ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡಗೋಡ: ಕೊಳವೆ ಬಾವಿ ಯಂತ್ರಕ್ಕೆ ಹೆಚ್ಚಿದ ಬೇಡಿಕೆ

Published 18 ಫೆಬ್ರುವರಿ 2024, 3:32 IST
Last Updated 18 ಫೆಬ್ರುವರಿ 2024, 3:32 IST
ಅಕ್ಷರ ಗಾತ್ರ

ಮುಂಡಗೋಡ: ಬಿರು ಬಿಸಿಲಿನ ಝಳಕ್ಕೆ ತತ್ತರಿಸಿರುವ ಅಡಿಕೆ ತೋಟವನ್ನು ಉಳಿಸಿಕೊಳ್ಳಲು ರೈತರು ಕೊಳವೆ ಬಾವಿ ಮೊರೆ ಹೋಗುತ್ತಿದ್ದಾರೆ. ಈಗಿರುವ ಕೊಳವೆ ಬಾವಿಯು ಬಿಟ್ಟು ಬಿಟ್ಟು ನೀರು ಚೆಲ್ಲುತ್ತಿರುವುದರಿಂದ, ಹೊಸ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಇದರಿಂದ ಕೊಳವೆಬಾವಿ ಕೊರೆಸುವ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ.

ಸಾಂಪ್ರದಾಯಿಕ ಮಳೆಯಾಶ್ರಿತ ಭತ್ತ ಬೆಳೆಯುತ್ತಿದ್ದ ತಾಲ್ಲೂಕಿನ ರೈತರು ಕಳೆದ ಒಂದು ದಶಕದಿಂದ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ. ಬಹುತೇಕ ಭತ್ತದ ಗದ್ದೆಗಳು ತೋಟಗಳಾಗಿ ಬದಲಾಗಿವೆ. ಅರೆಮಲೆನಾಡು ತಾಲ್ಲೂಕಿನಲ್ಲಿ ಮಳೆಯು ವಾಡಿಕೆಯ ಪ್ರಮಾಣದಲ್ಲಿ ಬೀಳುತ್ತಿಲ್ಲ. ಇದರಿಂದ, ವರ್ಷದಿಂದ ವರ್ಷಕ್ಕೆ ಕೊಳವೆ ಬಾವಿ ಕೊರೆಸುತ್ತಿರುವ ರೈತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.

‘ಕಳೆದ ನಾಲ್ಕು ವರ್ಷಗಳ ಹಿಂದೆ ಮೂರು ಎಕರೆ ಪ್ರದೇಶದಲ್ಲಿ ಅಡಿಕೆ ತೋಟವನ್ನು ಮಾಡಿರುವೆ. ಕಳೆದ ವರ್ಷ ನೀರಿನ ಸಮಸ್ಯೆ ಆಗಿದ್ದರಿಂದ ತುಸು ಹಾನಿಯಾಗಿತ್ತು. ಆದರೆ, ಈ ವರ್ಷ ಜನವರಿ ಅಂತ್ಯದಲ್ಲಿಯೇ ಕೊಳವೆ ಬಾವಿ ನೀರು ಹೊರ ಹಾಕುವುದನ್ನು ನಿಲ್ಲಿಸಿದೆ. ಬೆಳೆ ಉಳಿಸಿಕೊಳ್ಳಲು ಗದ್ದೆಯ ಸುತ್ತಲೂ, ಮೂರು ಕೊಳವೆ ಬಾವಿ ಕೊರೆಸಿದೆ. ಮನೆಗೆ ಸಾಕಾಗುವಷ್ಟು ಮಾತ್ರ ನೀರು ಸಿಕ್ಕಿದೆ. ಅಷ್ಟು ನೀರಿನಿಂದ ತೋಟದ ಒಂದು ಕಾಲು ಭಾಗಕ್ಕೂ ನೀರು ಹಾಯಿಸಲು ಸಾಧ್ಯವಾಗುವುದಿಲ್ಲ. ಜಲಮೂಲದ ಗುರುತು ನಿಖರವಾಗಿ ಹೇಳುವವರನ್ನು ಕರೆಸಿ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ವರ್ಷದ ಆರಂಭದಲ್ಲಿಯೇ ಬಿಸಿಲಿನ ಹೊಡೆತ ರೈತರನ್ನು ಹೈರಾಣಾಗಿಸಿದೆ’ ಎಂದು ರೈತ ಷಣ್ಮುಖ ಚಿಗಳ್ಳಿ ಹೇಳಿದರು.

‘ಹಿಂದೆ 450 ಅಡಿ ಆಳದ ಕೊಳವೆ ಬಾವಿ ಕೊರೆಸಿದ್ದರಿಂದ ತೋಟಕ್ಕೆ ಸಾಕಾಗುವಷ್ಟು ನೀರು ಬರುತ್ತಿತ್ತು. ಈಗ ಅದೂ, ಒಂದು ತಾಸು ನೀರು ಚೆಲ್ಲಿದರೆ ಮತ್ತೊಂದು ತಾಸು ಬಂದಾಗುತ್ತಿದೆ. ಸುತ್ತಮುತ್ತಲಿನ ಕೆರೆಕಟ್ಟೆಗಳಲ್ಲಿಯೂ ನೀರು ಬರಿದಾಗುತ್ತಿದೆ. ಇದರಿಂದ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿದೆ. ಸಾಲ ಮಾಡಿಯಾದರೂ ಕೊಳವೆ ಬಾವಿ ಕೊರೆಸಲು ರೈತರು ನಿರ್ಧರಿಸಿದ್ದರೂ, ನೀರಿನ ಬದಲು ಮಣ್ಣಿನ ಹುಡಿಯೇ ಹಾರುತ್ತಿದೆ. ಇಂತಹ ಸಮಯದಲ್ಲಿ 2-3 ಇಂಚು ನೀರು ಉಕ್ಕಿದರೂ ಸಾಕು, ರೈತರಿಗೆ ದೊಡ್ಡ ಆಸರೆಯಾಗುತ್ತದೆ’ ಎನ್ನುತ್ತಾರೆ ರೈತ ಮುಖಂಡ ನಿಂಗಪ್ಪ ಕುರುಬರ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಳವೆಬಾವಿ ಕೊರೆಯಿಸುವ ಯಂತ್ರಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಶೇ 70ರಷ್ಟು ರೈತರು ಎರಡು, ಮೂರು ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಜಲಮೂಲದ ಗುರುತನ್ನು ಎಲ್ಲಿಯೇ ತೋರಿಸಿದರೂ ಸಹಿತ ನೀರು ಬರುತ್ತಿಲ್ಲ. ಸಾವಿರ ಅಡಿವರೆಗೆ ಕೊರೆಸಿರುವ ರೈತರಿದ್ದಾರೆ. ಪಟ್ಟಣದಲ್ಲಿಯೂ ಮನೆಗಳಿಗೆ ಕೊಳವೆ ಬಾವಿ ಕೊರೆಸಲೂ ಬೇಡಿಕೆ ಬರುತ್ತಿದೆ’ ಎಂದು ಕೊಳವೆಬಾವಿ ವಾಹನ ಪ್ರತಿನಿಧಿ ಸಂತೋಷ ಆಲದಕಟ್ಟಿ ಹೇಳಿದರು.

ಗಿಡ ಹೋಯಿತು...ನೀರು ಬರಲಿಲ್ಲ

‘ಅಡಿಕೆ ತೋಟದ ಒಂದು ಮೂಲೆಯಲ್ಲಿ ಜಲಮೂಲದ ಗುರುತು ತೋರಿಸಲಾಗಿತ್ತು. ಅಲ್ಲಿಗೆ ಕೊಳವೆಬಾವಿ ವಾಹನ ಹೋಗಲು ದಾರಿ ಇಲ್ಲದಂತಾಗಿತ್ತು. ಅದಕ್ಕಾಗಿ ಹತ್ತು ಅಡಿಕೆ ಗಿಡಗಳನ್ನು ಕಡಿದು ದಾರಿ ಮಾಡಿ ಕೊಳವೆ ಬಾವಿ ಕೊರೆಸಲಾಗಿತ್ತು. 700 ಅಡಿ ಕೊರೆಸಿದರೂ ನೀರು ಬೀಳಲಿಲ್ಲ. ಅತ್ತ ಅಡಿಕೆ ಗಿಡವೂ ಹಾನಿಯಾದವು’ ಎಂದು ರೈತ ಮಂಜುನಾಥ ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT