ಮಂಗಳವಾರ, ಮಾರ್ಚ್ 21, 2023
21 °C

ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸುತ್ತೇವೆ: ಸಚಿವ ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ‘ಭಯೋತ್ಪಾದನಾ ಚಟುವಟಿಕೆಯ ಮನಸ್ಥಿತಿ ಹೊಂದಿರುವವರನ್ನು ಸರ್ಕಾರ ಸಹಿಸಲ್ಲ. ಅವರನ್ನು ಮಟ್ಟ ಹಾಕುತ್ತೇವೆ. ಮುಂದಿನ ವಿಧಾನಸಭೆ ಚುನಾವಣೆಯನ್ನು ಅಭಿವೃದ್ಧಿ ಆಧಾರದಲ್ಲಿ ಎದುರಿಸುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿ‌ನ ಸಂಘಧಾಮದ ಬಳಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಾಲಯ ಕಟ್ಟಡದ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮುಂದಿನ ಚುನಾವಣೆ ರಾಷ್ಟ್ರವಾದ ಮತ್ತು ಅದಕ್ಕೆ ವಿರುದ್ಧವಾದ ಸಿದ್ಧಾಂತ ಹೊಂದಿದವರ ನಡುವಿನ ಸ್ಪರ್ಧೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಬಿಜೆಪಿ ಸರ್ಕಾರ ಅಭಿವೃದ್ಧಿ ಚಟುವಟಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಹೀಗಾಗಿ ಮತ ಕೇಳಲು ಅಭಿವೃದ್ಧಿ ಅಜೆಂಡಾ ಬಳಸುತ್ತೇವೆ’ ಎಂದರು.

‘ಅರಣ್ಯ ಅತಿಕ್ರಮಣದಾರರ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುತ್ತಿದೆ. ಇಸ್ವತ್ತು ಸಮಸ್ಯೆಗೆ ಸಭೆ ನಡೆದಿದೆ. ಮುಂದಿನ ಚುನಾವಣೆಯಲ್ಲಿ ಆರು ಕ್ಷೇತ್ರ ಬಿಜೆಪಿ ಪಾಲಾಗಲಿದೆ’ ಎಂದರು.

‘ಕುಮಟಾದಲ್ಲಿ ಪಕ್ಷದ ಜಿಲ್ಲಾ ಕಚೇರಿ ತೆರೆಯಲು ಆಗ್ರಹಿಸಿದ್ದೆ. ಮುಖಂಡರು ಘಟ್ಟದ ಮೇಲಿನ ತಾಲ್ಲೂಕುಗಳಂತೆ ಕರಾವಳಿ ಭಾಗದ ಬಗ್ಗೆಯೂ ಯೋಚಿಸಬೇಕು. ಪಕ್ಷದ ರಾಷ್ಟ್ರೀಯ ನಾಯಕರನ್ನು ಜಿಲ್ಲೆಗೆ ಕರೆತರುವ ಕೆಲಸ ಆಗಬೇಕು’ ಎಂದು ಕುಮಟಾ ಶಾಸಕ ದಿನಕರ ಶೆಟ್ಟಿ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ‘₹5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆಗಲಿದೆ. ಕಟ್ಟಡ ನಿರ್ಮಾಣಕ್ಕೆ ಕಾರ್ಯಕರ್ತರಿಂದ ನಿಧಿ ಸಂಗ್ರಹಣೆ ಮಾಡಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಬಿಜೆಪಿ ವಿಭಾಗೀಯ ಕಾರ್ಯದರ್ಶಿ ಗಿರೀಶ ಪಾಟೀಲ್, ಬಿಜೆಪಿ ಮುಖಂಡರಾದ ಯಶಪಾಲ್ ಸುವರ್ಣ, ನಯನ ಗಣೇಶ್, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಇತರರು ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು