ಕುಮಟಾ: ಸಮೀಪದ ಹೆಗಡೆ ಗ್ರಾಮದಲ್ಲಿ ಎರಡು ದಿನಗಳಿಂದ ಹಗಲು ಹೊತ್ತು ಓಡಾಡಿ ಜನರಲ್ಲಿ ಆತಂಕ ಮೂಡಿಸಿದ್ದ ನಾಲ್ಕು ವರ್ಷ ವಯಸ್ಸಿನ ಗಂಡು ಚಿರತೆ ಬುಧವಾರ ರಾತ್ರಿ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ನಂತರ ಅದನ್ನು ದಟ್ಟ ಕಾಡಿನಲ್ಲಿ ಬಿಡಲಾಗಿದೆ.
ಭಾನುವಾರ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಾಗ ಆತಂಕಗೊಂಡಿದ್ದ ಸ್ಥಳೀಯರು ಅರಣ್ಯ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದರು. ಸೋಮವಾರ ಯಾರ ಕಣ್ಣಿಗೂ ಬೀಳದ ಚಿರತೆ ಮಂಗಳವಾರ ಮತ್ತೆ ಕಾಣಿಸಿಕೊಂಡ ಬಗ್ಗೆ ಗ್ರಾಮಸ್ಥರು ತಿಳಿಸಿದಾಗ ಅರಣ್ಯ ಸಿಬ್ಬಂದಿ ಚಿರತೆ ಹುಡಕಲು ಯತ್ನಿಸಿದ್ದರು.
ಮೂರು ದಿನಗಳಿಂದ ಕೆಲವೇ ಕಿ.ಮೀ ಅಂತರದಲ್ಲಿ ಓಡಾಡುತ್ತಿದ್ದ ಚಿರತೆ ಯಾವುದೇ ಪ್ರಾಣಿಯನ್ನು ಬೇಟೆಯಾಡಿದ್ದ ಕುರುಹು ಗ್ರಾಮದಲ್ಲಿ ಸಿಕ್ಕಿರಲಿಲ್ಲ. ಹೆಗಡೆಯ ಶಿವಪುರ ಬಳಿ ಕೋಳಿ ಅಂಗಡಿಯವರು ತ್ಯಾಜ್ಯ ಎಸೆಯುವಲ್ಲಿ ಹೆಚ್ಚು ಬೀದಿ ನಾಯಿಗಳು ಓಡಾಡುತ್ತಿದ್ದವು. ಡಿ.ಎಫ್.ಒ ರವಿಶಂಕರ ಅವರ ಸಲಹೆಯಂತೆ ಅದೇ ಸ್ಥಳ ಗುರುತಿಸಿ ಅಲ್ಲಿ ಬೋನು ಇಡಲಾಗಿತ್ತು. ರಾತ್ರಿ 10 ಗಂಟೆಗೆ ಚಿರತೆ ಬೋನಿಗೆ ಬಿದ್ದಿತು. ಸ್ಥಳದಲ್ಲಿದ್ದ ಕುಮಟಾ ಸಹಾಯಕ ಅರಣ್ಯ ಸಂರಕ್ಷಣಧಿಕಾರಿ ಜಿ. ಲೋಹಿತ್ ಅವರ ಮಾರ್ಗದರ್ಶನದಲ್ಲಿ ಚಿರತೆಯನ್ನು ಯಲ್ಲಾಪುರ ಸಮೀಪದ ಅರಬೈಲ ಘಟ್ಟದಲ್ಲಿ ಬಿಡಲಾಯಿತು ಎಂದು ಕುಮಟಾ ಆರ್.ಎಫ್.ಒ ಎಸ್.ಟಿ. ಪಟಗಾರ ಮಾಹಿತಿ ನೀಡಿದರು.