ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಟಾ: ನೀಗದ ಕಟ್ಟಡ ಸಮಸ್ಯೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು

Published 24 ಮೇ 2024, 5:17 IST
Last Updated 24 ಮೇ 2024, 5:17 IST
ಅಕ್ಷರ ಗಾತ್ರ

ಕುಮಟಾ: ಸ್ಥಾಪನೆಗೊಂಡು 17 ವರ್ಷ ಕಳೆದರೂ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸಮಸ್ಯೆ ಈವರೆಗೂ ನೀಗಿಲ್ಲ.

2007ರಲ್ಲಿ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆಯ ಖಾಲಿ ಇದ್ದ ಹಳೆಯ ಕಟ್ಟಡದಲ್ಲಿ ಆರಂಭವಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆರಂಭದಲ್ಲಿ ಸಾಕಷ್ಟು ವಿದ್ಯಾರ್ಥಿ ಸಂಖ್ಯೆ, ತಕ್ಕಮಟ್ಟಿಗೆ ಅಧ್ಯಾಪಕರು ಇದ್ದರೂ ಕಟ್ಟಡ ಇರಲಿಲ್ಲ.

ಕಟ್ಟಡಕ್ಕೆ ಸರ್ಕಾರದಿಂದ ₹5 ಕೋಟಿ ಅನುದಾನ ಮಂಜೂರು ಮಾಡಿದ ಬಳಿಕ ಸುಮಾರು 20 ಕೊಠಡಿಗಳು ನಿರ್ಮಾಣಗೊಂಡಿವೆ. ಅದಕ್ಕೆ ಹೊಂದಿಕೊಂಡು ₹1 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡವೂ ನಿರ್ಮಾಣಗೊಂಡಿದೆ. ಆದರೆ, ಪೂರ್ಣ ಪ್ರಮಾಣದಲ್ಲಿ ತರಗತಿಗಳ ಸ್ಥಳಾಂತರಕ್ಕೆ ಅವಕಾಶ ಸಿಕ್ಕಿಲ್ಲ.

ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಎಂ.ಕಾಂ, ಎಂ.ಎ. ಸಮಾಜ ಶಾಸ್ತ್ರ, ಕಲಾ ವಿಭಾಗದ ತರಗತಿಗಳು ಇನ್ನೂ ಹಳೆಯ ಕಟ್ಟಡದಲ್ಲಿಯೇ ನಡೆಯುತ್ತಿವೆ. ಹೊಸ ಕಟ್ಟಡದಲ್ಲಿ ಸುಮಾರು 950, ಹಳೆಯ ಕಟ್ಟಡದಲ್ಲಿ 250 ರಷ್ಟು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಹೊಸ ಕಟ್ಟಡದಲ್ಲಿ ವಾಚನಾಲಯ, ಸಭಾಂಗಣ ಸೇರಿ ಒಟ್ಟೂ ಹದಿನೈದು ಕೊಠಡಿಗಳು ನಿರ್ಮಾಣಗೊಂಡರೆ, ಎಲ್ಲ 1,250 ವಿದ್ಯಾರ್ಥಿಗಳು ಕಾಲೇಜಿನ ಹೊಸ ಕಟ್ಟಡದಲ್ಲೇ ವ್ಯಾಸಂಗ ಮಾಡಲು ಅನುಕೂಲವಾಗಬಹುದು ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಕಳೆದ ಮಳೆಗಾಲದಲ್ಲಿ ಹಳೆಯ ಕಟ್ಟಡದ ತರಗತಿ ಕೊಠಡಿಗಳು ಸೋರತೊಡಗಿದಾಗ ಛಾವಣಿಗಳು ಕುಸಿದವು. ಕಾಲೇಜು ಅಭಿವೃದ್ಧಿ ನಿಧಿಯಲ್ಲಿ ಹೊಸ ಚಾವಣಿ ನಿರ್ಮಿಸಲಾಗಿದೆ.

‘ಕಾಲೇಜಿನ ಹೊಸ ಕಟ್ಟಡದ ಬಳಿ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗೆ ಅನುಕೂಲವಾಗುವಂತೆ ಮೈದಾನ ವ್ಯವಸ್ಥೆ ಇಲ್ಲವಾಗಿದೆ. ಹಳೆಯ ಕಟ್ಟಡದ ನಡುವೆ ಇರುವ ಮೈದಾನವನ್ನೇ ಬಳಕೆ ಮಾಡಿಕೊಳ್ಳುತ್ತೇವೆ. ಕಾಲೇಜು ಕ್ರೀಡಾಕೂಟವನ್ನು ಒಂದು ಕಿ.ಮೀ ದೂರದ ಡಾ.ಎ.ವಿ.ಬಾಳಿಗಾ ಕಲಾ-ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಸುತ್ತೇವೆ’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯೆ ಡಾ.ವಿಜಯಾ ನಾಯ್ಕ.

‘ಕಾಲೇಜಿನಲ್ಲಿ ಸದ್ಯ 18 ಕಾಯಂ ಉಪನ್ಯಾಸಕರು, 35 ಅತಿಥಿ ಉಪನ್ಯಾಸಕರು ಇದ್ದಾರೆ. ಕುಡಿಯುವ ನೀರು, ಇತರೆ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.

‘ಆರು ತಿಂಗಳ ಹಿಂದೆ ಕಾಲೇಜು ಶಿಕ್ಷಣದಲ್ಲಿ ಸಂಶೋಧನೆಯ ಮಹತ್ವದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು ಕಾಲೇಜಿಗೆ ಗೌರವ, ಹೆಮ್ಮೆ ತಂದಿದೆ’ ಎಂದು ಉಪ ಪ್ರಾಚಾರ್ಯ ಐ.ಕೆ. ನಾಯ್ಕ ಹೇಳುತ್ತಾರೆ.

ಕಾಲೇಜಿನಲ್ಲಿ ಹೆಚ್ಚು ಬೇಡಿಕೆ ಇರುವ ಬಿಸಿಎ ತರಗತಿ ಆರಂಭಿಸಲು ಅರ್ಜಿ ಸಲ್ಲಿಸಲಾಗಿದೆ. ಬಿಸಿಎ ತರಗತಿ ಮಂಜೂರಾದರೆ ಅದನ್ನು ಹಳೆಯ ಕಟ್ಟಡದಲ್ಲಿಯೇ ಆರಂಭಿಸಬೇಕಾಗಿದೆ
–ವಿಜಯಾ ನಾಯ್ಕ, ಪ್ರಾಚಾರ್ಯೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT