ಸಿದ್ದಾಪುರ: ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಈ ಮೊದಲು ಭಾಗಶಃ ಹಾನಿಯಾದ ಮನೆಗೆ ₹4 ಸಾವಿರ ನೀಡಲಾಗುತ್ತಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ₹50 ಸಾವಿರಕ್ಕೆ ಹೆಚ್ಚಿಸಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪರಿಹಾರ ಹಾಗೂ ಮಂಜೂರಾತಿ ಪತ್ರ ಹಸ್ತಾಂತರಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 1 ಮನೆ ಸಂಪೂರ್ಣ ಹಾನಿಯಾಗಿದ್ದು, 3 ಮನೆಗಳಿಗೆ ತೀವ್ರ ಹಾನಿಯಾಗಿದೆ. 23 ಭಾಗಶಃ ಹಾನಿಯಾಗಿದ್ದು, ಪೂರ್ತಿ ಹಾನಿಯಾದ ಮನೆಗೆ ₹5 ಲಕ್ಷ ಪರಿಹಾರ, ಭಾಗಶಃ ಹಾನಿಯಾದ ಮನೆಗೆ ₹50 ಸಾವಿರ ಪರಿಹಾರವನ್ನು ಸರ್ಕಾರ ಘೋಷಿಸಿದೆ. ಈ ಮೊದಲು ಪೂರ್ಣ ಹಾನಿಯಾದ ಮನೆಗೆ ₹1.20 ಲಕ್ಷ ನೀಡಲಾಗುತಿತ್ತು. ಅದನ್ನು₹5 ಲಕ್ಷಕ್ಕೆ ಸೀಮಿತಗೊಳಿಸಿ ತಹಶೀಲ್ದಾರ್ ಖಾತೆಗೆ ಜಮಾ ಮಾಡಲಾಗಿದ್ದು, ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ ಎಂದರು.
ಸರ್ಕಾರ ಸಂತ್ರಸ್ತರಿಗೆ ಧೈರ್ಯ ತುಂಬಿ ನೊಂದವರ ಪರ ಇದೆ ಎನ್ನುವುದು ಸಾಬೀತಾಗಿದೆ. ಮನೆ ಯಜಮಾನಿಗೆ ₹2 ಸಾವಿರ ನೀಡುವ ಯೋಜನೆಗೆ ಸಂಬಂಧಿಸಿ ಯಾರು ಕೂಡ ತಮ್ಮ ತಾಯಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಇಒ ದೇವರಾಜ ಹಿತ್ತಲಕೊಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಐ.ಜಿ.ಕೊಣ್ಣೂರ, ಸಿಪಿಐ ಕುಮಾರ ಕೆ. ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.