ಕಾರವಾರ: ಗ್ರಾಹಕರಿಂದ ಹೆಚ್ಚು ಬೇಡಿಕೆ ಇರುವ, ಅಪ್ಪಟ ಸಾವಯವ ಪದ್ಧತಿಯ ಕಡವಾಡ ತರಕಾರಿಗೆ ಈ ಬಾರಿ ಅತಿವೃಷ್ಟಿ ಅತಿಯಾಗಿ ಬಾಧಿಸಿದೆ. ಇದರ ಪರಿಣಾಮ ಶ್ರಾವಣದಲ್ಲಿ ನಗರ ಸೇರಿದಂತೆ ನೆರೆಯ ಗೋವಾ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದ ತರಕಾರಿ ಪ್ರಮಾಣ ಇಳಿಕೆಯಾಗಿದೆ.
ನಗರದಿಂದ ಸುಮಾರು ಎಂಟು ಕಿ.ಮೀ. ದೂರದಲ್ಲಿರುವ ಕಡವಾಡ ಗ್ರಾಮವು ಸಾವಯವ ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ. ಅಲ್ಲಿನ 30ಕ್ಕೂ ಹೆಚ್ಚು ಕುಟುಂಬಗಳಿಗೆ ಮಳೆಗಾಲದಲ್ಲಿ ಬೆಳೆಯುವ ತರಕಾರಿ ಬೆಳೆ ಆಧಾರವಾಗಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ತರಕಾರಿ ಗಿಡ, ಬಳ್ಳಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತಿರುವ ಜತೆಗೆ ಎಲೆಗಳು ಕೊಳೆತಿರುವುದು ರೈತರಿಗೆ ಚಿಂತೆ ತಂದಿದೆ.
ಅಲ್ಪ ಪ್ರಮಾಣದ ತರಕಾರಿ ಮಾತ್ರ ಸದ್ಯ ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ತರಕಾರಿ ದೊರೆಯುತ್ತಿಲ್ಲ ಎಂಬುದು ಗ್ರಾಹಕರ ದೂರು. ಸಾವಿರಾರು ರೂಪಾಯಿ ಖರ್ಚು ಮಾಡಿ ಭೂಮಿ ಹದಗೊಳಿಸಿ, ಬೀಜ ಬಿತ್ತನೆ ಮಾಡಿದ್ದರೂ ಭಾರಿ ಮಳೆಗೆ ಬಳ್ಳಿಯಲ್ಲಿ ಹೂ ಬಿಡುತ್ತಿಲ್ಲ ಎಂಬುದು ರೈತರ ಅಳಲು.
‘ಒಂದೆರಡು ಕುಟುಂಬಗಳು ಮಾತ್ರ ಸ್ವಂತ ಜಮೀನಿನಲ್ಲಿ ತರಕಾರಿ ಬೇಸಾಯ ಮಾಡಿದರೆ, ಉಳಿದವರು ಬೇರೆಯವರ ಜಮೀನು ಗೇಣಿ ಪಡೆದು ಬೇಸಾಯದಲ್ಲಿ ತೊಡಗುತ್ತೇವೆ. ಬೆಂಡೆಕಾಯಿ, ಹೀರೆಕಾಯಿ, ಸೋರೆಕಾಯಿ, ಪಡುವಲಕಾಯಿ, ಬದನೆಕಾಯಿ, ಅವರೆಕಾಯಿ, ಸೌತೆಕಾಯಿ, ಹಾಗಲಕಾಯಿ ಬೆಳೆಯುತ್ತೇವೆ. ಮಳೆ ಸತತವಾಗಿ ಸುರಿದ ಕಾರಣ ಬಳ್ಳಿಗಳೇ ಬೆಳವಣಿಗೆ ಕಂಡಿಲ್ಲ. ಹೂ ಬಿಟ್ಟರೂ ಅವು ಉದುರಿ ಹೋಗುತ್ತಿದ್ದು, ಕಾಯಿಗಳು ನಿಲ್ಲುತ್ತಿಲ್ಲ’ ಎಂದು ಸಮಸ್ಯೆ ವಿವರಿಸುತ್ತಾರೆ ಬೇಬಿ ಗುನಗಿ.
‘ಎಂಟು ಗುಂಟೆ ಜಾಗದಲ್ಲಿ ತರಕಾರಿ ಬೆಳೆಯಲು ₹15 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಲಾಗಿದೆ. ನಿರೀಕ್ಷೆಯಂತೆ ಫಸಲು ಬಂದಿದ್ದರೆ ಇಷ್ಟರಲ್ಲಾಗಲೆ ಹತ್ತಕ್ಕೂ ಹೆಚ್ಚು ಬುಟ್ಟಿ ಹೀರೆಕಾಯಿ ಮಾರಾಟವಾಗಬೇಕಿತ್ತು. ಈವರೆಗೆ ಒಂದು ಬುಟ್ಟಿಯಷ್ಟೂ ಫಸಲು ಸಿಕ್ಕಿಲ್ಲ’ ಎಂದು ತುಳಸಿ ಗುನಗಿ ಅಳಲು ತೋಡಿಕೊಂಡರು.
ಮಳೆ ನೀರು ಇಂಗದ ಪರಿಣಾಮ ತಗ್ಗು ಪ್ರದೇಶದ ಗದ್ದೆಗಳಲ್ಲಿ ತರಕಾರಿ ಬೆಳೆಗೆ ಹಾನಿಯಾಗುತ್ತಿದೆ. ನೀರು ಹರಿದು ಹೋಗುವಂತೆ ಮಾಡಬೇಕು. ಅಂತರದಲ್ಲಿ ಬಳ್ಳಿ ನೆಟ್ಟರೆ ಸೂಕ್ತ.ಸುನೀಲ ಅಂಕೋಲೇಕರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.