಿಗೆ ಪಕ್ಷಿ ಸಮೀಕ್ಷೆ

ಕೆನರಾ ಅರಣ್ಯ ವೃತ್ತ: 60 ಸ್ಥಳಗಳಲ್ಲಿ ತಜ್ಞರಿಂದ ವೀಕ್ಷಣೆ
ಗಣಪತಿ ಹೆಗಡೆ
Published 16 ಫೆಬ್ರುವರಿ 2024, 4:50 IST
Last Updated 16 ಫೆಬ್ರುವರಿ 2024, 4:50 IST
ಅಕ್ಷರ ಗಾತ್ರ

ಕಾರವಾರ: ಕಡಲತೀರ, ದ್ವೀಪ, ದಟ್ಟ ಕಾಡು, ಜೌಗು ನೆಲ ಹೀಗೆ ಹಲವು ಬಗೆಯ ಭೌಗೋಳಿಕತೆಯನ್ನೊಳಗೊಂಡ ಜಿಲ್ಲೆಯಲ್ಲಿ ಪಕ್ಷಿಗಳ ಸಂತತಿಯೂ ಹೆಚ್ಚಿದೆ. ಅವುಗಳ ನಿಖರ ಮಾಹಿತಿಗೆ ಇದೇ ಮೊದಲ ಬಾರಿಗೆ ಕೆನರಾ ಅರಣ್ಯ ವೃತ್ತ ವ್ಯಾಪ್ತಿಯಲ್ಲಿ ಪಕ್ಷಿ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.

ಫೆ.15 ರಂದು ಸಮೀಕ್ಷೆಗೆ ಚಾಲನೆ ದೊರೆತಿದ್ದು, ಎರಡು ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಪಕ್ಷಿಗಳು ಹೆಚ್ಚು ಬೀಡು ಬಿಡಬಹುದಾದ ಪ್ರಮುಖ 60 ಸ್ಥಳಗಳನ್ನು ಗುರುತಿಸಲಾಗಿದೆ. 30 ಮೂಲ ಶಿಬಿರ (ಬೇಸ್ ಕ್ಯಾಂಪ್) ರಚಿಸಲಾಗಿದೆ. ರಾಜ್ಯ, ಹೊರರಾಜ್ಯಗಳ 60ಕ್ಕೂ ಹೆಚ್ಚು ಪಕ್ಷಿ ತಜ್ಞರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಅರಣ್ಯ ಇಲಾಖೆಯ ಮಾಹಿತಿ.

‘ಪಶ್ಚಿಮ ಘಟ್ಟ ಪಸರಿಸಿಕೊಂಡಿರುವ ಜಿಲ್ಲೆಯಲ್ಲಿ ಜೀವ ಸಂಕುಲಗಳಿವೆ. ಅವುಗಳಲ್ಲಿ ಅಪರೂಪದ ಪಕ್ಷಿಗಳೂ ಸೇರಿಕೊಂಡಿವೆ. ಪ್ರತಿ ವರ್ಷ ಕೆಲವು ಕಡೆಗಳಲ್ಲಿ ಪಕ್ಷಿ ವೀಕ್ಷಣೆ ಮೂಲಕ ಹೊಸ ಪ್ರಭೇದಗಳ ಪಕ್ಷಿ ಗುರುತಿಸುವ ಕೆಲಸ ನಡೆಯುತ್ತದೆ. ಆದರೆ, ಈ ಬಾರಿ ಅರಣ್ಯ ಇಲಾಖೆಯಿಂದಲೇ ಪಕ್ಷಿ ಸಮೀಕ್ಷೆಯನ್ನು ಇಡೀ ಜಿಲ್ಲೆಯಾದ್ಯಂತ ನಡೆಸುತ್ತಿದ್ದೇವೆ’ ಎಂದು ಕೆನರಾ ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ (ಸಿ.ಎಫ್) ಕೆ.ವಿ.ವಸಂತ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಎರಡು ದಿನಗಳ ಕಾಲ ನಿತ್ಯ ಬೆಳಿಗ್ಗೆ, ಸಂಜೆ ವೇಳೆಗೆ ನಿರ್ದಿಷ್ಟ ಸ್ಥಳಗಳಲ್ಲಿ ಪಕ್ಷಿಗಳ ವೀಕ್ಷಣೆ ನಡೆಸುವ ತಜ್ಞರು ಅವುಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ದಾಖಲಿಸುತ್ತಾರೆ. ಈವರೆಗೆ ದಾಖಲಾಗದ ಪಕ್ಷಿಗಳಿದ್ದರೆ ಅವುಗಳನ್ನೂ ಪತ್ತೆ ಹಚ್ಚುವುದು ಸುಲಭವಾಗಲಿದೆ’ ಎಂದರು.

‘ಚಳಿಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಪಕ್ಷಿಗಳು ಬರುವುದರಿಂದ ಅವುಗಳ ನಿಖರ ಮಾಹಿತಿಯೂ ಲಭಿಸಲಿದೆ. ಸಣ್ಣಪುಟ್ಟ ಪಕ್ಷಿಗಳು ಈ ಸಂದರ್ಭದಲ್ಲಿ ಗೋಚರಿಸುತ್ತವೆ. ಹೀಗಾಗಿ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಪಕ್ಷಿ ಪ್ರಭೇದಗಳು ದಾಖಲಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಪಕ್ಷಿ ತಜ್ಞ ಕೆ.ಹರೀಶ್ ತಿಳಿಸಿದರು.

‘ಜಿಲ್ಲೆಯ ವ್ಯಾಪ್ತಿಯಲ್ಲಿ ಅಂದಾಜು 400ಕ್ಕೂ ಹೆಚ್ಚು ವಿಧದ ಪಕ್ಷಿಗಳಿರಬಹುದು ಎಂಬ ಅಂದಾಜಿದೆ. ಈಚೆಗೆ ಅಘನಾಶಿನಿ ಅಳಿವೆಯನ್ನು ರಾಮಸರ್ ಪಟ್ಟಿಗೆ ಸೇರಿದ್ದ ವೇಳೆ ಅಳಿವೆ ಭಾಗದಲ್ಲಿಯೇ 108ಕ್ಕೂ ಹೆಚ್ಚು ನೀರು ಪಕ್ಷಿಗಳಿರುವ ಮಾಹಿತಿ ಲಭ್ಯವಾಗಿದೆ. ಅರಣ್ಯ ಇಲಾಖೆಯೇ ಖುದ್ದು ಸಮೀಕ್ಷೆ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು ಸಮೀಕ್ಷೆ ಮೂಲಕ ನಿಖರ ಮಾಹಿತಿ ದೊರೆಯಬಹುದು’ ಎಂದು ಪಕ್ಷಿ ತಜ್ಞ ಓಂಕಾರ ಪೈ ಸಂತಸ ವ್ಯಕ್ತಪಡಿಸಿದರು.

ಮರಮಟ್ಟು ಸಂಗ್ರಹಾಲಯದಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತಜ್ಞರ ತಂಡ ನಿರತವಾಗಿರುವುದು
ಮರಮಟ್ಟು ಸಂಗ್ರಹಾಲಯದಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತಜ್ಞರ ತಂಡ ನಿರತವಾಗಿರುವುದು

60 ಸ್ಥಳಗಳ ಗುರುತು ಎರಡು ದಿನಗಳ ಕಾಲ ನಡೆಯಲಿದೆ ಸಮೀಕ್ಷೆ ಜಿಲ್ಲೆಯಲ್ಲಿದೆ 400ಕ್ಕೂ ಅಧಿಕ ಪ್ರಭೇದದ ಪಕ್ಷಿಗಳು

ಸಮೀಕ್ಷೆಯಿಂದ ಅಪರೂಪದ ಪಕ್ಷಿ ಸಂಕುಲದ ಅಸ್ತಿತ್ವದ ಮಾಹಿತಿ ದೊರೆಯುವ ವಿಶ್ವಾಸವಿದೆ. ಸಮೀಕ್ಷೆ ವರದಿ ಆಧರಿಸಿ ಜೀವ ವೈವಿಧ್ಯ ಸಂರಕ್ಷಣೆಗೆ ಇನ್ನಷ್ಟು ಪರಿಣಾಮಕಾರಿ ಕೆಲಸ ಮಾಡಲು ಅನುಕೂಲವಾಗಲಿದೆ -ಕೆ.ವಿ.ವಸಂತ ರೆಡ್ಡಿ ಕೆನರಾ ಅರಣ್ಯ ವೃತ್ತದ ಸಿ.ಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT