ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಡೆಂಗಿ ಪ್ರಕರಣ | ಕುಮಟಾದಲ್ಲಿ ಕಟ್ಟೆಚ್ಚರ: ಗಡಿ ಭಾಗದಲ್ಲಿ ಲಾರ್ವಾ ಸರ್ವೆ ಚುರುಕು

Published 7 ಜುಲೈ 2024, 6:13 IST
Last Updated 7 ಜುಲೈ 2024, 6:13 IST
ಅಕ್ಷರ ಗಾತ್ರ

ಕುಮಟಾ: ನೆರೆಯ ಅಂಕೋಲಾ ತಾಲ್ಲೂಕಿನಲ್ಲಿ ಹೆಚ್ಚಾಗಿರುವ ಡೆಂಗಿ ಪ್ರಕರಣಗಳಿಂದ ಮುನ್ನೆಚ್ಚರಿಕೆ ಕ್ರಮ ಬಿಗುಗೊಳಿಸಿರುವ ಆರೋಗ್ಯ ಇಲಾಖೆಯು ತಾಲ್ಲೂಕಿನ ಅಂಕೋಲಾ ಗಡಿಯ ಪ್ರದೇಶಗಳಲ್ಲಿ ಸೊಳ್ಳೆ ಮೊಟ್ಟೆ ನಾಶಪಡಿಸುವ ಲಾರ್ವಾ ಸರ್ವೆ ಕಾರ್ಯ ಚುರುಕುಗೊಳಿಸಿದೆ.

ತಾಲ್ಲೂಕಿನಲ್ಲಿ ಸದ್ಯ ಡೆಂಗಿ ಪೀಡಿತ ಒಬ್ಬ ವ್ಯಕ್ತಿ ಮಾತ್ರ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಟಾ-ಅಂಕೋಲಾ ತಾಲ್ಲೂಕಿನ ಗಡಿ ಭಾಗಗಳಾದ ಗಂಗಾವಳಿ, ಮಾದನಗೇರಿ, ಹಿರೇಗುತ್ತಿಗಳಲ್ಲಿ, ಗೋಕರ್ಣ, ನಾಡುಮಾಸ್ಕೇರಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಸೊಳ್ಳೆ ಮೊಟ್ಟೆ ನಾಶಗೊಳಿಸುವ ಲಾರ್ವಾ ಸರ್ವೆ ಚುರುಕುಗೊಳಿಸಿದ್ದಾರೆ.

‘ಎಳನೀರು ಚಿಪ್ಪು, ಹೂವಿನ ಕುಂಡ, ನೀರಿನ ಹೊಂಡ ಮುಂತಾದೆಡೆ ಉತ್ಪತ್ತಿಯಾಗುವ ಶುದ್ಧ ನೀರು ಸೊಳ್ಳೆಯ ಮೊಟ್ಟೆಗಳನ್ನು ನಾಶಪಡಿಸುವುದಕ್ಕಿಂತ ಬೇರೆ ಯಾವುದೇ ಕ್ರಮದಿಂದಲೂ ಡೆಂಗಿ ಪರಿಣಾಮಕಾರಿ ತಡೆ ಸಾಧ್ಯವಿಲ್ಲವಾಗಿದೆ. ರಾಸಾಯನಿಕ ಮಿಶ್ರಿತ ಹೊಗೆ ಹೊರಹೊಮ್ಮಿಸುವುದರಿಂದ (ಫಾಗಿಂಗ್) ಸೊಳ್ಳೆ ಬೇರೆಡೆ ಹಾರಿ ಹೋಗಿ ಬಚಾವಾಗುತ್ತವೆ’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ.

‘ಜನವರಿಯಿಂದ ಜೂನ್‍ವರೆಗೆ ಅಂಕೋಲಾ ತಾಲ್ಲೂಕಿನಲ್ಲಿ ಸುಮಾರು 60 ಡೆಂಗಿ ಪ್ರಕರಣಗಳು ಪತ್ತೆಯಾದರೆ, ಕುಮಟಾದಲ್ಲಿ ಸುಮಾರು 12 ಪ್ರಕರಣಗಳು ಗುರುತಿಸಲ್ಪಟ್ಟಿವೆ. ಬಹುತೇಕ ಪ್ರಕರಣಗಳ ಪೈಕಿ ದೂರದ ನಗರಗಳಿಂದ ಬಂದ ಪ್ರಕರಣಗಳು, ಆರೋಗ್ಯದ ಬೇರೆ ಸಮಸ್ಯೆಗಳಿಗಾಗಿ ದೊಡ್ಡ ಆಸ್ಪತ್ರೆಗೆ ಹೋದಾಗ ಪತ್ತೆಯಾದ ಡೆಂಗಿ ಪ್ರಕರಣಗಳು ಹೆಚ್ಚು’ ಎಂದರು.

‘ಆರು ತಿಂಗಳಲ್ಲಿ ತಾಲ್ಲೂಕಿನ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾಸ್ಪತ್ರೆಗೆ ಕಳಿಸಿದ 195 ಜನರ ಜ್ವರ ಪೀಡಿತರ ರಕ್ತ ಮಾದರಿಗಳಲ್ಲಿ ಒಂದು ಡೆಂಗಿ ಪ್ರಕರಣವೂ ಪತ್ತೆಯಾಗಿಲ್ಲ. ಮನೆಯಲ್ಲಿದ್ದ ಡೆಂಗಿ ಪೀಡಿತರಿಗೆ ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದರೆ ಮಾತ್ರ ಸೋಂಕು ತಗಲುತ್ತದೆ. ಸೋಂಕಿತರು ಹೆಚ್ಚಿನ ಸಮಯ ಕನಿಷ್ಠ ಒಂದು ವಾರ ಸೊಳ್ಳೆ ಪರದೆಯೊಳಗೆ ಇರುವಂತೆ ಸೂಚಿಸಲಾಗುತ್ತದೆ’ ಎಂದರು.

‘ಪಟ್ಟಣದಲ್ಲಿ ವಿವಿಧೆಡೆ ಕಳೆದ ಎರಡು ದಿನಗಳಿಂದ ಫಾಗಿಂಗ್ ಆರಂಭಿಸಲಾಗಿದೆ. ನೀರು ನಿಲ್ಲುವ ಕಡೆ ಸುಟ್ಟ ಎಣ್ಣೆಯನ್ನು ಸಿಂಪಡಿಸಿ ಸೊಳ್ಳೆ ಮೊಟ್ಟೆ ನಾಶಪಡಿಸುವ ಕಾರ್ಯ ನಡೆಸಲಾಗುತ್ತಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಮಾಹಿತಿ ನೀಡಿದರು.

ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಲಾರ್ವಾ ಸರ್ವೆಗೆ ಹೋದಾಗ ಸೊಳ್ಳೆ ಮೊಟ್ಟೆ ನಾಶ ಮಾಡುವ ಪ್ರಕ್ರಿಯೆಯಲ್ಲಿ ಮನೆಯ ಸದಸ್ಯರನ್ನು ಭಾಗಿಯಾಗಿಸಿ ಅವರಿಗೆ ತಿಳಿವಳಿಕೆ ನೀಡುತ್ತಿದ್ದಾರೆ
ಡಾ.ಆಜ್ಞಾ ನಾಯಕ ತಾಲ್ಲೂಕು ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT