ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಾನುಭವಿಗೆ ಮತ್ತೆ ಪ್ರಯೋಜನದ ಶಂಕೆ: ಸಂಸದ ಅನಂತಕುಮಾರ ಹೆಗಡೆ

ಜಲ ನಿರ್ಮಲ, ಜಲ ಜೀವನ ಅಭಿಯಾನದ ಮಾಹಿತಿ ಪರಿಶೀಲಿಸಲು ಸಂಸದರ ಸೂಚನೆ
Last Updated 18 ಜನವರಿ 2021, 14:24 IST
ಅಕ್ಷರ ಗಾತ್ರ

ಕಾರವಾರ: ‘ಜಲ ನಿರ್ಮಲ ಮತ್ತು ಜಲ ಜೀವನ ಅಭಿಯಾನ, ಈ ಎರಡೂ ಯೋಜನೆಗಳಲ್ಲಿ ಒಮ್ಮೆ ಕೆಲಸ ಮಾಡಿದಲ್ಲೇ ಮತ್ತೆ ಮತ್ತೆ ಕೆಲಸ ಮಾಡುವ ಅನುಮಾನವಿದೆ. ಎರಡೂ ಯೋಜನೆಗಳಲ್ಲಿ ಫಲಾನುಭವಿಗಳ ಮಾಹಿತಿಯನ್ನು ನೀಡಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಅಭಿವೃದ್ಧಿ ಉಸ್ತುವಾರಿ ಮತ್ತು ಸಮನ್ವಯ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘2016ರ ವರೆಗೆ ಜಲ ನಿರ್ಮಲ ಯೋಜನೆಯಡಿ ನೀರಿನ ಸಂಪರ್ಕ ಪಡೆದವರೇ ಜಲ ಜೀವನ ಅಭಿಯಾನದಲ್ಲೂ ಫಲಾನುಭವಿಗಳಾಗಿದ್ದಾರೆಯೇ? ನೀವು ನೀಡಿರುವ ಮಾಹಿತಿಯನ್ನು ನೋಡಿದರೆ ಈ ಅನುಮಾನ ಬರುತ್ತದೆ’ ಎಂದರು.

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಕಾರ್ಯಕ್ರಮದ ಅಧಿಕಾರಿ ಕಿರಣ ಚಳ್ಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ ಈ ಬಗ್ಗೆ ವಿವರಣೆ ನೀಡಿದರು. ಆದರೆ, ಸಂಸದರು ಅನುಮಾನ ವ್ಯಕ್ತಪಡಿಸಿದರು.

‘ನಾವು ನೀಡುವ ಮಾಹಿತಿಯನ್ನು ಶಾಸಕರು, ದಿಶಾ ಸಮಿತಿ ಸದಸ್ಯರು ಪರಿಶೀಲಿಸಬೇಕು. ಒಂದು ವೇಳೆ, ಎರಡು ಯೋಜನೆಗಳ ಪ್ರಯೋಜನ ಪಡೆದವರಿದ್ದರೆ ಮಾಹಿತಿ ಲಭಿಸುತ್ತದೆ. ತಪ್ಪಾಗಿದ್ದರೆ ತನಿಖೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ’ ಎಂದು ಎಚ್ಚರಿಕೆ ನೀಡಿದರು.

‘ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಹಾಗೂ ವಿಳಂಬ ಧೋರಣೆಯಿಂದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳು ಸಹ ಪೂರ್ಣವಾಗಿಲ್ಲ. ಪ್ರತಿ ಇಲಾಖೆಯು ಶೇ 100 ಪ್ರಗತಿ ಸಾಧಿಸಿದ ಅಂಕಿ ಅಂಶಗಳ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ‘ಪ್ರಗತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳಿಗೆ ಯೋಜನೆಗಳ ಅನುಷ್ಠಾನದ ಮಾಹಿತಿಯನ್ನು ನೀಡುವುದು ಅಧಿಕಾರಿಗಳ ಜವಾಬ್ದಾರಿ. ಮುಂದಿನ ಸಭೆಯಲ್ಲಿ ಸೂಕ್ತ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

‘ಆರು ತಿಂಗಳಾದರೂ ಪ್ರಗತಿಯಿಲ್ಲ’:

ಅಂಗವಿಕಲರು ಗುರುತಿನ ಚೀಟಿ ಪಡೆಯಲು ಇನ್ನೂ ಕಾರವಾರಕ್ಕೇ ಬರುವ ಬಗ್ಗೆ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು. ಅಪೂರ್ಣ ಮಾಹಿತಿ, ಅಂಗವಿಕಲರ ಅಭಿವೃದ್ಧಿ ಅಧಿಕಾರಿ ಸಭೆಗೆ ಗೈರು ಹಾಜರಾಗಿ ಹಳಿಯಾಳಕ್ಕೆ ಹೋಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

‘ತಾಲ್ಲೂಕು ಕೇಂದ್ರಗಳಲ್ಲೇ ವ್ಯವಸ್ಥೆ ಮಾಡುವಂತೆ ಆರು ತಿಂಗಳ ಹಿಂದೆ ನಡೆದ ದಿಶಾ ಸಭೆಯಲ್ಲೇ ಸೂಚಿಸಲಾಗಿತ್ತು. ಆದರೆ, ಇನ್ನೂ ಪ್ರಗತಿಯಾಗಿಲ್ಲ. ಬೇಜವಾಬ್ದಾರಿ ಉತ್ತರ ಕೊಡಲು ಇಲ್ಲಿರಬೇಡಿ. ಅಧಿಕಾರಿಯನ್ನು ಸಭೆಗೆ ಕರೆಸಿ. ಮುಂದಿನ ಸಭೆಯೊಳಗೆ ಎಲ್ಲ 2,000 ಅಂಗವಿಕಲರಿಗೂ ಗುರುತಿನ ಚೀಟಿ ವಿತರಣೆಯಾಗಬೇಕು’ ಎಂದು ಇಲಾಖೆಯ ಪ್ರತಿನಿಧಿಗೆ ಸೂಚಿಸಿದರು.

ಗೈರು ಹಾಜರಾದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ ಅವರಿಗೆ ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT