ಕಾರವಾರ: ತಾಲ್ಲೂಕಿನ ಸದಾಶಿವಗಡದ ಗುಡ್ಡದ ತಪ್ಪಲಿನ ಬಳಿ, ಕಾಳಿನದಿಯಲ್ಲಿ ಅಳವಡಿಸಿದ್ದ ರಾಜ್ಯದ ಮೊದಲ ತೇಲುವ ಕಾಂಕ್ರೀಟ್ ಜಟ್ಟಿ ಬಳಕೆಗೆ ಸಿಗುತ್ತಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆ ಜಾರಿಗೆ ಮೊದಲು ಕರಾವಳಿ ನಿಯಂತ್ರಣ ವಲಯದ (ಸಿ.ಆರ್.ಝಡ್) ಅನುಮತಿ ಪಡೆಯದ ಕಾರಣಕ್ಕೆ ಜಟ್ಟಿ ಸ್ಥಗಿತಗೊಳಿಸಿ ಇಡಲಾಗಿದೆ.
ಕಳೆದ ವರ್ಷ ನದಿಯಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಗರಮಾಲಾ ಯೋಜನೆಯ ಅಡಿಯಲ್ಲಿ ಬಂದರು ಜಲಸಾರಿಗೆ ಮಂಡಳಿಯಿಂದ ತೇಲುವ ಕಾಂಕ್ರೀಟ್ ಜಟ್ಟಿ ಅಳವಡಿಸಲಾಗಿತ್ತು. ಕೆಲ ದಿನ ಜಟ್ಟಿಯನ್ನು ಜಲಸಾಹಸ ಚಟುವಟಿಕೆ, ಪ್ರವಾಸಿ ಬೋಟ್‍ಗಳ ನಿಲುಗಡೆಗೆ ಬಳಕೆಯನ್ನೂ ಮಾಡಲಾಗಿತ್ತು. ಆದರೆ, ಬಳಿಕ ಜಟ್ಟಿಗೆ ದಡವನ್ನು ಸಂಪರ್ಕಿಸುತ್ತಿದ್ದ ಉಕ್ಕಿನ ಕಿರು ಸೇತುವೆಯನ್ನು (ಗ್ಯಾಂಗ್ ವೇ) ತೆಗೆದು ನದಿ ದಂಡೆಯಲ್ಲಿ ಇರಿಸಲಾಗಿತ್ತು.
ಹೀಗಾಗಿ, ಲಕ್ಷಾಂತರ ವೆಚ್ಚದ ತೇಲುವ ಜಟ್ಟಿ ಬಳಕೆಗೆ ಬಾರದೆ ಹಾಗೆಯೇ ಉಳಿದುಕೊಂಡಿದೆ. 20 ಮೀಟರ್ ಉದ್ದದ ಉಕ್ಕಿನ ಗ್ಯಾಂಗ್ ವೇ ದಡದಲ್ಲಿ ಅನಾಥ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದು, ಅದರ ಮೇಲೆ ಬಳ್ಳಿಗಳು ಬೆಳೆದು ನಿಂತಿವೆ.
‘ಸಿ.ಆರ್.ಝಡ್ ವಲಯದಲ್ಲಿ ಯಾವುದೇ ಶಾಶ್ವತ ಚಟುವಟಿಕೆ ಕೈಗೊಳ್ಳಬೇಕಿದ್ದರೂ ಪೂರ್ವಾನುಮತಿ ಪಡೆದುಕೊಳ್ಳಬೇಕು. ತೇಲುವ ಕಾಂಕ್ರೀಟ್ ಜಟ್ಟಿಗೆ ಯಾವುದೇ ಅನುಮತಿ ಪಡೆದಿರಲಿಲ್ಲ. ಸಮೀಪದಲ್ಲಿ ಇನ್ನೊಂದು ಜಟ್ಟಿ ನಿರ್ಮಿಸಲು ಅನುಮತಿ ಕೇಳಿದಾಗ ಹಿಂದಿನ ಜಟ್ಟಿಗೆ ಅನುಮತಿ ಪಡೆಯದಿರುವುದು ಗಮನಕ್ಕೆ ಬಂತು. ಅನುಮತಿ ದೊರೆಯುವವರೆಗೂ ಜಟ್ಟಿ ಬಳಕೆ ಮಾಡದಂತೆ ಸೂಚನೆ ನೀಡಲಾಗಿತ್ತು’ ಎಂಬುದಾಗಿ ಸಿ.ಆರ್.ಝಡ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
‘ಪ್ರವಾಸೋದ್ಯಮದ ಉದ್ದೇಶಕ್ಕೆ ಸಾಗರಮಾಲಾ ಯೋಜನೆ ಅಡಿಯಲ್ಲಿ ಜಿಲ್ಲೆಯ ನಾಲ್ಕು ಬೇರೆ ಬೇರೆ ಸ್ಥಳದಲ್ಲಿ ತೇಲುವ ಕಾಂಕ್ರೀಟ್ ಜಟ್ಟಿ ನಿರ್ಮಿಸಲಾಗುತ್ತಿದೆ. ಮೊದಲ ಜಟ್ಟಿಯನ್ನು ಪ್ರಾಯೋಗಿಕವಾಗಿ ಸದಾಶಿವಗಡದ ಗುಡ್ಡದ ಬಳಿ ಅಳವಡಿಸಲಾಗಿತ್ತು. ಕಾಳಿದ್ವೀಪದಲ್ಲಿ ಇನ್ನೊಂದು ಜಟ್ಟಿ ಅಳವಡಿಕೆ ಆಗಲಿದೆ. ಎರಡೂ ಜಟ್ಟಿ ಸ್ಥಾಪನೆಗೆ ಸಿ.ಆರ್.ಝಡ್ ಅನುಮತಿಗೆ ಅರ್ಜಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ಬಳಿಕ ಎರಡೂ ಜಟ್ಟಿಯು ಕಾರ್ಯಾರಂಭಿಸಲಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ (ಇಇ) ಎಂ.ವಿ.ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ತೇಲುವ ಕಾಂಕ್ರೀಟ್ ಜಟ್ಟಿಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಸಿ.ಆರ್.ಝಡ್ ಅನುಮತಿ ಸಿಕ್ಕ ಬಳಿಕ ಅದನ್ನು ಬಳಕೆಗೆ ನೀಡಲಾಗುತ್ತದೆಎಂ.ವಿ.ಪ್ರಸಾದ್ ಬಂದರು ಜಲಸಾರಿಗೆ ಮಂಡಳಿಯ ಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.