ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಪದವಿ ಕಾಲೇಜು ಕಟ್ಟಡ ಕಾಮಗಾರಿ ಸ್ಥಗಿತ

ಬಾರದ ಅನುದಾನ: ಅರ್ಧ ಕೆಲಸದ ಬಳಿಕ ಯೋಜನೆ ಮಾರ್ಪಾಟಿಗೆ ಸೂಚನೆ
Published 13 ಮಾರ್ಚ್ 2024, 5:04 IST
Last Updated 13 ಮಾರ್ಚ್ 2024, 5:04 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಯೋಜನೆ ಅರ್ಧ ಕೆಲಸ ಮುಗಿದ ಬಳಿಕ ನನೆಗುದಿಗೆ ಬೀಳುವ ಶಂಕೆ ಮೂಡಿದೆ. ಕೆಲವು ದಿನಗಳಿಂದ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿದೆ.

2022–23ನೇ ಸಾಲಿನಲ್ಲಿ ಕಾಲೇಜು ಕಟ್ಟಡ ಕಾಮಗಾರಿಗೆ ₹4 ಕೋಟಿ ಅನುದಾನ ಬಿಡುಗಡೆಯಾಗಿತ್ತು. ವಿಧಾನಸಭೆ ಚುನಾವಣೆ ಘೋಷಣೆಯಾಗುವ ಕೆಲದಿನಗಳ ಮೊದಲು ಕಾಮಗಾರಿ ಆರಂಭಿಸಲಾಗಿತ್ತು. ಮೂರು ಪ್ರಯೋಗಾಲಯ, ಒಂದು ತರಗತಿ ಕೊಠಡಿ ನಿರ್ಮಾಣಕ್ಕೆ ಮೊದಲ ಹಂತದ ಕೆಲಸಗಳು ನಡೆದಿದ್ದವು. ಸ್ಲ್ಯಾಬ್‍ವರೆಗಿನ ಕೆಲಸ ಮುಗಿದ ಬಳಿಕ ಗುತ್ತಿಗೆ ಪಡೆದ ಸಂಸ್ಥೆಯು ಕೆಲಸ ಸ್ಥಗಿತಗೊಳಿಸಿದೆ.

‘ನೆಲಮಹಡಿ ಸೇರಿದಂತೆ ಎರಡು ಮಹಡಿಯ ಕಟ್ಟಡ ನಿರ್ಮಾಣದ ಯೋಜನೆ ಇದಾಗಿದೆ. ಮೊದಲ ಹಂತದ ಕೆಲಸ ಪೂರ್ಣಗೊಳಿಸಿದ ಬಳಿಕವೂ ಬಿಡಿಗಾಸು ಅನುದಾನವೂ ಬಿಡುಗಡೆಯಾಗಿಲ್ಲ. ಕೋಟ್ಯಂತರ ಮೊತ್ತದಲ್ಲಿ ಕೆಲಸ ಮಾಡಲಾಗಿದ್ದರ ಅನುದಾನ ಬಿಡುಗಡೆಯಾಗದೆ ಮುಂದಿನ ಹಂತದ ಕೆಲಸ ನಡೆಸುವುದು ಕಷ್ಟ’ ಎಂಬುದು ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರ ಹೇಳಿಕೆ.

‘ಕಾಲೇಜಿನಲ್ಲಿ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ತರಗತಿ ಕೊಠಡಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಬಿ.ಎಸ್ಸಿ, ಎಂ.ಎಸ್ಸಿ ವಿಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪ್ರಯೋಗಾಲಯಕ್ಕೆ ಸುಸಜ್ಜಿತ ಕಟ್ಟಡದ ಕೊರತೆ ಇತ್ತು. ಹಳೆಯ ಕಟ್ಟಡದಲ್ಲಿ ಪ್ರಯೋಗಾಲಯ ನಡೆಯುತ್ತಿದ್ದರಿಂದ ಹೊಸ ಕಟ್ಟಡ ಸ್ಥಾಪನೆಯಾಗುತ್ತಿತ್ತು. ಪ್ರಸಕ್ತ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುವುದರೊಳಗೆ ಕೆಲಸ ಮುಗಿದು ಹೊಸ ಕಟ್ಟಡ ಬಳಕೆಗೆ ಸಿಗಬಹುದೆಂಬ ನಿರೀಕ್ಷೆಯೂ ಇತ್ತು. ಆದರೆ ಕೆಲಸ ಸ್ಥಗಿತಗೊಂಡಿದ್ದರಿಂದ ಪ್ರಯೋಗಾಲಯಕ್ಕೆ ಕೊಠಡಿ ಕೊರತೆ ಎದುರಾಗಬಹುದು’ ಎಂದು ಕಾಲೇಜಿನ ಸಿಬ್ಬಂದಿಯೊಬ್ಬರು ಸಮಸ್ಯೆ ವಿವರಿಸಿದರು.

‘ಕಟ್ಟಡ ಕಾಮಗಾರಿ ಸ್ಥಗಿತಗೊಂಡು ಹಲವು ದಿನವಾಗಿದೆ. ಕಾಮಗಾರಿ ಸ್ಥಗಿತಗೊಂಡಿದ್ದಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಕಾಮಗಾರಿ ತ್ವರಿತವಾಗಿ ಪೂರ್ಣಗೊಂಡಿದ್ದರೆ ಹೆಚ್ಚುವರಿ ಕೊಠಡಿಗಳು ಲಭಿಸುವ ಜತೆಗೆ ಪ್ರಯೋಗಾಲಯ ನಡೆಸಲು ಅನುಕೂಲ ಆಗುತ್ತಿತ್ತು’ ಎಂದು ಕಾಲೇಜಿನ ಪ್ರಾಚಾರ್ಯೆ ವಿದ್ಯಾ ನಾಯಕ ಪ್ರತಿಕ್ರಿಯಿಸಿದರು.

₹4 ಕೋಟಿ ವೆಚ್ಚದ ಯೋಜನೆ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು ಹಳೆಯ ಕಟ್ಟಡದಲ್ಲಿ ಪ್ರಯೋಗಾಲಯ ನಡೆಸುವ ಅನಿವಾರ್ಯತೆ

ಕಾಮಗಾರಿಯಲ್ಲಿ ಕೆಲ ಮಾರ್ಪಾಡು ಮಾಡಿ ಮರು ಕ್ರಿಯಯೋಜನೆ ಸಿದ್ಧಪಡಿಸಿ ನೀಡಲು ಗುತ್ತಿಗೆ ಸಂಸ್ಥೆಗೆ ಸೂಚಿಸಲಾಗಿದೆ. ಹೊಸ ಕ್ರಿಯಾಯೋಜನೆಗೆ ಅನುಮತಿ ಸಿಕ್ಕ ತಕ್ಷಣ ಕೆಲಸ ಆರಂಭಿಸಲಾಗುತ್ತದೆ
ರಾಮು ಅರ್ಗೇಕರ, ಪಿಡಬ್ಲ್ಯೂಡಿ ಎಇಇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT