ಗಣಪತಿ ಹೆಗಡೆ
ಕಾರವಾರ: ‘ಮಕ್ಕಳನ್ನು ಮೊಬೈಲ್, ಟಿವಿ ಗುಂಗಿನಿಂದ ಹೊರತರುವುದೇ ಕಷ್ಟ’ ಎಂದು ಚಿಂತಿಸುವ ಪಾಲಕರೇ ಈಗ ಹೆಚ್ಚು ಕಾಣಸಿಗುತ್ತಾರೆ. ಕಲೆ, ಸಂಸ್ಕೃತಿಯ ಕಡೆಗೆ ಆಕರ್ಷಣೆ ಕಡಿಮೆಯಾಗಿ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೇ ಮುಳುಗಿರುವ ಮಕ್ಕಳೂ ಹೆಚ್ಚೆಚ್ಚು ಸಿಗುತ್ತಾರೆ. ಆದರೆ, ತಾಲ್ಲೂಕಿನ ಕಡವಾಡ ಗ್ರಾಮದ ಮಕ್ಕಳು ಮಾತ್ರ ಇದಕ್ಕೆ ತದ್ವಿರುದ್ಧ.
ಈ ಗ್ರಾಮದ ಹದಿನೈದಕ್ಕೂ ಹೆಚ್ಚು ಮಕ್ಕಳು ತಾವೇ ಸ್ವಂತ ಆಸಕ್ತಿಯಿಂದ ತಂಡ ಕಟ್ಟಿಕೊಂಡಿದ್ದಾರೆ. ಅದೂ ಕೂಡ ಹಿರಿಯರಂತೆ ಭಜನೆ ಹಾಡುವ, ಹಾರ್ಮೋನಿಯಂ, ತಬಲಾದಂತಹ ಸಂಗೀತ ವಾದನಗಳನ್ನು ನುಡಿಸಿ ಜನರನ್ನು ರಂಜಿಸುವ ತಂಡ. ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪ್ರತಿ ವಾರ ಈ ತಂಡದ ಸದಸ್ಯರು ಸೇರಿ ಭಜನೆ ಹಾಡುತ್ತಾರೆ.
ಮಹಾದೇವ ದೇವಸ್ಥಾನ, ಮಾರುತಿ ದೇವಸ್ಥಾನ, ದೇವತಿ ದೇವಸ್ಥಾನಗಳಲ್ಲಿ ಚಿಣ್ಣರ ಭಜನಾ ತಂಡಕ್ಕೆ ವಿಶೇಷ ಸ್ಥಾನಮಾನವಿದೆ. ಸಂಜೆಯ ಒಂದೆರಡು ತಾಸು ದೇಗುಲದ ಆವರಣದಲ್ಲಿ ಸುಶ್ರಾವ್ಯ ಕಂಠದ ಮೂಲಕ ಜನರನ್ನು ರಂಜಿಸುವ ಜತೆಗೆ ಆಧ್ಯಾತ್ಮಿಕ ವಾತಾವರಣಕ್ಕೆ ಮತ್ತಷ್ಟು ಇಂಪು ನೀಡುತ್ತಾರೆ.
ಧನಶ್ರೀ ಕಲ್ಗುಟ್ಕರ್, ಪ್ರಸನ್ನ ಕಲ್ಗುಟ್ಕರ್, ವಿಜಯಶ್ರೀ ಕಲ್ಗುಟ್ಕರ್, ಶುಭಮ್ ಭೋವಿ, ಆದಿ ಭೋವಿ, ಗುರುಪ್ರಸಾದ ಕಡವಾಡಕರ್, ಪುನೀತ್ ಕಡವಾಡಕರ್, ತೇಜಸ್ವಿ ತಂಡದಲ್ಲಿದ್ದಾರೆ. ಈ ಪೈಕಿ ಶುಭಮ್ ತಬಲಾ ವಾದನ, ಆದಿ ಹಾರ್ಮೋನಿಯಂ ನುಡಿಸುವ ಕೆಲಸ ಮಾಡುತ್ತಾರೆ. ಉಳಿದವರು ಭಜನೆ ಗಾಯನದಲ್ಲಿ ತೊಡಗುತ್ತಾರೆ.
‘ಭಜನೆ ಹಾಡುವ ಆಸಕ್ತಿ ಬಾಲ್ಯದಿಂದಲೂ ಇದೆ. ಊರಿನ ಮಕ್ಕಳೇ ಸೇರಿ ತಂಡ ಕಟ್ಟಿಕೊಂಡು ಹಾಡುವುದು ಇನ್ನಷ್ಟು ಖುಷಿ ಕೊಡುತ್ತದೆ’ ಎಂಬುದು ಧನಶ್ರೀ ಅವರ ಅಭಿಪ್ರಾಯ.
‘ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಕೃಷ್ಣಮೂರ್ತಿ ಪ್ರತಿಷ್ಠಾಪನೆ ವೇಳೆ ಮಕ್ಕಳು ಆಸಕ್ತಿಯಿಂದ ಭಜನೆ ಹಾಡಿದ್ದರು. ಈ ವೇಳೆ ಜತೆಯಾದ ಒಂದಷ್ಟು ಮಕ್ಕಳು ತಂಡವನ್ನು ಮುಂದುವರೆಸಿಕೊಂಡು ಹೋಗಲು ಸ್ವಇಚ್ಛೆಯಿಂದ ಮನಸ್ಸು ಮಾಡಿದ್ದಾರೆ. ಈಗ ಪ್ರತಿ ವರ್ಷ ಕನಿಷ್ಠ 80ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಅವರ ತಂಡ ಭಜನೆ ಹಾಡುವ ಕೆಲಸ ಮಾಡುತ್ತದೆ’ ಎನ್ನುತ್ತಾರೆ ಮಕ್ಕಳ ಪಾಲಕ ಗಜಾನನ ಕಲ್ಗುಟ್ಕರ್.
‘ಗ್ರಾಮದಲ್ಲಿ ಕಿಶೋರ ಕಡವಾಡಕರ್, ಜಗದೀಶ ಪೆಡ್ನೇಕರ್, ಚಿಂತನ್ ಪಾವುಸ್ಕರ ಎಂಬ ಸಂಗೀತ ತರಬೇತುದಾರರಿದ್ದಾರೆ. ಅವರಲ್ಲಿ ಸಂಗೀತಾಭ್ಯಾಸ ಮಾಡಿದ ಮಕ್ಕಳಿಗೆ ಭಜನೆ ಗಾಯನ ಹವ್ಯಾಸವಾಗಿದೆ’ ಎಂದು ವಿವರಿಸಿದರು.
ನುರಿತ ಕಲಾವಿದರ ತಂಡ ‘ಕಡವಾಡ ಗ್ರಾಮದಲ್ಲಿ ಭಜನೆ ಹಾಡುವುದಕ್ಕೆ ಮಕ್ಕಳು ಆಸಕ್ತಿಯಿಂದ ಮುಂದೆ ಬರುತ್ತಾರೆ. ವಿಶೇಷ ಉತ್ಸವಗಳಲ್ಲಿ ಶ್ರಾವಣದ ಮಾಸದಲ್ಲಿ ಹಬ್ಬ ಹರಿದಿನಗಳಲ್ಲಿ ಗ್ರಾಮದ ಹತ್ತಾರು ಮಕ್ಕಳು ದೇವಸ್ಥಾನಗಳಲ್ಲಿ ಭಜನೆ ಹಾಡಲು ಮುಂದಾಗುತ್ತಾರೆ. ಗ್ರಾಮದಲ್ಲಿ ಯುವಕರೇ ಕಟ್ಟಿಕೊಂಡ ಹವ್ಯಾಸಿ ಭಜನಾ ತಂಡವೂ ಇದೆ. ಅವರೆಲ್ಲರೂ 18 ರಿಂದ 28ರ ವಯೋಮಿತಿಯೊಳಗಿನವರು. ಗ್ರಾಮದ ಮಕ್ಕಳು ಮೊಬೈಲ್ ಗೀಳಿನ ಬದಲು ಸಂಸ್ಕೃತಿಯ ಅಭಿರುಚಿ ಬೆಳೆಸಿಕೊಂಡಿರುವುದು ನಮಗೂ ಖುಷಿ ಕೊಡುತ್ತದೆ’ ಎನ್ನುತ್ತಾರೆ ಸದಾನಂದ ಭೋವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.